ನಾಲ್ಕು ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಚನ್ನರಾಐಪಟ್ಟಣ ತಾಲ್ಲೂಕಿನ ನೂರನಕ್ಕಿ ಗ್ರಾಮದಲ್ಲಿ ನಡೆದಿದ್ದು, ವರದಕ್ಷಿಣೆ ಕಿರುಕುಳ ನೀಡಿ ಆಕೆಯ ಪತಿಯೇ ಹತ್ಯೆ ಮಾಡಿದ್ದಾನೆ ಎಂದು ಮೃತಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ನಯನ (೨೪) ಮೃತಪಟ್ಟಿರುವ ದುರ್ದೈವಿ. ಅಯ್ಯಪ್ಪ (೩೧) ಕೊಲೆ ಆರೋಪಿ. ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ನಯನ-ಅಯ್ಯಪ್ಪ ದಂಪತಿಗೆ ಈಗಾಗಲೇ ಗಂಡು ಮದುವಿದ್ದು, ದೊಡೇರಿ ಕಾವಲು ಗ್ರಾಮದವರಾದ ನಯನಾ ನಾಲ್ಕುವರೆ ತಿಂಗಳ ಗರ್ಭಿಣಿಯಾಗಿದ್ದರು. ಮದುವೆ ಆದಾಗಿನಿಂದ ವರದಕ್ಷಿಣೆ ತರುವಂತೆ ಆಕೆಗೆ ಅಯ್ಯಪ್ಪ ಪದೇಪದೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಇದೇ ವಿಚಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ನಯನಾ ದೂರು ನೀಡಿದ್ದರು.
ಇಷ್ಟೆಲ್ಲ ನಡೆದರೂ ಬುದ್ದಿ ಕಲಿಯದ ಅಯ್ಯಪ್ಪ ವರದಕ್ಷಿಣೆ ಹಣ ತರುವ ವಿಚಾರಕ್ಕೆ ಮತ್ತೆ ಜಗಳ ತೆಗೆದು ತಮ್ಮ ಮಗಳನ್ನು ಹೊಡೆದು ಸಾಯಿಸಿದ್ದಾನೆ ಎನ್ನುವುದು ಪೋಷಕರ ಆರೋಪವಾಗಿದೆ. ನಯನಾ ಮೃತಪಟ್ಟಿರುವ ವಿಚಾರ ತಿಳಿದೊಡನೆಯೇ ಪತಿ ಅಯ್ಯಪ್ಪ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.