Header Ads Widget

ಕಾಪು : ದೇವಸ್ಥಾನಗಳು ಕಲೆ, ವೇದ, ಉಪನಿಷತ್ತುಗಳ ಆಶ್ರಯತಾಣ : ಸಂಸದೆ ಕಂಗನಾ ರಣಾವತ್‌.

 

ಕಾಪು: ನಮ್ಮ ದೇಶ ದೇವಭೂಮಿಯಾಗಿದೆ. ಇಲ್ಲಿನ ಸಾವಿರಾರು ದೇವಸ್ಥಾನ, ಧಾರ್ಮಿಕ ಕೇಂದ್ರಗಳು ಪ್ರಾಚೀನ ಮತ್ತು ಐತಿಹಾಸಿಕ ಪರಂಪರೆಯನ್ನು ವಿಶ್ವಕ್ಕೆ ಸಾರುತ್ತಿವೆ. ಕಲೆ, ವೇದ, ಉಪನಿಷತ್ತುಗಳನ್ನು ಉಳಿಸಿ ಬೆಳೆಸುವ ಆಶ್ರಯ ತಾಣವಾಗಿವೆ. ಸನಾತನ ಹಿಂದೂ ಧರ್ಮ, ಭಾರತೀಯ ಪರಂಪರೆ, ಸಂಸ್ಕೃತಿ, ಸಂಸ್ಕಾರದ ಪುನರುತ್ಥಾನದ ಕೇಂದ್ರ ಗಳಾಗಿದ್ದು, ಪ್ರಾಚೀನ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಮಹತ್ವದ ಪಾತ್ರವನ್ನು ನಿರ್ವ ಹಿಸುತ್ತಿವೆ ಎಂದು ಬಾಲಿವುಡ್‌ ನಟಿ, ಸಂಸದೆ ಕಂಗನಾ ರಣಾವತ್‌ ಹೇಳಿದರು.


ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ 7ನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ವಿಖ್ಯಾತಾನಂದ ಶ್ರೀ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಕಾಪು ಮಾರಿಯಮ್ಮನ ಕ್ಷೇತ್ರವು ಸಮರ್ಪಕ, ಸಮಗ್ರ ಮತ್ತು ಸರ್ವಾಂಗ ಸುಂದರವಾಗಿ ಮೂಡಿಬಂದಿದೆ. ಇಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಾಡಿನ ಜನರ ಆಶಯ, ಆಶ್ರಯಗಳನ್ನು ಪೂರ್ಣಗೊಳಿಸುವ ಶ್ರದ್ಧಾ ಕೇಂದ್ರವಾಗಿ ಮೂಡಿಬರುವಂತಾಗಲಿ ಎಂದರು.


ಬಿ.ಎಲ್‌. ಸಂತೋಷ್‌ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ ಮಾತನಾಡಿ, ದೇಶದ ಮೂಲ ವೈಭವವನ್ನು ಪಡೆದುಕೊಳ್ಳುವಲ್ಲಿ ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಿದೆ. ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ಭಾರತವನ್ನು ಆಧ್ಯಾತ್ಮ ಮತ್ತು ಭಕ್ತಿಯೊಂದಿಗಿನ ಸಂಸ್ಕೃತಿಯು ಎತ್ತಿ ಹಿಡಿದಿದೆ. ನಾವು ರಾಮ, ಕುಂಭವೆಂಬ ಭಕ್ತಿಯ ಜತೆಗೆ ಅಮ್ಮನಿಗೂ ಶರಣಾಗೋಣ ಎಂದರು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಎಂ.ಆರ್‌.ಜಿ. ಗ್ರೂಪ್ಸ್‌ ಸಿಎಂಡಿ ಡಾ| ಕೆ. ಪ್ರಕಾಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾ| ಬ್ರಿಜೇಶ್‌ ಚೌಟ, ಪರಿಷತ್‌ ಸದಸ್ಯ ಡಾ| ಧನಂಜಯ ಸರ್ಜಿ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವರಾದ ರಮಾನಾಥ ರೈ, ಪ್ರಮೋದ್‌ ಮಧ್ವರಾಜ್‌, ಕಾಪು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಕ್ರಂ ಕಾಪು, ನ್ಯಾಯವಾದಿ ಮಹೇಶ್‌ ಕೋಟ್ಯಾನ್‌ ಮುಂಬಯಿ, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್‌ ಮಲ್ಪೆ, ಪ್ರೇಮನಾಥ್‌ ಶೆಟ್ಟಿ ದುಬಾೖ, ಸುಂದರ್‌ ಶೆಟ್ಟಿ ಅಬುಧಾಬಿ ಅತಿಥಿಗಳಾಗಿದ್ದರು.


ದಾನಿಗಳಾದ ಮಹೇಶ್‌ ಕೋಟ್ಯಾನ್‌ ಮುಂಬಯಿ, ಹರೀಶ್‌ ಪಿ. ಶೆಟ್ಟಿ ಗುರ್ಮೆ ಅವರನ್ನು ಸಮ್ಮಾನಿಸಲಾಯಿತು. ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಮಾಧವ ಆರ್‌. ಪಾಲನ್‌, ದೇವಿಪ್ರಸಾದ್‌ ಶೆಟ್ಟಿ ಬೆಳಪು, ಕಾಪು ದಿವಾಕರ ಶೆಟ್ಟಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ ಉಪಸ್ಥಿತರಿದ್ದರು.


ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಅಶೋಕ್‌ ಪಕಳ, ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಇಂದು ಶ್ವೇತಾಶ್ವಪೂಜೆ, ಉಚ್ಚಂಗಿ ದೇವಿಗೆ ಬ್ರಹ್ಮಕಲಶಾಭಿಷೇಕ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸ್ವರ್ಣ ಪೀಠದಲ್ಲಿ ಪ್ರತಿಷ್ಠಾಪನೆಗೊಂಡಿರುವ ಉಚ್ಚಂಗಿ ದೇವಿಗೆ ಮಾ. 4ರಂದು ಬೆಳಗ್ಗೆ 8 ಗಂಟೆಗೆ ಬ್ರಹ್ಮಕಲಶಾಭಿಷೆೇಕ ನಡೆಯಲಿದೆ. ಬಳಿಕ ವಿವಿಧ ಯಾಗ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಸಾಕ್ಷಾತ್‌ ಗಂಗಾಭಾರಥೀ ಪೂಜನಮ್‌ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 10 ಗಂಟೆಗೆ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಡೆ ಭೇಟಿ ನೀಡುವರು.


ಹಸುರು ಸೀರೆಯುಟ್ಟಿದ್ದ ಕಂಗನಾ ಹೂ ಮುಡಿದು ಅಪ್ಪಟ ಭಾರತೀಯ ನಾರಿಯಂತೆ ಧಾರ್ಮಿಕ ವೇದಿಕೆಗೆ ಬಂದು ಕಾರ್ಯಕ್ರಮದ ಕಳೆ ಹೆಚ್ಚಿಸಿದರು. ಬಳಿಕ ಮಾರಿಗುಡಿಗೆ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿದರು. ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ, ಉಚ್ಚಂಗಿ ಸ್ವರ್ಣ ಪೀಠವನ್ನು ಕಂಡು ಪುಳಕಿತಗೊಂಡರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ದೇವರ ಪ್ರಸಾದ ನೀಡಿ ಗೌರವಿಸಿದರು. ಗೌರವಾಧ್ಯಕ್ಷ ರವಿ ಸುಂದರ್‌ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.