ದಿನಾಂಕ 17.4.2025 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಂತಹ ಸಿ. ಇ. ಟಿ. ಪರೀಕ್ಷಾ ವೇಳೆಯಲ್ಲಿ ಪರೀಕ್ಷೆಯನ್ನು ಬರೆಯಲು ಬಂದಂತಹ ಬ್ರಾಹ್ಮಣ ಸಮಾಜದ ಮುಗ್ಧ ಬಾಲಕ ನೋರ್ವನ ಮೂರು ಎಳೆಗಳುಳ್ಳ ಬ್ರಾಹ್ಮಣ್ಯದ ತೇಜಸ್ಸನ್ನು ವೃದ್ಧಿಸುವ ಪರಮ ಪವಿತ್ರವಾದ ಯಜ್ಞೋಪವೀತವನ್ನು ತೆಗೆಸಿ ಅದನ್ನು ಛಿದ್ರವಾಗಿಸಿದ ಧಾರ್ಮಿಕ ವಿರುದ್ಧವಾದ ಅಮಾನವೀಯ ಹೇಯ ಕೃತ್ಯವನ್ನು ಗೈದ ಒಂದು ದುರ್ಘಟನೆ ಸಂಭವಿಸಿದ್ದು ಬ್ರಾಹ್ಮಣ ಸಮಾಜದ ಎಲ್ಲ ಬಾಂಧವರಿಗೆ ಅತ್ಯಂತ ಆಘಾತವನ್ನು ನೀಡಿದೆ ಮತ್ತು ಇಡೀ ಸಮಾಜವೇ ಹೇಯ ಕೃತ್ಯವನ್ನು ಬಲವಾಗಿ ಖಂಡಿಸುತ್ತದೆ. ಇದು ಬ್ರಾಹ್ಮಣರು ಮತ್ತು ಇನ್ನಿತರ ಜನಿವಾರಧಾರಿಗಳ ತ್ರಿಕರಣ ಶುದ್ಧ ಗೈಯುವ ಪವಿತ್ರವಾದ ಬ್ರಹ್ಮ ಸೂತ್ರ. ವಟುಗಳಲ್ಲಿ ಸಾತ್ವಿಕ ಧಾರ್ಮಿಕ ಶೈಕ್ಷಣಿಕ ಮನೋಭಾವವನ್ನು ಹುಟ್ಟುಹಾಕುವ ಮಂಗಲ ದಾರ.
ಈವರೆಗೆ ಆಗದೆ ಇದ್ದ ಈ ಹೀನ ಕೃತ್ಯ ಇದೀಗ ಆಗಲು ಕಾರಣವೇನು? ಇದರ ಹಿಂದೆ ಯಾರ ದುರುದ್ದೇಶವಿದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಇತ್ತೀಚೆಗೆ ಇಂತಹ ತಾಮಸಿಕ ಮನೋವೃತ್ತಿ ನಿರ್ಮಾಣ ವಾಗುತ್ತಿರುವುದು ದೇಶದ ಒಳತಿಗೆ ಕೆಡುಕಾಗ ಬಹುದು. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮಾಜದ ಮೇಲೆ ತೋರುತ್ತಿರುವ ಕ್ರೌರ್ಯ, ದಬ್ಬಾಳಿಕೆ ಮಿತಿ ಮೀರುತ್ತಿದೆ. ಬಗ್ಗಿ ನಡೆದವನಿಗೆ ಗುದ್ದು ಜಾಸ್ತಿ ಎಂಬ ಪರಿಸ್ಥಿತಿ, ವಾತಾವರಣ ನಿರ್ಮಾಣವಾಗುತ್ತಿದೆ. ಬ್ರಾಹ್ಮಣ್ಯವನ್ನು ಕೆಣಕಬೇಡಿ...ಮಿತಿ ಮೀರಿದರೆ ಹೂವು ಕೂಡಾ ಹಾವಾದೀತು.. ಸರಕಾರ ಇನ್ನಾದರೂ ಎಚ್ಚೆತ್ತು ಇಂತಹ ಅವಘಡಗಳು ಪುನರ್ಘಟಿಸದಂತೆ ನೋಡಿಕೊಂಡರೆ ಒಳ್ಳೆಯದು ಮತ್ತು ಸಮಾಜ ಸುಭಿಕ್ಷೆಯತ್ತ ಸಾಗಬಹುದು. ಹಾಗಾಗಿ ಈ ಕೂಡಲೇ ತಪ್ಪಿತಸ್ಥರಿಗೆ ಮತ್ತು ಆ ಹೀನ ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ನೀಡುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಅಂತಹ ವ್ಯಕ್ತಿಗಳ ಮೇಲೆ ನಿಗಾ ಇರಿಸಬೇಕು ಮತ್ತು ಮುಂದೆ ಇಂತಹ ಘಟನೆಗಳು ಮತ್ತೊಮ್ಮೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಸರಕಾರವನ್ನು ಕೋರಿದೆ.