ಉಡುಪಿ : ಯಕ್ಷಗಾನ ಕಲೆ ಒಂದು ವಿಶ್ವವಿದ್ಯಾಲಯವಿದ್ದಂತೆ. ಈ ಕಲೆಯ ಆಳ, ವಿಸ್ತಾರ, ಸೊಬಗನ್ನು ಯಕ್ಷಾಸಕ್ತರಿಗೆ ಮುಟ್ಟಿಸಲು ವಿವಿಧ ಕಡೆಗಳಲ್ಲಿ ಯಕ್ಷಗಾನ ಕಾರ್ಯಾಗಾರಗಳನ್ನು ಅಕಾಡೆಮಿ ಹಮ್ಮಿಕೊಳ್ಳುವುದರ ಮೂಲಕ ಕಲೆಯ ಬೆಳೆವಣಿಗೆಗೆ ಪ್ರೋತ್ಸಾಹಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಭಾನುವಾರ ಮಂಗಳೂರು ಉಲ್ಲಾಳದ ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಹಮ್ಮಿಕೊಂಡ 'ತೆಂಕುತಿಟ್ಟು ಯಕ್ಷಗಾನ ಮುಖವರ್ಣಿಕೆ ಮತ್ತು ವೇಷಭೂಷಣ ಕಟ್ಟುವ ಬಗ್ಗೆ ಕಾರ್ಯಾಗಾರ, ವಿಚಾರಗೋಷ್ಠಿ, ಮಹಿಳಾ ಯಕ್ಷಗಾನ ತಾಳಮದ್ದಲೆ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖಕ್ಕೆ ಬಣ್ಣ ಹಚ್ಚಿ, ಕುಣಿದರಷ್ಟೇ ಯಕ್ಷಗಾನ ಕಲಿತಂತಾಗುವುದಿಲ್ಲ. ಇದರಲ್ಲಿರುವ ಪ್ರಕಾರಗಳು, ತಿಟ್ಟುಗಳು, ಮುಖವರ್ಣಿಕೆ, ವೇಷಭೂಷಣ, ಭಾಗವತಿಕೆ, ಹಿಮ್ಮೇಳ ಇತ್ಯಾದಿಗಳ ಬಗ್ಗೆ ಕಲಾವಿದರು ಅರಿವು ಹೊಂದಿದರೆ ಮಾತ್ರ, ಅವರು ಪ್ರಬುದ್ಧ ಕಲಾವಿದರಾಗಿ ಹೊರಹೊಮ್ಮಲು ಸಾಧ್ಯ. ಯಕ್ಷಗಾನ ಕೇವಲ ಮನೋರಂಜನೆ ಕಲೆ ಎನ್ನುವದಕ್ಕಿಂತಲೂ ಇದು ನಮ್ಮ ಬದುಕನ್ನು ಅರಳಿಸುವ, ಬದುಕಿನ ಸೌರಭ, ಸೌರಂಭವನ್ನು ಹೆಚ್ಚಿಸುವ ಕಲೆ ಎಂದೇ ಪರಿಗಣಿಸಬೇಕು ಎಂದು ಅವರು ಹೇಳಿದರು.
ರಾಜ್ಯ ಸರಕಾರ ಯಕ್ಷಗಾನ ಅಕಾಡೆಮಿಗೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದೆ. ಈ ಅನುದಾನ ಅರ್ಹ ಕಾರ್ಯಕ್ರಮಗಳಿಗೆ, ಕಲಾವಿದರ ಅಭ್ಯುದಯಕ್ಕೆ ವಿನಿಯೋಗವಾಗಬೇಕು ಎಂಬುದೇ ಅಧ್ಯಕ್ಷನಾದ ನನ್ನ ಹೆಬ್ಬಯಕೆ. ಹೀಗಾಗಿ ಯಕ್ಷಗಾನ ಕಾರ್ಯಾಗಾರಗಳಿಗೆ, ಮಕ್ಕಳ ಯಕ್ಷಗಾನ ಕಾರ್ಯಕ್ರಮಗಳಿಗೆ ಅಕಾಡೆಮಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದ ಅವರು ಇಂದು ಯಕ್ಷಗಾನದ ವರ್ತಮಾನದ ಸ್ಥಿತಿಗತಿ ಬಗ್ಗೆ ಎಲ್ಲೆಡೆ ಚರ್ಚೆ, ಚಿಂತನೆಗಳು ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಸಾಕಷ್ಟು ಸಂಖ್ಯೆಯಲ್ಲಿ ಮಹಳೆಯರು ಯಕ್ಷಗಾನ ಕಲಿಯಲು ಮುಂದಾಗುತ್ತಿರುವುದು ಸಂತೋಷ ತಂದಿದೆ. ನಮ್ಮಲ್ಲಿ ಮಹಿಳಾ ಯಕ್ಷಗಾನ ತಂಡಗಳು ಪ್ರಾರಂಭವಾಗಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಯಕ್ಷಗಾನ ಕಲಾರಂಗದ ಮೂಲಕ ಯಕ್ಷ ಶಿಕ್ಷಣ ಟ್ರಸ್ಟ್ ಆರಂಭಿಸಿ ಇದೀಗ 90ಕ್ಕೂ ಅಧಿಕ ಪ್ರೌಢಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸಲಾಗುತ್ತಿದೆ. 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಲೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಆಸಕ್ತಿಯ ವಿಚಾರವೆಂದರೆ ಹೆಣ್ಮಕ್ಕಳೇ ಬಹು ಸಂಖ್ಯೆಯಲ್ಲಿ ಯಕ್ಷಗಾನವನ್ನು ಕಲಿಯಲು ಮುಂದೆ ಬಂದಿದ್ದಾರೆ. ಅದರಲ್ಲೂ ಉತ್ತರ ಕನ್ನಡ, ಹಾವೇರಿ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಮಕ್ಕಳು ಬಹು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಉತ್ತರ ಕರ್ನಾಟಕದಲ್ಲೂ ಯಕ್ಷಗಾನ ತಂಡಗಳು ಹುಟ್ಟಿದರೆ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ ಎಂದರು.
ಮಕ್ಕಳು ಯಕ್ಷಗಾನವನ್ನು ಕಲಿತರೆ ಅವರ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಬಹುದು ಎಂಬ ಆತಂಕ ಹೆತ್ತವರಿಗೆ ಬೇಡ. ಯಕ್ಷ ಶಿಕ್ಷಣವನ್ನು ಪ್ರಾರಂಭಿಸಿದಾಗ ಇಂತಹುದೇ ಆತಂಕ ಎದುರಾಗಿತ್ತು. ಆದರೆ ಯಕ್ಷಗಾನಕ್ಕೆ ಸೇರಿದ ಮಕ್ಕಳು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿರುವುದನ್ನು ಕಂಡಾಗ ಈ ಕಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಪೂರಕವಾಗಿದೆ ಎಂಬುದು ದೃಢಪಟ್ಟಿದೆ. ಯಕ್ಷಗಾನ ಕಲಿತ ಮಕ್ಕಳು ಶುದ್ಧ ಕನ್ನಡವನ್ನು ನಿರರ್ಗಳವಾಗಿ ಮಾತನಾಡಬಲ್ಲರು. ವೇದಿಕೆ ಏರಿ ಎಲ್ಲರ ಮುಂದೆ ಉತ್ತಮ ಪ್ರದರ್ಶನವನ್ನು ನೀಡಬಲ್ಲರು. ಕುಣಿತದಿಂದ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಒಟ್ಟಾರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಈ ಕಲೆ ಅನುಕೂಲವಾಗಿದೆ ಎಂದು ಅವರು ಹೇಳಿದರು.
ಯಕ್ಷಗಾನ ಕಲಿತ ಮಕ್ಕಳು ಬಾಲ್ಯದಲ್ಲಿಯೇ ನೈತಿಕತೆಯನ್ನು ಬೆಳೆಸಿಕೊಳ್ಳುವುದರಿಂದ ತಂದೆ ತಾಯಿ, ಗುರುಹಿರಿಯರನ್ನು ನೋಡಿಕೊಳ್ಳುವುದು, ಗೌರವಿಸುವುದನ್ನು ಕಲಿಯುತ್ತಾರೆ. ಇದರಿಂದಾಗಿ ವೃದ್ಧಾಪ್ಯದಲ್ಲಿ ತಂದೆತಾಯಿ ಅನಾಥಾಶ್ರಮಗಳನ್ನು ಸೇರುವ ಪ್ರಸಂಗಗಳು ಬರಲಿಕ್ಕಿಲ್ಲ. ಆದ್ದರಿಂದ ಹೆತ್ತವರು ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ಕಲಿಕೆಗೆ ಸೇರಿಸಬೇಕು. ಅಕಾಡೆಮಿಯ ಈ ಪ್ರಯತ್ನಕ್ಕೆ ಕಲಾವಿದರು, ಸಂಘಸoಸ್ಥೆಗಳು ಕೈ ಜೋಡಿಬೇಕು ಎಂದು ಅವರು ಮನವಿ ಮಾಡಿದರು.
ಮುಖ್ಯ ಅತಿಥಿ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರು ಮಾತನಾಡಿ, ಜೀವನ ಪರಿಪೂರ್ಣವಾಗಬೇಕಾದರೆ ಸಂಗೀತ, ಸಾಹಿತ್ಯದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ, ಯಕ್ಷಗಾನ ಒಂದು ಶ್ರೇಷ್ಠ ಕಲೆ. ಮಾತುಗಾರಿಕೆ, ವೇಧಷಭೂಷಣ, ಹಾಡು, ನೃತ್ಯ ಎಲ್ಲವೂ ಇಲ್ಲಿದೆ. ಯಕ್ಷಗಾನದ ವಿಶೇಷತೆ ಎಂದರೆ ಅದನ್ನು ಎಷ್ಟು ಬಾರಿ ನೋಡಿದರೂ ಅದರ ಸೆಳೆತ ನಿಲ್ಲದು. ಈ ಕಲೆ ಕಲಾವಿದರನ್ನು ದಾರಿ ತಪ್ಪಿಸುವುದಿಲ್ಲ. ಇಲ್ಲಿ ಯಾವುದೇ ಪಾತ್ರಗಳನ್ನು ತೆಗೆದುಕೊಂಡರೂ, ಉತ್ತಮ ಸಂದೇಶಗಳನ್ನೇ ನೀಡುತ್ತದೆ. ಒಟ್ಟಾರೆ ಎಲ್ಲಾ ರೀತಿಯಿಂದ ನೋಡಿದರೂ ಯಕ್ಷಗಾನ ಒಂದು ಪರಿಪೂರ್ಣವಾದ ಕಲೆಯಾಗಿಯೇ ನಿಲ್ಲುತ್ತದೆ ಎಂದರು.
ಮoಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಳದ ಅನುವಂಶಿಕ ಅರ್ಚಕ ದೇ.ಮೂ.ಸುಬ್ರಹ್ಮಣ್ಯ ಭಟ್ ಕಾರ್ಯಾಗಾರವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರ ರಾಮದಾಸ್ ಆಳ್ವ, ತೇವುನಾಡುಗುತ್ತು, ಶಾರದಾ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲ ಮೋಹನ್‌ದಾಸ್, ಪತ್ರಕರ್ತ ವಸಂತ ಕೊಣಾಜೆ, ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ನ ಅಧ್ಯಕ್ಷ ಹರೀಶ್ ಬಟ್ಯಡ್ಕ, ಯಕ್ಷಗಾನ ಕಲಾವಿದೆ ಪ್ರೇಮಾ ಕಿಶೋರ್, ಯಕ್ಷಗಾನ ಅಕಾಡೆಮಿ ಸದಸ್ಯರುಗಳಾದ ಸುಧಾಕರ ಶೆಟ್ಟಿ ಉಲ್ಲಾಳ, ಗುರುರಾಜ ಭಟ್, ವಿನಯ ಕುಮಾರ್ ಶೆಟ್ಟಿ ಗುರುಪುರ ಮೊದಲಾದವರು ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಿನ್ಯ ಸ್ವಾಗತಿಸಿ, ಸದಸ್ಯ ಸತೀಶ್ ಅಡಪ ಸಂಕಬೈಲು ವಂದಿಸಿದರು. ವಿಜೇತ್ ಎಂ. ಶೆಟ್ಟಿ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಜನಾರ್ದನ ಬದಿಯಡ್ಕ, ಜಗದೀಶ್ ಉಚ್ಚಿಲ್ ಅವರಿಂದ ತೆಂಕುತಿಟ್ಟು ಯಕ್ಷಗಾನ ಮುಖವರ್ಣಿಕೆ ಬಗ್ಗೆ, ವೇಷಭೂಷಣ ಧಾರಣೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಸಂದೀಪ್ ಶೆಟ್ಟಿ ಕಾವೂರು, ಒದ್ಮನಾಭ ಮಾಸ್ತರ್, ಸಮೃದ್ಧ್ ಭಂಡಾರಿ ಪಿಲಾರು ಅವರಿಂದ ಪ್ರಾತ್ಯಕ್ಷಿಕೆ ನಡೆಯಿತು. ವಿಚಾರಗೋಷ್ಠಿಯಲ್ಲಿ `ಪರಿವರ್ತನೆಯ ಪರ್ವಕಾಲದಲ್ಲಿ ಯಕ್ಷಗಾನ ಕಲೆ ' ಬಗ್ಗೆ ಅರ್ಥಧಾರಿ ಸದಾಶಿವ ಆಳ್ವ ದೇವಿಪುರ ವಿಚಾರಮಂಡನೆ ಮಾಡಿದರು. ಮಹಿಳಾ ಯಕ್ಷಗಾನ ತಾಳಮದ್ದಲೆ, ಯಕ್ಷಗಾನ ಪ್ರದರ್ಶನ ನಡೆದವು.