‘ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಬೆಳೆಯುವಲ್ಲಿ ಹಿರಿಯರು ಸೂಕ್ತ ಸಮಯದಲ್ಲಿ ತಿಳುವಳಿಕೆ ನೀಡಬೇಕು. ಇಲ್ಲವಾದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಸಂಸ್ಕಾರ ಮರೆತರೆ ಸಂಘರ್ಷಕ್ಕೆ ಹಾದಿ’ ಎಂದು ಉಡುಪಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ನುಡಿದರು. ಅವರು ಉಡುಪಿ ಗುಂಡಿಬೈಲಿನಲ್ಲಿರುವ ಅಭಿರಾಮಧಾಮ ಸಾಂಸ್ಕೃತಿಕ ಪ್ರತಿಷ್ಠಾನದ “ವಸಂತ ಶಿಬಿರ-೨೦೨೫”ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಅವರು ಮಾತನಾಡಿ, ‘ಇಂದು ಬೇಸಿಗೆ ಶಿಬಿರಗಳಲ್ಲಿ ಅನೇಕ ಕಡೆ ಸಂಸ್ಕೃತಿಯನ್ನು ಮರೆತಿರುವುದು ವಿಷಾದಕರ, ತನ್ಮಧ್ಯೆ ಅಭಿರಾಮಧಾಮದಲ್ಲಿ ನಡೆದ ಶಿಬಿರದ ಮಕ್ಕಳಲ್ಲಿ ಸಂಸ್ಕಾರ ಬೆರೆತಿರುವುದು ತುಂಬಾ ಖುಷಿ ನೀಡಿದೆ’ ಎಂದು ನುಡಿದರು. ಒಟ್ಟು ೪೪ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದು, ಕೊನೆಯಲ್ಲಿ ಶಿಬಿರಾರ್ಥಿಗಳು ಸುಂದರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೊಗಸಾಗಿ ಪ್ರಸ್ತುತಪಡಿಸಿದರು.
ವಿದ್ವಾಂಸ ಓಂಪ್ರಕಾಶ್ ಭಟ್, ಉದ್ಯಮಿ ಪ್ರಭಾಕರ ಭಟ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ನಿರ್ದೇಶಕರಾದ ಡಾ:ಸುದರ್ಶನ ಭಾರತೀಯ ಅವರು ಸ್ವಾಗತಿಸಿ, ಸುಷ್ಮಾ ಸುದರ್ಶನ್ ನಿರೂಪಿಸಿದರು. ಕು:ಚೈತಾಲಿ ವಂದಿಸಿದರು.