ಉಡುಪಿ: ಕಳೆದ ಮೂವತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿ. ಪಿ. ದಿನೇಶ್ ಕುಮಾರ್ ಅವರು ಕೊಡಗು ಜಿಲ್ಲಾ ಎಡಿಷನಲ್ ಎಸ್ಪಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿ ದ್ದಾರೆ.
ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿಯವರಾಗಿರುವ ಬಿ.ಪಿ.ದಿನೇಶ್ ಕುಮಾರ್ ಅವರು ಮಡಿಕೇರಿಯ ಸೇಂಟ್ ಜೋಸೆಫ್ ಮತ್ತು ಸೇಂಟ್ ಮೈಕಲ್ಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪುತ್ತೂರು ಸೇಂಟ್ ಫಿಲೋಮಿನಾ ಮತ್ತು ಸ್ವಾಮಿ ವಿವೇಕಾನಂದ ಕಾಲೇಜ್ ನಲ್ಲಿ ಪದವಿ ಪಡೆದ ಬಳಿಕ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿಯಲ್ಲಿ ಎಂಎಸ್ಸಿ (ಬಯೋ ಸೈನ್ಸಸ್) ಸ್ನಾತ ಕೋತ್ತರ ಪದವಿ ಮುಗಿಸಿದ್ದಾರೆ.
ಮಡಿಕೇರಿಯ ನವೋದಯ ವಿದ್ಯಾಲಯ, ಭಾರತಿ ಜ್ಯೂನಿಯರ್ ಕಾಲೇಜು ಮರಗೋಡು, ಗವರ್ನ ಮೆಂಟ್ ಸೀನಿಯರ್ ಕಾಲೇಜು ಮಡಿಕೇರಿ ಮೊದಲಾದೆಡೆಗಳಲ್ಲಿ ಶಿಕ್ಷಕರಾಗಿ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಬಳಿಕ 1994ರಲ್ಲಿ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಆಗಿ ಪೊಲೀಸ್ ಇಲಾಖೆಗೆ ಸೇರಿದರು. ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ (ಕೆಪಿಎ) ಒಂದು ವರ್ಷದ ಮೂಲ ತರಬೇತಿ, ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಒಂದು ವರ್ಷ ಪ್ರಾಯೋಗಿಕ ತರಬೇತಿ ಪಡೆದ ಬಳಿಕ ಬೆಂಗಳೂರು ನಗರ, ಮೂಡಿಗೆರೆ (ಚಿಕ್ಕಮಗಳೂರು) ಮತ್ತು ಮಲ್ಪೆಯಲ್ಲಿ (ಉಡುಪಿ) ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದರು.
ಪೊಲೀಸ್ ಇನ್ಸ್ಪೆಕ್ಟರ್ (ಸಿಪಿಐ) ಆಗಿ ಬಡ್ತಿಯ ಮೇಲೆ ಉಡುಪಿ, ಬೈಂದೂರು, ಬ್ರಹ್ಮಾವರ, ಮಣಿಪಾಲ, ಕೃಷ್ಣರಾಜ ನಗರ (ಮೈಸೂರು ಜಿಲ್ಲೆ), ಮೆಸ್ಕಾಂ, ಉಡುಪಿ ಮತ್ತು ಕರ್ನಾಟಕ ಲೋಕಾಯುಕ್ತ, ಮಂಡ್ಯ ಮತ್ತು ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೋಲೀಸ್ (ಡಿವೈಎಸ್ಪಿ) ಆಗಿ ಬಡ್ತಿಯ ಮೇಲೆ ಆಂಟಿ ನಕ್ಸಲ್ ಫೋರ್ಸ್ (ANF), ಕಾರ್ಕಳ ಮತ್ತು ಕುಂದಾಪುರ ಉಪ ವಿಭಾಗ ಮತ್ತು ಮಡಿಕೇರಿ ಉಪ ವಿಭಾಗದಲ್ಲಿ ಕೆಲಸ ಮಾಡಿದ ಇವರು ಮಂಗಳೂರು ನಗರದ (ಅಪರಾಧ ಮತ್ತು ಸಂಚಾರ) ಉಪ ಪೊಲೀಸ್ ಆಯುಕ್ತರಾಗಿ, ಮಂಗಳೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಡ್ತಿ ಪಡೆದಿದ್ದರು. ಇದೀಗ ತನ್ನ ತವರು ಜಿಲ್ಲೆ ಕೊಡಗಿನಲ್ಲಿ ಎಡಿಷನಲ್ ಎಸ್ಪಿಯಾಗಿ ಮುಂಭಡ್ತಿ ಪಡೆದಿದ್ದು, ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.