ನವದೆಹಲಿ: ಭಾರತವು ಬುಧವಾರ ನಸುಕಿನ ಜಾವವೇ ಅಮೆರಿಕ, ರಷ್ಯಾ, ಯುಕೆ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವು ಪ್ರಮುಖ ದೇಶಗಳನ್ನು ಸಂಪರ್ಕಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಸ್ಥಳಗಳ ಮೇಲೆ ನಡೆಸಿದ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತಂತೆ ವಿವರಿಸಿದೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಗಿದೆ. "ಭಾರತ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಲು ಹಿರಿಯ ಭಾರತೀಯ ಅಧಿಕಾರಿಗಳು ಹಲವಾರು ದೇಶಗಳಲ್ಲಿನ ತಮ್ಮ ಸಹವರ್ತಿಗಳೊಂದಿಗೆ ಮಾತನಾಡಿದ್ದಾರೆ" ಎಂದು ಮೂಲವೊಂದು ತಿಳಿಸಿದೆ.
"ಇವುಗಳಲ್ಲಿ ಅಮೆರಿಕ, ಬ್ರಿಟನ್, ಸೌದಿ ಅರೇಬಿಯಾ ಮತ್ತು ರಷ್ಯಾ ಸೇರಿವೆ" ಎಂದು ಅದು ಹೇಳಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದು ಎರಡು ವಾರಗಳ ನಂತರ ಭಾರತವು ಈ ಕ್ರಮ ಕೈಗೊಂಡಿದೆ. "25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕನನ್ನು ಭೀಕರವಾಗಿ ಕೊಂದ ನರರಾಕ್ಷಸರ ಹುಟ್ಟಡಗಿಸಲು ಈ ಕ್ರಮಗಳನ್ನು ಕೈಗೊಳ್ಳಲಾಯಿತು" ಎಂದು ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. "ಈ ದಾಳಿಗೆ ಕಾರಣರಾದವರನ್ನು ಹೊಣೆಗಾರ ರನ್ನಾಗಿ ಮಾಡಲಾಗುತ್ತದೆ ಎಂಬ ಮಾತಿಗೆ ನಾವು ಬದ್ಧರಾಗಿದ್ದೇವೆ" ಎಂದು ಅದು ಹೇಳಿದೆ.
ಅಮೆರಿಕ ಟ್ರಂಪ್ ಹೇಳಿದ್ದೇನು?: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹಲವು ದಶಕಗಳಿಂದ ಬಿಗುವಿನ ವಾತಾವರಣವಿದ್ದು, ಏನೋ ಒಂದು ದೊಡ್ಡ ಘಟನೆ ನಡೆಯಲಿದೆ ಎಂಬುದು ಜನರಿಗೆ ತಿಳಿದಿತ್ತು ಎಂದು ನಾನು ಭಾವಿಸಿದ್ದೆ ಎಂದು ಭಯೋತ್ಪಾದಕರ ವಿರುದ್ಧದ ಭಾರತದ ಕ್ಷಿಪಣಿ ದಾಳಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಸಂಘರ್ಷ ಆದಷ್ಟು ಬೇಗ ಕೊನೆಗೊಳ್ಳಲಿ ಎಂದಿದ್ದಾರೆ.
ಅಮೆರಿಕ ಕಾರ್ಯದರ್ಶಿ ಪ್ರತಿಕ್ರಿಯೆ: ಈ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಕಾರ್ಯದರ್ಶಿ ಮಾರ್ಕೊ ರುಬಿಯೊ, ಈ ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿ ಮತ್ತು ಇದು ಬೇಗ ಅಂತ್ಯವಾಗಲಿ ಎಂದು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಉಭಯ ರಾಷ್ಟ್ರಗಳು ಪರಸ್ಪರ ಮಾತುಕತೆಗಳ ಮೂಲಕ ಶಾಂತಿ ಒಪ್ಪಂದ ಮಾಡಿಕೊಳ್ಳಲಿವೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಉಗ್ರರಿಗೆ ತಕ್ಕ ಶಾಸ್ತಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಬೇಸಿಗೆ ರಜೆ ಕಳೆಯಲು ತಮ್ಮ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದವರ ಮೇಲೆ ನರ ರಾಕ್ಷಸರಂತೆ ನುಗ್ಗಿಬಂದ ಮತಾಂಧ ಉಗ್ರರು 25 ಭಾರತೀಯರು ಮತ್ತು ಓರ್ವ ನೇಪಾಳಿ ಪ್ರಜೆಯನ್ನು ಕ್ರೂರವಾಗಿ ಗುಂಡು ಹಾರಿಸಿ ಕೊಂದಿದ್ದರು.
ಇದಾದ ಬಳಿಕ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದ ಅಮಾನತು, ಜೇಲಬ್ ನದಿ ನೀರನ್ನು ನಿಲ್ಲಿಸಿರುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಉಗ್ರರಿಗೆ ನೀಡುತ್ತಿರುವ ಬೆಂಬಲದ ಕುರಿತು ಬಹಿರಂಗಪಡಿಸಿತ್ತು.
ಪಾಕ್ ಜೊತೆಗಿನ ಎಲ್ಲಾ ಆಮದು ಮತ್ತು ರಫ್ತು ವಹಿವಾಟನ್ನು ನಿಲ್ಲಿಸುವ ಮೂಲಕ ಪಾಕಿಸ್ತಾ ನಕ್ಕೆ ಭಾರತ ಬುದ್ಧಿ ಕಲಿಸಲು ಪ್ರಯತ್ನಿಸಿದೆ. ಆದ್ರೆ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತ ಬಂದಿರುವ ಪಾಕ್ ಸೇನೆಯ ಉದ್ಧಟತನಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ಇಂದು ಕ್ಷಿಪಣಿ ದಾಳಿ ಮೂಲಕ ದುಷ್ಕೃತ್ಯ ಮೆರೆಯುವ ಉಗ್ರರ ಬಾಲವನ್ನು ಭಾರತೀಯ ಸೇನೆ ಕತ್ತರಿಸಿದೆ.