Header Ads Widget

ಹೆಚ್ ಕೃಷ್ಣ ಪರಂಧಾಮ!

ಉಡುಪಿಯ ಹಿರಿಯ ಸಾಂಸ್ಕೃತಿಕ ಅಧ್ವರ್ಯು, ನಿವೃತ್ತ ಉಪನ್ಯಾಸಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ‌ ಕೇಂದ್ರದ ಮಾಜಿ ನಿರ್ದೇಶಕ ಪ್ರೊ‌ ಹೆರಂಜೆ ಕೃಷ್ಣ ಭಟ್ಟರು ಇಂದು ಗುರುವಾರ ಸಂಜೆ ವಯೋಸಹಜ ಅಸ್ವಾಸ್ಥ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು‌ .

ಪತ್ನಿ ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಭಟ್ಟರು ಅಗಲಿದ್ದಾರೆ.‌

ಉಡುಪಿಯ ಎಂ ಜಿ ಎಂ‌ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರು, ವಿಭಾಗ ಮುಖ್ಯಸ್ಥರಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದ ಭಟ್ಟರು ನಿವೃತ್ತಿಯ ಬಳಿಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾಗಿ ಅನೇಕ ವರ್ಷಗಳ ಕಾಲ ಮಹತ್ವದ ಸೇವೆ ಸಲ್ಲಿಸಿ ಕೇಂದ್ರದ ಮೂಲಕ ಅನೇಕ ಸಾಹಿತ್ಯ ಸಾಂಸ್ಕೃತಿಕ ಕೈಂಕರ್ಯಗಳನ್ನು ಯಶಸ್ವಿಯಾಗಿ ಸಂಯೋಜಿಸಿದ್ದರು.

ಉಡುಪಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೇರುಸ್ವರೂಪರಾಗಿದ್ದ ಕು ಶಿ ಹರಿದಾಸ ಭಟ್ಟರ ಗರಡಿಯಲ್ಲಿ ಪಳಗಿದ್ದ ಕೃಷ್ಣ ಭಟ್ಟರು ತಾನೂ ಅದೇ ರೀತಿಯಲ್ಲಿ ಓರ್ವ ಧೀಮಂತ ಸಾಂಸ್ಕೃತಿಕ ಸಂಘಟಕರಾಗಿ ರೂಪುಗೊಂಡಿದ್ದರು. ಸುಮಾರು 5 ದಶಕಗಳ ಉಡುಪಿಯ ಅನೇಕ ಪರ್ಯಾಯೋತ್ಸಗಳು, ವಾದಿರಾಜ ಕನಕ ದಾಸ ಸಂಗೀತೋತ್ಸವಗಳು, ಹತ್ತಾರು ಸಾಹಿತ್ಯ ಸಾಂಸ್ಕೃತಿಕ ಹಬ್ಬಗಳು, ವಿಶ್ವತುಳು ಸಮ್ಮೇಳನ, ನಡಾವಳಿಯೇ ಮುಂತಾಗಿ ದೊಡ್ಡ ದೊಡ್ಡ ಕಾರ್ಯಕ್ರಮಗಳು ಭಟ್ರ ಸಂಯೋಜನೆ ಮಾರ್ಗದರ್ಶನ ಮುತುವರ್ಜಿಯಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿವೆ.‌

ಜಾನಪದ ಸಂಶೋಧನ ಕೇಂದ್ರದ ಮೂಲಕ‌ ಅನೇಕ ನೇಪಥ್ಯಕ್ಕೆ ಸರಿಯುತ್ತಿರುವ ಜನಪದೀಯ ಕಲೆಗಳ ದಾಖಲೀಕರಣಗಳೂ ಭಟ್ರ ಮಾರ್ಗದರ್ಶನದಲ್ಲೇ ನಡೆದಿರುವುದು ವಿಶೇಷ.

ಈ ರೀತಿಯ ತಮ್ಮ ಬಹುಮುಖಿ ಸಾಮಾಜಿಕ ಕರ್ತವ್ಯ ಗಳ ಮೂಲಕ ಸಿದ್ಧರೂ ಪ್ರಸಿದ್ಧರೂ ಆಗಿದ್ದ ಭಟ್ರಿಗೆ ಉಡುಪಿ ಕೃಷ್ಣ ಮಠ ಅಷ್ಟಮಠಗಳ ಅನೇಕ‌ಗೌರವ ಸಂಮಾನಗಳು , 2007ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಂಮೇಳನದ ಪುರಸ್ಕಾರ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ತಿಂಗಳೆ ಗರಡಿ ಉತ್ಸವದ ಪುರಸ್ಕಾರಗಳೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಇಳಿವಯಸ್ಸಿನಲ್ಲೂ ವೇದಾಧ್ಯಯನ ನಡೆಸಿ ಪ್ರತಿನಿತ್ಯವೆಂಬಂತೆ ಪವಮಾನಸೂಕ್ತಾದಿಗಳನ್ನು ಪಾರಾಯಣ ನಡೆಸುತ್ತಿದ್ದರು.

ಪುತ್ತಿಗೆ ಕೃಷ್ಣಾಪುರ, ಪೇಜಾವರ ಕಾಣಿಯೂರು ಅದಮಾರು ಪಲಿಮಾರು ಸೋದೆ ಶೀರೂರು ಭಂಡಾರಕೇರಿ ಶ್ರೀಪಾದರುಗಳು ಕೃಷ್ಣ ಭಟ್ಟರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಶ್ರೀಕೃಷ್ಣ ಮುಖ್ಯಪ್ರಾಣರ ವಿಶೇಷ ಸೇವೆ ಸಲ್ಲಿಸಿದ್ದ ಭಟ್ಟರು ವೈಶಾಖ ಶುದ್ಧ ಏಕಾದಶಿ ಪರ್ವದಿನದಂದೇ ಹರಿಪಾದ ಸೇರಿರುವುದು ವಿಶೇಷವಾಗಿದೆ.‌ ಭಗವಂತನು ಅವರಿಗೆ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಡಾ ಡಿ ವೀರೇಂದ್ರ ಹೆಗ್ಗಡೆ, ಶಾಸಕ ಯಶ್ಪಾಲ್ ಸುವರ್ಣ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ ರಘುಪತಿ ಭಟ್, ಡಾ ಮೋಹನ ಆಳ್ವಾ, ಕೃಷ್ಣ ಭಟ್ಟರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರೊ ಕೃಷ್ಣಭಟ್ಟರ ಅಂತ್ಯಕ್ರಿಯೆಯು ನಾಳೆ 10.30ರ ಸುಮಾರಿಗೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನಡೆಯಲಿದೆ. ಬೆಳಿಗ್ಗೆ 9 ರಿಂದ 10.00 ರ ವರೆಗೆ ವಿಬುಧಪ್ರಿಯನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ ಎಂದು ಕುಟುಂಬಗಳು ತಿಳಿಸಿವೆ.