ರಾಜ್ಯದಲ್ಲಿ ಬ್ಯಾಂಕ್ ಹಾಗೂ ಎಟಿಎಂ ರಾಬರಿ ಪ್ರಕರಣಗಳು ಮುಂದುವರೆದಿದ್ದು, ಇದೀಗ ವಿಜಯಪುರ ಜಿಲ್ಲೆ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಅಂದಾಜು ₹52.26 ಕೋಟಿ ಮೌಲ್ಯದ 58 ಕೆಜಿ 976 ಗ್ರಾಂ ಚಿನ್ನಾಭರಣ ಮತ್ತು ₹5.20 ಲಕ್ಷ ನಗದು ಕಳ್ಳತನದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೇ 23ರಂದೇ ಕೃತ್ಯ ಎಸಗಿರುವ ಶಂಕೆ ಇದ್ದು, ಕಳ್ಳರು ಈವರೆಗೂ ಪತ್ತೆಯಾಗಿಲ್ಲ. ಇದು ಚಿನ್ನದ ಮೌಲ್ಯದ ರೂಪದಲ್ಲಿ ರಾಜ್ಯದಲ್ಲಿಯೇ ಅತಿ ದೊಡ್ಡ ಬ್ಯಾಂಕ್ ಕಳ್ಳತನ ಎನ್ನಲಾಗುತ್ತಿದೆ. ಈ ಸಂಬಂಧ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಕಲ್ಮೇಶ ಪೂಜಾರಿಯವರು ಮನಗೂಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿದ್ದು, 'ಪ್ರಕರಣಕ್ಕೆ ಸಂಬಂಧಿಸಿದಂತೆ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕಿನ ಮ್ಯಾನೇಜರ್ ಠಾಣೆಗೆ ಬಂದು ಕಂಪ್ಲೇಂಟ್ ಕೊಟ್ಟಿದ್ದಾರೆ. 23-5-2025ರಂದು ಬ್ಯಾಂಕ್ ಲಾಕ್ ಮಾಡಿ ಸಿಬ್ಬಂದಿ ಹೋಗಿದ್ದರು. 25 ನೇ ತಾರೀಖು ಅವರ ಸಿಬ್ಬಂದಿ ಸ್ವಚ್ಛತೆಗೆ ಎಂದು ಬಂದಾಗ ಶಟರ್ಸ್ ಲಾಕ್ ಕಟ್ ಆಗಿರುವುದು ಗಮನಕ್ಕೆ ಬಂದಿದೆ. ನಂತರ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಕೊಟ್ಟಿದ್ದಾರೆ. ನಂತರ ಇದನ್ನು ಪರಿಶೀಲಿಸಿದಾಗ ಬ್ಯಾಂಕ್ಗೆ ಕಳ್ಳರು ಬಂದು ಕದ್ದಿರುವುದು ಗಮನಕ್ಕೆ ಬಂದಿದೆ. ಇದೀಗ ಬ್ಯಾಂಕ್ ಉನ್ನತ ಮಟ್ಟದ ಅಧಿಕಾರಿಗಳು ಇದನ್ನು ಲೆಕ್ಕಹಾಕಿದ್ದಾರೆ. ಜನರು ಲೋನ್ಗಾಗಿ ಬಂಗಾರವನ್ನು ಅಡವಿಟ್ಟು ದುಡ್ಡನ್ನು ತೆಗೆದುಕೊಂಡಿದ್ದು ಎಂದು ಹೇಳಿದ್ದಾರೆ. ಪ್ರಕರಣದ ತನಿಖೆಗೆ 8 ತಂಡಗಳನ್ನು ರಚಿಸಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತರಲಾಗುವುದು' ಎಂದು ಹೇಳಿದ್ದಾರೆ.
0 ಕಾಮೆಂಟ್‌ಗಳು