Header Ads Widget

ಎಂ ಎಂ ಹಿಲ್ಸ್ : ವಿಷ ಮಿಶ್ರಿತ ಮಾಂಸ ಸೇವಿಸಿ 5 ಹುಲಿಗಳು ದಾರುಣ ಸಾವು!

ಮೃತ ಹಸುವಿನ ವಿಷ ಮಿಶ್ರಿತ ಮಾಂಸ ಸೇವಿಸಿ ತಾಯಿ ಹುಲಿ, ಅದರ 4 ಮರಿ ಸೇರಿ 5 ಹುಲಿಗಳು ಒಂದೇ ದಿನ ಮೃತಪಟ್ಟಿರುವ ಆಘಾತಕಾರಿ ಘಟನೆ ಹುಲಿಗಳ ನಾಡೆಂದೇ ಪ್ರಖ್ಯಾತಿಯಾದ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಮಿಣ್ಯಂ ಅರಣ್ಯದಲ್ಲಿ ನಡೆದಿದೆ. ಒಂದೇ ದಿನ 5 ಹುಲಿಗಳು ಸಾವನ್ನಪ್ಪಿರುವ ದುರಂತ ದೇಶದಲ್ಲಿ ಇದೇ ಮೊದಲು.

ಮಲೆ ಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಸುಮಾರು 7 ರಿಂದ 8 ವರ್ಷದ ಹುಲಿಯೊಂದು 3 ಹೆಣ್ಣು ಮತ್ತು ಒಂದು ಗಂಡು ಸೇರಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಹುಲಿಗಳು ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಮುನ್ನವೇ ಮಾನವ- ವನ್ಯಜೀವಿಗಳ ಸಂಘರ್ಷದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಾನವನ ಪ್ರತೀಕಾರಕ್ಕೆ ಬಲಿಯಾಗಿವೆ.

ಮಲೆಮಹದೇಶ್ವರ ಬೆಟ್ಟ ವನ್ಯಧಾಮದ ಕಾಡಂಚಿನಲ್ಲಿರುವ ಮಿಣ್ಯಂ, ಹೂಗ್ಯಂ, ನಾಲ್‌ರೋಡ್‌, ಪಾಲಾರ್‌ ಸೇರಿ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ವಾಸಿಸುವ ಜನರು ತಮಿಳುನಾಡಿನ ಕೆಲ ವ್ಯಕ್ತಿಗಳಿಂದ ಸಾಲ ಪಡೆದಿರುತ್ತಾರೆ. ತಮಿಳುನಾಡಿನ ಪ್ರಸಿದ್ಧವಾದ ಬರಗೂರು ತಳಿಯ ಜಾನುವಾರುಗಳನ್ನು ಸಾಲಗಾರರಿಗೆ ತಂದು ಕೊಡುವ ಸಾಲ ಕೊಟ್ಟವರು, ಅವನ್ನು ಮೇಯಿಸಿಕೊಡಲು ಸೂಚಿಸುತ್ತಾರೆ. ಸ್ಥಳೀಯ ಜನರು ಈ ಜಾನುವಾರುಗಳನ್ನು ಮಲೆಮಹದೇಶ್ವರ ವನ್ಯಧಾಮದೊಳಗೆ ಮೇಯಿಸುತ್ತಾರೆ. ಹೀಗೆ ತಮಿಳುನಾಡಿನ ಜಾನುವಾರು ಮಾಲೀಕರು ಕಾಡಂಚಿನ ಗ್ರಾಮಗಳ ಜನರ ಮೂಲಕ ತಮ್ಮ ಜಾನುವಾರುಗಳನ್ನು ಅಭಿವೃದ್ಧಿಪಡಿಸಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾರೆ.

ಜಾನುವಾರುಗಳನ್ನು ನೋಡಿಕೊಳ್ಳುವ ಸಾಲಗಾರರು ಹಸುಗಳಿಂದ ಹಾಲನ್ನು ಕರೆದುಕೊಳ್ಳಬಹುದು. ಆದರೆ, ಕರು ಮತ್ತು ಗೊಬ್ಬರವನ್ನು ಮಾತ್ರ ಅವುಗಳ ಮಾಲೀಕರಿಗೇ (ಸಾಲ ಕೊಟ್ಟವರು) ನೀಡಬೇಕು.

ಕಾಡಿಗೆ ಹಸುವನ್ನು ಮೇಯಲು ಬಿಟ್ಟಾಗ ಹುಲಿಗಳು ಅವನ್ನು ಕೊಂದು ತಿನ್ನುತ್ತವೆ. ಹೀಗಾಗಿ ಹಸು ಸಾಕಣೆದಾರರು ಹಾಗೂ ಹುಲಿಗಳ ನಡುವೆ ಮೊದಲಿನಿಂದಲೂ ಸಂಘರ್ಷ ನಡೆಯುತ್ತಲೇ ಇದೆ. ಅದೇ ರೀತಿ ತಾಯಿ ಹುಲಿ, ಅದರ ನಾಲ್ಕು ಮರಿಗಳು ಹಸುವನ್ನು ಕೊಂದು, ತಿಂದು ತೆರಳಿವೆ. ಇದರಿಂದ ಸಿಟ್ಟಿಗೆದ್ದ ಸಾಕಣೆದಾರರು ಹುಲಿ ತಿಂದು ಬಿಟ್ಟು ಹೋಗಿದ್ದ ಹಸುವಿನ ಮಾಂಸಕ್ಕೆ ವಿಷ ಬೆರೆಸಿದ್ದಾರೆ. ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಆ ವಿಷ ಮಿಶ್ರಿತ ಮಾಂಸ ಸೇವಿಸಿ ಸಾವಿಗೀಡಾಗಿವೆ ಎಂದು ಹೇಳಲಾಗಿದೆ.

ರಾಷ್ಟ್ರದಲ್ಲೇ ಮಧ್ಯಪ್ರದೇಶದ ನಂತರ ಹೆಚ್ಚು ಹುಲಿಗಳನ್ನು ಹೊಂದಿರುವ ಕರ್ನಾಟಕದಲ್ಲಿ ಹೆಚ್ಚಿನ ಹುಲಿಗಳು ದಕ್ಷಿಣ ಭಾಗದ ಅರಣ್ಯದಲ್ಲಿವೆ. ಅವುಗಳ ಪೈಕಿ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಾಥಸ್ವಾಮಿ ವನ್ಯಧಾಮದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ 10 ರಿಂದ 12 ಹುಲಿಗಳು ತಮ್ಮ ಸಾಮ್ರಾಜ್ಯ ನಿರ್ಮಿಸಿಕೊಂಡಿವೆ. ಹುಲಿಗಳು ಕಾಡು ಪ್ರಾಣಿಗಳ ಜೊತೆಗೆ, ಕಾಡಿಗೆ ಬರುವ ಹಸುಗಳನ್ನು ಬೇಟೆಯಾಡಿ ಹಸುವಿನ ಮಾಂಸವನ್ನು ವಾರಗಟ್ಟಲೇ ಆಹಾರವಾಗಿಸಿಕೊಳ್ಳುತ್ತವೆ. ಇದರ ಮಾಹಿತಿ ಬಲ್ಲ ದುರುಳರು ಸತ್ತ ಹಸುವಿನ ಮಾಂಸಕ್ಕೆ ವಿಷಪ್ರಾಶನ ಮಾಡಿದ್ದಾರೆ. ಈ ಮಾಂಸವನ್ನು ಸೇವಿಸಿದ ತಾಯಿ ಹುಲಿ ಮತ್ತು 4 ಮರಿ ಹುಲಿಗಳು ಮೃತಪಟ್ಟಿವೆ.

ಹುಲಿಗಳು ಸಾವನಪ್ಪಿದ ಪಕ್ಕದಲ್ಲೇ ವಿಷ ಪ್ರಾಶನವಾಗಿರುವ ಹಸುವಿನ ಕಳೇಬರ ಪತ್ತೆಯಾಗಿದೆ. ಹೂಗ್ಯಂ ವಲಯದ ಮೀಣ್ಯಂ ಬೀಟ್‌ನಲ್ಲಿ ಬುಧವಾರ ಸಂಜೆ ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ 5 ಹುಲಿಗಳು ಸಾವನ್ನಪ್ಪಿರುವುದು ಪತ್ತೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು