ಯಕ್ಷಗಾನದ ಪ್ರಸಿದ್ಧ ಸ್ತ್ರೀವೇಷಧಾರಿ ಪಾತಾಳ ವೆಂಕಟರಮಣ ಭಟ್ (೮೯) ಇಂದು (೧೯.೦೭.೨೦೨೫) ಉಪ್ಪಿನಂಗಡಿಯ ತಮ್ಮ ಸ್ವಗೃಹದಲ್ಲಿ ವಯೋಸಹಜ ಅಸೌಖ್ಯದಿಂದ ನಿಧನ ಹೊಂದಿದರು.
ಅವರು ಕಲಾವಿದ ಅಂಬಾಪ್ರಸಾದ ಪಾತಾಳ ಸೇರಿದಂತೆ ಈರ್ವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಕಾಂಚನ ಕೃಷ್ಣ ಭಟ್, ಮಾಣಂಗಾವಿ ಕೃಷ್ಣ ಭಟ್ಟರಿಂದ ನೃತ್ಯಾಭ್ಯಾಸ ರಂಗಾನುಭವ ಪಡೆದು ಸೌಕೂರು, ಮುಲ್ಕಿ, ಸುರತ್ಕಲ್ ಮತ್ತು ಧರ್ಮಸ್ಥಳ ಮೇಳಗಳಲ್ಲಿ ಮೂರು ದಶಕಗಳ ಕಲಾಸೇವೆಗೈದಿದ್ದರು.
ಸುಭದ್ರೆ, ಚಿತ್ರಾಂಗದೆ, ಮೇನಕೆ, ದಾಕ್ಷಾಯಿಣಿ, ಶ್ರೀದೇವಿ ಸೇರಿದಂತೆ ಹಲವು ಪೌರಾಣಿಕ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸಿ ಕಲಾರಸಿಕರ ಗೌರವಕ್ಕೆ ಪಾತ್ರರಾಗಿದ್ದರು. ಸ್ತ್ರೀಪಾತ್ರದ ಆಹಾರ್ಯದ ಕುರಿತಂತೆ ಹೊಸ ಆವಿಷ್ಕಾರಕ್ಕೆ ಕಾರಣರಾಗಿದ್ದರು. ‘ಯಕ್ಷಶಾಂತಲಾ’ ಬಿರುದು ಪಡೆದಿದ್ದ ಇವರು ಪ್ರತಿವರ್ಷ ಓರ್ವ ಕಲಾವಿದರಿಗೆ ೧೦,೦೦೦/- ನಗದು ಪುರಸ್ಕಾರದೊಂದಿಗೆ ಸಮ್ಮಾನಿಸುವ ಸತ್ಪರಂಪರೆ ಹಾಕಿಕೊಂಡಿದ್ದರು. ನಾಲ್ಕು ವರ್ಷದ ಹಿಂದೆ ಧರ್ಮಸ್ಥಳದಲ್ಲಿ ಒಂದೇ ವೇದಿಕೆಯಲ್ಲಿ ೩೦ ಜನ ಕಲಾವಿದರನ್ನು ಸಮ್ಮಾನಿಸಿದ್ದ ಇವರು, ಈವರೆಗೆ ೫೦ಕ್ಕೂ ಹೆಚ್ಚು ಕಲಾವಿದರನ್ನು ಗೌರವಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ೨೦೦೫ರಲ್ಲಿ ನಮ್ಮ ಸಂಸ್ಥೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
0 ಕಾಮೆಂಟ್‌ಗಳು