Header Ads Widget

ಉಡುಪಿಯಲ್ಲಿ ಸಂಸ್ಕೃತಿ ಸಂಭ್ರಮ ಸಮಾರೋಪ

ಉಡುಪಿ : ಒಬ್ಬ ವ್ಯಕ್ತಿಗೆ ಬಂಗಾರ, ವಜ್ರ ಇವೆಲ್ಲಾ ಎಷ್ಟು ಭೂಷಣವೋ ಹಾಗೆಯೇ ನಮ್ಮ ಸಂಸ್ಕೃತಿ, ಸಂಸ್ಕಾರ, ಪದ್ಧತಿಗಳು ಕೂಡಾ ಭೂಷಣವಾಗಿರುತ್ತದೆ. ಕರಾವಳಿ ಪ್ರದೇಶ ಅತ್ಯುನ್ನತ ಸಂಸ್ಕೃತಿ, ಸಂಸ್ಕಾರಕ್ಕೆ ಹೆಸರುವಾಸಿಯಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಶನಿವಾರ ಎಂಜಿಎo ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಜಾನಪದ ಅಕಾಡೆಮಿ, ನಾಟಕ ಅಕಾಡೆಮಿ ಹಾಗೂ ರಂಗಭೂಮಿ ಉಡುಪಿ ಇವರ ಸಹಯೋಗದಲ್ಲಿ ಗೊಂಬೆಯಾಟ, ಜಾನಪದ ಕಲೆ, ಸಂಗೀತ, ನಾಟಕಗಳು ಮೇಳೈಸಿದ ಎರಡು ದಿನಗಳ `ಸಂಸ್ಕೃತಿ ಸಂಭ್ರಮ' ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.

ಕೇರಳ, ಹೈದರಾಬಾದ್, ಬಾಂಬೆ ಕರ್ನಾಟಕ, ಬಯಲು ಸೀಮೆಗೆ ಹೋಲಿಸಿದರೆ ಕರಾವಳಿ ಸಂಸ್ಕೃತಿ ಬಹಳ ವಿಭಿನ್ನವಾಗಿದೆ. ಕು.ಶಿ, ಹರಿದಾಸ್ ಭಟ್, ಡಾ.ಶಿವರಾಮ ಕಾರಂತ ಮೊದಲಾದವರು ನಮ್ಮ ಕರಾವಳಿಯ ಸಂಸ್ಕೃತಿ ಸೊಗಡನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಇಡೀ ಸಮಾಜವನ್ನು ತಿದ್ದಿ, ಒಗ್ಗೂಡಿಸುವ ನಿಟ್ಟಿನಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಕೇರಳದ ಕಥಕ್ಕಳಿಗೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಆದರೆ ಯಕ್ಷಗಾನ ಅದಕ್ಕಿಂತಲೂ ಗಾಂಭೀರ್ಯತೆಯನ್ನು ಪಡೆದಿದೆ ಎಂದು ಅವರು ತಿಳಿಸಿದರು.

ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ. ಬೀ. ವಿಜಯ ಬಲ್ಲಾಳ್ ಮಾತನಾಡಿ, ಕೃತಕ ಬುದ್ದಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜೆನ್ಸ್ ) ಬಳಕೆ ವಿವಿಧ ರಂಗದಲ್ಲಿ ಹೆಚ್ಚಾಗುತ್ತಿದೆ. ಸಿನೆಮಾ, ಟೀಚಿಂಗ್ ಅಲ್ಲದೆ ಮನೆ ಕೆಲಸದಲ್ಲೂ ಈ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ನಾವು ಇದಕ್ಕಿಂತ ಮೇಲೆ ಬರಬೇಕು. ಮಾನವ ಹಣದಾಸೆಗೆ ಬಲಿ ಬೀಳಬಾರದು. ಹೀಗಾದರೆ ನಮ್ಮ ಬಾಳಿನಲ್ಲಿ ನೆಮ್ಮದಿ, ಸಂತೋಷ ಮರೀಚಿಕೆಯಾಗಬಹುದು. ರಂಗಭೂಮಿ ಇಂದು ರಂಗಶಿಕ್ಷಣವನ್ನು ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಿದೆ. ಡಾ.ತಲ್ಲೂರು ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಯಕ್ಷ ಶಿಕ್ಷಣ ಆರಂಭಿಸಿದರು. ಅವರು ದುಡಿದು ಗಳಿಸಿದ ಮೊತ್ತದ ಬಹುಪಾಲನ್ನು ಯಕ್ಷಗಾನ, ರಂಗಭೂಮಿ, ಜಾನಪದ ಕಲೆಗಳ ಅಭಿವೃದ್ಧಿಗೆ ಬಳಸುತ್ತಿದ್ದಾರೆ. ಅವರು ಜಾನಪದ ಪರಿಷತ್ ಮೂಲಕ ಜಾನಪದ ಕಲೆಯನ್ನು ಉಡುಪಿ ಜಿಲ್ಲೆಗೆ ಪರಿಚಯಿಸಿದ ಕಾರ್ಯ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣೀಮಾ ಮಾತನಾಡಿ, ರಂಗಭೂಮಿ 60 ದಶಕಗಳ ಸೇವೆಯನ್ನು ಸಲ್ಲಿಸಿದೆ. ಬಹಳಷ್ಟು ಕಾರ್ಯಕ್ರಮಗಳನ್ನು ಸಂಸ್ಥೆ ನಾಡಿಗೆ ಅರ್ಪಿಸಿದೆ. ಉಡುಪಿಯಲ್ಲಿ ಸಾಹಿತಿಗಳು, ಕಲಾವಿದರಿಗೆ ಕೊರತೆಯಿಲ್ಲ. ಈ ಕಾರಣದಿಂದಲೇ ಉಡುಪಿ ಜಿಲ್ಲೆ ಇಂದು ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿವಾಗಿ ಮುಂದುವರಿದಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷರು ಉಡುಪಿಯವರೇ ಆಗಿದ್ದಾರೆ. ಹೀಗಾಗಿ ಉಡುಪಿ ಭಾಗದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳು ಬರುವಂತಾಗಿದೆ ಎಂದು ಅಭಿನಂದಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಇದು ನನ್ನ ಕನಸು. ಯಕ್ಷಗಾನ ಅಕಾಡೆಮಿ, ಜಾನಪದ ಪರಿಷತ್ತು ಹಾಗೂ ರಂಗಭೂಮಿ ಉಡುಪಿ ಈ ಮೂರು ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮ ಮಾಡಬೇಕು ಎಂದು ನನ್ನ ಕನಸಾಗಿತ್ತು. ಅದೀಗ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದ ಮೂಲಕ ನನಸಾಗಿದೆ. ನನ್ನ ಉದ್ದೇಶ ಕಲೆ, ಸಂಸ್ಕೃತಿಗೆ ಒತ್ತುಕೊಡಬೇಕು ಎಂಬುದೇ ಆಗಿದೆ. ಕಲಾಮಾತೆಯ ಸೇವೆ ಸಂತೃಪ್ತಿ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಗೋಪಾಲ ಸಿ. ಬಂಗೇರ, ರಂಗಭೂಮಿ ಉಡುಪಿ ಸಂಸ್ಥೆಯ ಉಪಾಧ್ಯಕ್ಷ ಎನ್. ಆರ್. ಬಲ್ಲಾಳ್ ಉಪಸ್ಥಿತರಿದ್ದರು.

ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮೃತಾ ಎನ್. ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ್ ನಾಯಕ್ ನಿರೂಪಿಸಿದರು. ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ವಂದಿಸಿದರು.

ಸಂಸ್ಕೃತಿ ಸಂಭ್ರಮದ ಪ್ರಥಮ ದಿನ ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದಿoದ ನರಕಾಸುರ ವಧೆ ಮತ್ತು ಗರುಡ ಗರ್ವಭoಗ ಎಂಬ ತೆಂಕುತಿಟ್ಟು ಯಕ್ಷಗಾನ ಗೊಂಬೆಯಾಟ ಪ್ರದರ್ಶನ, ಶಿವಮೊಗ್ಗ ಜಿಲ್ಲೆಯ ಟಾಕಪ್ಪ ಮತ್ತು ತಂಡದವರಿoದ ಡೊಳ್ಳು ಕುಣಿತ ಹಾಗೂ ಬೆಂಗಳೂರು ನಗರ ಜಿಲ್ಲೆಯ ಮಹದೇವಮೂರ್ತಿ ಮತ್ತು ತಂಡದವರಿoದ ಕಂಸಾಳೆ ನೃತ್ಯಗಳು ಪ್ರದರ್ಶನಗೊoಡಿತು.

ಸಮಾರೋಪ ಸಮಾರಂಭದ ದಿನ ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯ ಮತ್ತು ಬಳಗದವರಿಂದ ಸಂಗೀತ ಸುಧೆ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ರಂಗಭೂಮಿ ಉಡುಪಿ ವತಿಯಿಂದ ಪ್ರದೀಪ್ ಚಂದ್ರ ಕುತ್ಪಾಡಿ ನಿರ್ದೇಶನದ ಸುಪ್ರಸಿದ್ಧ ನಾಟಕ 'ಕಾಲಚಕ್ರ ' ಪ್ರದರ್ಶನಗೊಂಡಿತು.

ನಾನು ಶಾಸಕನಾಗಿದ್ದಾಗ ಶಾಸಕರ ದಿನಾಚರಣೆ ಸಂದರ್ಭದಲ್ಲಿ ಬಭ್ರುವಾಹನ ಪ್ರಸಂಗ ಯಕ್ಷಗಾನ ನಡೆಸಲು ತೀರ್ಮಾನಿಸಲಾಗಿತ್ತು. ಎಡನೀರು ಮಠದ ಶ್ರೀಗಳು ಬಂದು ನಮಗೆ ಒಂದು ವಾರದ ತರಬೇತಿ ಕೂಡಾ ನೀಡಿದ್ದರು. ಅದರಲ್ಲಿ ನಾನು ಶ್ರೀಕೃಷ್ಣನ ಪಾತ್ರ ವಹಿಸಿದ್ದೆ. ಅದೇ ರೀತಿ ವೀರಪ್ಪ ಮೊಯಿಲಿ, ಜೀವರಾಜ ಆಳ್ವ ಕೂಡಾ ವೇಷ ಹಾಕಿದ್ದರು. ಕಾರ್ಯಕ್ರಮ ನಡೆಯುವಾಗ ಚೆಂಡೆಯ ಪೆಟ್ಟಿಗೋ ಏನೋ ನಮಗೆ ಅಂದರೆ ಯಕ್ಷಗಾನಕ್ಕೆ ಪ್ರಥಮ ಸ್ಥಾನ ಬಂತು. ನಾವು ಎಡಕಾಲು ಇಡುವಲ್ಲಿ ಬಲಕಾಲನ್ನೋ, ಬಲಕಾಲು ಇಡುವಲ್ಲಿ ಎಡಕಾಲನ್ನೋ ಇಟ್ಟು ಯಕ್ಷಗಾನ ನಡೆಸಿದೆವು. ಈ ಸಂದರ್ಭದಲ್ಲಿ, ನೋಡಲಿಕ್ಕೆ ಬಹಳ ಆಕರ್ಷಣೆ ಹೌದು ಆದರೆ ಯಕ್ಷಗಾನ ಎಂದರೆ ಎಷ್ಟು ಕಷ್ಟ ಎಂಬುದನ್ನು ಅರಿತೆವು. ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಅಕಾಡೆಮಿ ಮೂಲಕ ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇಂಗ್ಲೀಷ್, ಹಿಂದಿಯಲ್ಲಿ ಯಕ್ಷಗಾನ ಬಂತು. ಮುಂದೆ ಇನ್ನೂ ಅನೇಕ ಭಾಷೆಗಳಲ್ಲಿಯೂ ಯಕ್ಷಗಾನ ಪ್ರದರ್ಶನ ನಡೆಯಲಿ. ಅದಕ್ಕೆ ನಾವು ಬೆಂಬಲ ನೀಡಬೇಕಾಗಿದೆ ಎಂದು ವಿನಯ ಕುಮಾರ್ ಸೊರಕೆ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು