Header Ads Widget

'ಸರ್ವರಿಗೂ ಸೂರು' ಪ್ರಧಾನಮಂತ್ರಿ ಆವಾಸ್ ಗೃಹ ನಿರ್ಮಾಣ ಯೋಜನೆಯಡಿ ೧ ಕೋಟಿ ಮನೆ ನಿರ್ಮಾಣದ ಗುರಿ: ಸಂಸದ ಕೋಟ

ಉಡುಪಿ: ಪ್ರಧಾನಮಂತ್ರಿ ಆವಾಸ್ ಗೃಹ ನಿರ್ಮಾಣ ಯೋಜನೆಯ ಮೂಲಕ ಭಾರತ ಸರ್ಕಾರವು ಸರ್ವರಿಗೂ ಸೂರು ಒದಗಿಸಲು ೨ನೇ ಹಂತದ ಗೃಹ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಿದೆ ಎಂದು ಮತ್ತು ಇದರಿಂದ ಮುಂದಿನ ೫ ವರ್ಷದಲ್ಲಿ ದೇಶದಾದ್ಯಂತ ನಗರ ಪ್ರದೇಶದಲ್ಲಿ ೧ ಕೋಟಿ ಬಡ ಜನರಿಗೆ ಮನೆ ಒದಗಿಸಲು ಸಹಾಯಧನ ನೀಡುವುದಾಗಿ ಭಾರತದ ಪ್ರಧಾನಮಂತ್ರಿ ನರೇoದ್ರ ಮೋದಿಯವರು ನಿಶ್ಚಯಿಸಿದ್ದಾರೆ. 

ಈ ಕಾರಣಕ್ಕಾಗಿ ಪ್ರತಿ ನಗರ ಪ್ರದೇಶದಲ್ಲಿರುವ ಬಡವರನ್ನು ಗುರುತಿಸಿ, ಮನೆ ಮತ್ತು ನಿವೇಶನ ಒದಗಿಸಲು ನಗರ ಸ್ಥಳೀಯಾಡಳಿತ ಜನಪ್ರತಿನಿಧಿಗಳು ಶ್ರಮಿಸಬೇಕೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸರ್ವರಿಗೂ ಸೂರು ಯೋಜನೆಯ ಕಾರ್ಯಗಾರವನ್ನು ಉದ್ಘಾಟಿಸಿ, ಫಲಕವನ್ನು ಅನಾವರಣಗೊಳಿಸಿ ಸಂಸದ ಕೋಟ ಮಾತನಾಡಿದರು.

ಈಗಾಗಲೇ ತಳಗಟ್ಟು ಹಾಕಿ ಕಾಯುತ್ತಿರುವ ಹಾಗೂ ಮುಕ್ತಾಯ ಹಂತದಲ್ಲಿದ್ದ ಮನೆಗೆ ಈ ಯೋಜನೆ ವಿಸ್ತರಿಸಲು ಸ್ಥಳೀಯ ನಗರಾಡಳಿತ ಜನಪ್ರತಿನಿಧಿಗಳು ವಿನಂತಿಸಿದಾಗ ಈ ಬಗ್ಗೆ ಇಲಾಖೆಯೊಂದಿಗೆ ಹಾಗೂ ಮೇಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಕೋಟ ಹೇಳಿದ್ದಾರೆ. 

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಯಾಗಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾಗುವುದು ಆದಾಗ್ಯೂ ಮಾಜಿ ಯೋಧರು, ವಿಧುರರು, ಅಂಗವಿಕಲರು, ಹಿರಿಯ ನಾಗರಿಕರಿಗೂ ಸಹ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸಂಸದರು ತಿಳಿಸಿದರು.

ಅರ್ಜಿದಾರರು ಆಧಾರ್‌ಕಾರ್ಡ್, ನಿವೇಶನಕ್ಕೆ ಸಂಬoಧಿಸಿದ ಹಕ್ಕುಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋಟ ತಿಳಿಸಿದರು. ಈಗಾಗಲೇ ಪ್ರಥಮ ಹಂತದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಗತಿ ಹಂತದಲ್ಲಿದ್ದು, ಉಡುಪಿ ಜಿಲ್ಲೆಯಲ್ಲಿ ೧೩೨೦ ಮನೆಗಳು ಪೂರ್ಣಗೊಂಡಿದ್ದು, ಹೊಸದಾಗಿ ೨ನೇಯ ಹಂತದ ಯೋಜನೆಯಡಿ ೩೯೫ ಅರ್ಜಿಗಳು ಬಂದಿವೆ ಎಂದು ಸಂಸದರು ಸಭೆಗೆ ತಿಳಿಸಿದರು.

ಎಲ್ಲರೂ ಒಟ್ಟಾಗಿ ಶ್ರಮವಹಿಸಿ ದುಡಿದರೆ ಇನ್ನೂ ೫ ವರ್ಷದಲ್ಲಿ ಮನೆ ಸಮಸ್ಯೆ ನಗರ ಪ್ರದೇಶದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸುತ್ತಾ ಈ ಗುರಿಯನ್ನು ನಾವು ಸಾಧಿಸಬಹುದು ಎಂದರು.

ಸಭೆಯ ಅಧ್ಯಕ್ಷರಾದ ಹಾಗೂ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ಜಿಲ್ಲಾ ಮಟ್ಟದಲ್ಲಿ ನಡೆಯಬೇಕಾಗಿದ್ದ ಸಭೆ ಸಾಲಿಗ್ರಾಮ ಪಟ್ಟಣ ಪಂಚಾಯತಿಯಲ್ಲಿ ನಡೆಯುತ್ತಿದ್ದು, ಇದರ ಗಂಭೀರತೆಯನ್ನು ಅರ್ಥ ಮಾಡಿಕೊಂಡು ವಸತಿ ಸಮಸ್ಯೆ ಮುಕ್ತ ನಗರವನ್ನಾಗಿ ಮಾಡಬೇಕೆಂದು ವಿನoತಿಸಿದರು.

ಸಭೆಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಅಧ್ಯಕ್ಷರಾದ ಶ್ರೀ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀಮತಿ ಗಿರಿಜಾ, ಸದಸ್ಯರಾದ ಅನುಸೂಯ ಹೆರ್ಳೆ, ರಾಜು ಪೂಜಾರಿ, ಸುಲತಾ ಹೆಗ್ಡೆ, ಶ್ಯಾಮ ಸುಂದರ್ ನಾಯರ್, ಸಂಜೀವ ದೇವಾಡಿಗ, ಗಣೇಶ್, ರತ್ನಾ ಗಾಣಿಗ ಮತ್ತು ಭಾಸ್ಕರ ಬಂಗೇರ ಉಪಸ್ಥಿತರಿದ್ದರು. 

ಉಡುಪಿ ನಗರಸಭೆಯ ಮುಖ್ಯಾಧಿಕಾರಿ ಮಾಲತೇಶ್ ಸ್ವಾಗತಿಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಯಾದ ಅಜಯ್ ಭಂಡಾರ್‌ಕರ್ ಪ್ರಾಸ್ತಾವಿಕ ಮಾತನಾಡಿದರು.

ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೋಹನ್ ರಾಜ್ ಮತ್ತು ಕುಂದಾಪುರ, ಕಾಪು, ಕಾರ್ಕಳದ ಪುರಸಭಾಅಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು