ತುಳುನಾಡು – ತಾಯಿ ನದಿಗಳ ನುಡಿಗಟ್ಟಿನಲ್ಲಿ ಹೆಸರಾಗಿರುವ ಭೂಮಿ. ಇಲ್ಲಿ ಕೇವಲ ಮಣ್ಣು ಮಾತ್ರವಲ್ಲ, ಮನುಷ್ಯನ ಮನಸ್ಸು ಕೂಡ ನಿಸರ್ಗದ ಲಯದೊಂದಿಗೆ ಹೆಜ್ಜೆ ಹಾಕುತ್ತದೆ. ಇಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಆಚರಣೆ, ಪ್ರತಿ ನಂಬಿಕೆ ನಿಸರ್ಗದೊಂದಿಗೆ ಏಕಾತ್ಮತೆಯಿಂದ ನಡೀತಿದ್ದು, ಪ್ಲಾಸ್ಟಿಕ್ ರಹಿತ ಸಂಸ್ಕೃತಿಯ ನಿಜವಾದ ನಿದರ್ಶನವಾಗಿದ್ದುದು ಶ್ರದ್ಧಾ ಮತ್ತು ಶುದ್ಧತೆಯ ಮಿಶ್ರ ರೂಪವಾಗಿದೆ.
ಅದರಲ್ಲಿ ಕಾಂತಾರ ಚಿತ್ರದ ಬಳಿಕ , ಪಂಜುರ್ಲಿ ದೈವ ಎಂಬ ನಾಮ ಸದ್ದಿಲ್ಲದೆ ನಡು ಕಾಡುಗಳಲ್ಲಿ ಹರಡುವ ಗಾಳಿ ನುಡಿಯಂತೆ ಜನಮನದಲ್ಲಿ ವಾಸಿಸುತ್ತದೆ. ಎಲ್ಲೆಡೆ ಪಸರಿಸಿದೆ. ಪಂಜುರ್ಲಿ – ಕಾಡಿನ ಜೀವಂತ ಪ್ರತೀಕ, ನಿಸರ್ಗದ ಜೀವಾಳ, ಗ್ರಾಮಗಳ ರಕ್ಷಕ. ಈ ದೈವ ಪಾರಂಪರ್ಯವಾಗಿ ಗ್ರಾಮೀಣ ಜನತೆ ಹೃದಯದಲ್ಲಿ ಸ್ಥಾನ ಪಡೆದಿದ್ದು, ಅದು ಕೇವಲ ದೇವರನ್ನು ನೆನೆಯುವುದು ಅಲ್ಲ, ಬದುಕನ್ನು, ಭೂಮಿಯನ್ನು, ಬೆಳೆಗಾರಿಕೆಯನ್ನು ದೇವರೂಪದಲ್ಲಿ ಪೂಜಿಸುವ ಪುಣ್ಯ ಕಾರ್ಯವಾಗಿದೆ.
ತಡಪೆ – ಇದು ಪಂಜುರ್ಲಿ ದೈವಕ್ಕೆ ಮೀಸಲಾದ ಶ್ರದ್ಧಾ ಸಮರ್ಪಿತ ವಿಶೇಷ ವಸ್ತು. ಮರದ ಬೀಳುಗನ್ನು ತೆಗೆದು ತುಂಡರಿಸಿ ತಡಪೆ ನೇಯುತ್ತಾರೆ . ಇತ್ತೀಚಿನ ಕಾಲದಲ್ಲಿ ಪ್ಲಾಸ್ಟಿಕ್ ನಕಲಿ ಮಾಲೆಗಳ ನಡುವೆಯೂ, ತುಳುನಾಡಿನಲ್ಲಿ ನಡೆಯುವ ಈ ತಡಪೆ ಇನ್ನೂ ಕೂಡ ಪೂರ್ಣವಾಗಿ ನೈಸರ್ಗಿಕವಾಗಿದೆ. ಇಲ್ಲಿ ಅಡಿಕೆ, ವೀಳ್ಯದೆಲೆ, ತೆಂಗಿನಕಾಯಿ, ಹೂವಿನ ತೊಟ್ಟಿಲು, ಮತ್ತು ತಂಪಾಗಿ ಬೀರುವ ಅರ್ಪಣೆಗೆ ಬಳಸಲಾಗುತ್ತವೆ – ಎಲ್ಲವೂ ನೈಸರ್ಗಿಕವಾಗಿಯೇ.
ವಿಶೇಷವಾಗಿ, ಭತ್ತ – ಅನ್ನದ ರೂಪದಲ್ಲಿ ದೇವರಿಗೆ ಅರ್ಪಿಸುತ್ತಾರೆ. ಇದು ಕೇವಲ ಧಾನ್ಯವಲ್ಲ, ಪಂಜುರ್ಲಿಗೆ ಹೇಳುವ ಪ್ರೀತಿ ಮತ್ತು ಕೃತಜ್ಞತೆಯ ಸಂಕೇತ. ಭತ್ತದಿಂದ ತಯಾರಾದ ತಡಪೆ ಅಂದರೆ, ನಮ್ಮ ಭೂಮಿ ತಾಯಿಗೆ ಸಲ್ಲಿಸುವ ನಮನ.
ಪಂಜುರ್ಲಿಗೆ ಶರಣಾಗುವ ಭಕ್ತರು ಒಂದು ನಂಬಿಕೆಯಲ್ಲಿ ಜೀವಿಸುತ್ತಾರೆ – ಈ ದೈವ ಬರುವುದರಿಂದ ಗ್ರಾಮದಲ್ಲಿ ಶಾಂತಿ ಬರುವುದು, ಬೆಳೆಗಳಲ್ಲಿ ಸಮೃದ್ಧಿ, ಮನಸ್ಸುಗಳಲ್ಲಿ ನೆಮ್ಮದಿ ಮೂಡುವುದು. ಈ ನಂಬಿಕೆಗಳು ತಾತ್ವಿಕವಾಗಿಯೂ, ಜೀವನೋಪಾಯದಲ್ಲಿಯೂ ಆಳವಾಗಿ ಬೆಳೆದಿವೆ.
ಈ ಸಂಸ್ಕೃತಿಯ ರಕ್ಷಣೆ, ಸಂಭ್ರಮದಿಂದ ಸಂಪ್ರದಾಯಗಳನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸುವ ಪದ್ಧತಿಯು ಇಡೀ ವಿಶ್ವಕ್ಕೆ ಒಂದಿಷ್ಟು ಬುದ್ಧಿಮಾತು ಹೇಳುವಂತೆ ಕಾಣುತ್ತದೆ – ಭಕ್ತಿಯಲ್ಲಿ ಸ್ವಚ್ಛತೆ ಇರಲಿ, ಸಂಸ್ಕೃತಿಯಲ್ಲಿ ನಿಸರ್ಗ ಇರಲಿ.
ತುಳುನಾಡಿನ ಪವಿತ್ರ ನೆಲದಲ್ಲಿ ಪಂಜುರ್ಲಿಯ ಆನೆದಂತ ಹೆಜ್ಜೆಗಳು ಇನ್ನೂ ಕೇಳಿಸುತ್ತಿವೆ... ನಿಸರ್ಗದ ನಾದದಲ್ಲಿ ದೈವದ ಆರಾಧನೆಯ ಮಾತು ಪ್ರತಿಧ್ವನಿಸುತ್ತಿದೆ.
~ರಾಮ್ ಅಜೆಕಾರು ಕಾರ್ಕಳ
0 ಕಾಮೆಂಟ್‌ಗಳು