Header Ads Widget

ಜೀವನ್ ಅವರಿಗೆ ಜೀವಮಾನದ ಪ್ರಶಸ್ತಿ‌ ಪ್ರದಾನ

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘವು ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ತುಮಕೂರಿನ ರಾಜನ್ ಪುತ್ರ ಕೃಷ್ಣಕಾಂತ್ ಅವರ ದತ್ತಿಯಲ್ಲಿ ಹಿರಿಯ ವ್ಯಂಗ್ಯಚಿತ್ರಕಾರರಾದ ಉಡುಪಿಯ ಜೀವನ್ ಶೆಟ್ಟಿ ಅವರಿಗೆ ಜೀವಮಾನದ ಪ್ರಶಸ್ತಿಯನ್ನು ಸೆಪ್ಟೆಂಬರ್ 6, 2025 ರಂದು ಬೆಂಗಳೂರಿನ ಎಂ ಜಿ ರಸ್ತೆಯ ಭಾರತೀಯ ವ್ಯಂಗ್ಯಚಿತ್ರಕಾರರ ಗ್ಯಾಲರಿಯಲ್ಲಿ ರಾಜ್ಯದ ಹಲವು ಜಿಲ್ಲೆಯ ವ್ಯಂಗ್ಯಚಿತ್ರಕಾರರ ಸಮ್ಮುಖದಲ್ಲಿ ಪ್ರದಾನ ಮಾಡಿದರು.

ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಮಾತಾಡಿದ ಜೀವನ್ ಅವರು ತಾವು ಈ ಮಟ್ಟಕ್ಕೆ ಬೆಳೆಯಲು ನನ್ನ ಡ್ರಾಯಿಂಗ್ ಟೀಚರ್ ಅವರೇ ಕಾರಣ. ಅಲ್ಲದೇ ನಾನು ಈ ಥರ ಚಿತ್ರ ಬರೆಯುವಾಗ ನನಗೆ ಪ್ರೋತ್ಸಾಹ ಕೊಟ್ಟ ನನ್ನ ಅಪ್ಪ-ಅಮ್ಮ ಹಾಗೂ ತಮ್ಮಂದಿರನ್ನು ನೆನೆಯಬೇಕು. ಅಲ್ಲದೇ ಈ ಕ್ಷೇತ್ರದ ಎಲ್ಲಾ ಬೆಳವಣಿಗೆಗೆ ಕಾರಣದವರಿಗೆ ಈ ಪ್ರಶಸ್ತಿಯನ್ನು ಅರ್ಪಿಸುವೆನು. ಎಲ್ಲಿಯವರೆಗೆ ನನ್ನ ಕಾರ್ಟೂನ್ಗಳು ಪ್ರಿಂಟ್ ಆಗುತ್ತಾ ಇರುತ್ತವೋ ಅಲ್ಲಿಯವರೆಗೂ ಕಾರ್ಟೂನ್ ಬರೆಯುತ್ತಲ್ಲೇ ಇರುತ್ತೀನಿ ಎಂದರು.

ಸಂಘದ ಅಧ್ಯಕ್ಷರಾದ ವಿ ಆರ್ ಸಿ ಶೇಖರ್ ಅವರು ಮಾತಾಡಿ ಹಿರಿಯ ವ್ಯಂಗ್ಯಚಿತ್ರಕಾರ ಜೀವನ್ ಅವರಿಗೆ ಈ ಬಾರಿಯ ಜೀವಮಾನದ ಪ್ರಶಸ್ತಿ ಕೊಡಲು ಸಂಘದಲ್ಲಿ ತೀರ್ಮಾನಿಸಲಾಯ್ತು. ಈ ಆಯ್ಕೆಯನ್ನು ಜೀವನ್ ಅವರು ಒಪ್ಪಿ ದೂರದ ಊರಿಂದ ಬಂದು ಸನ್ಮಾನ ಸ್ವೀಕರಿಸಿದ್ದು ನಮಗೆ ಖುಷಿಯನ್ನು ತಂದಿದೆ. ಅವರು ಮುಂದೆಯೂ ನಮ್ಮೊಂದಿಗೆ ಸಕ್ರಿಯರಾಗಿರಲಿ ಎಂದು ಆಶಿಸಿದರು.

ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವ್ಯಂಗ್ಯಚಿತ್ರಕಾರ ಎಂ ವಿ ಶಿವರಾಂ ಅವರು ಮಾತಾಡುತ್ತಾ ಸನ್ಮಾನಿತ ಜೀವನ್ ಅವರ ಇಬ್ಬರು ತಮ್ಮಂದಿರೂ ವ್ಯಂಗ್ಯಚಿತ್ರಕಾರರು. ಹೀಗೆ ಒಂದೇ ಕುಟುಂಬದಲ್ಲಿ ಮೂವರು ವ್ಯಂಗ್ಯಚಿತ್ರಕಾರರು ಇರುವುದು ಅಪರೂಪ. ಇದು ದಾಖಲಾಗಬೇಕಾದ ವಿಷಯ. ಜೀವನ್ ಅವರು ನಮ್ಮ ಸಂಘವು ಮಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಟೂನ್ ಪ್ರದರ್ಶನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಹೀಗೆ ಇವರ ಮಾರ್ಗದರ್ಶನವು ಮುಂದೆಯೂ ನಮ್ಮ ಸಂಘಕ್ಕೆ ಇರಲಿ ಎಂದರು.

ಸನ್ಮಾನಿತರನ್ನು ಕುರಿತು ವ್ಯಂಗ್ಯಚಿತ್ರಕಾರರಾದ ನಂಜುಂಡಸ್ವಾಮಿ, ಸುಬ್ರಹ್ಮಣ್ಯ ಹಾಗೂ ಇನ್ನಿತರು ಮಾತಾಡಿದರು.

ಹಿರಿಯ ವ್ಯಂಗ್ಯಚಿತ್ರಕಾರ ವಿಶ್ವನಾಥ್ ಅವರು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು