ಮೊಗವೀರ ಕುಲಗುರು ಪುತ್ಥಳಿ ಸ್ಥಾಪನೆ: ಮಾ.1ರಂದು ಗುರುಪಾದ ಕಾಣಿಕೆ ಸಮರ್ಪಣೆ

ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಮೊಗವೀರ ಸಮಾಜದ ಗುರು ಪರಂಪರೆಯ 9ನೇ ಹಾಗೂ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀಮಾಧವ ಮಂಗಲ ಪೂಜಾರ್ಯರ ಕಂಚಿನ ಪ್ರತಿಮೆಯನ್ನು ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳ ಆವರಣದಲ್ಲಿ ಸುಮಾರು 3 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿದ್ದು ಮಾ.1ರಂದು ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣೆ, ಬೃಹತ್ ಸಮಾವೇಶ ಹಾಗೂ ಬೈಕ್ ರ್ಯಾಲಿ ಆಯೋಜಿಸಿರುವುದಾಗಿಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕ‌ರ್ ತಿಳಿಸಿದರು.

ಶುಕ್ರವಾರ ದೇವಳದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಉಚ್ಚಿಲ ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ಶ್ರೀ ಮಾಧವ ಮಂಗಲ ಪೂಜಾರ್ಯರ ಪುತ್ಥಳಿ ಸ್ಥಾಪಿಸಲಾಗುತ್ತಿದೆ. ಪುತ್ಥಳಿ ಪ್ರತಿಷ್ಠಾಪನೆ ಸಮಾಜದ ಏಕತೆ, ಸ್ವಾಭಿಮಾನ ಹಾಗೂ ಗುರುಭಕ್ತಿಯ ಸಂಕೇತವಾಗಲಿದೆ. ಈ ಪುಣ್ಯ ಕಾರ್ಯದಲ್ಲಿ ಮೊಗವೀರ ಸಮಾಜ ಬಾಂಧವರು ಶಕ್ತ್ಯಾನುಸಾರ ಕಾಣಿಕೆ ನೀಡುವ ಉದ್ದೇಶದಿಂದ ಸಾಂಕೇತಿಕವಾಗಿ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಮಾ.1ರಂದು ಬೆಳಿಗ್ಗೆ 9.30ರಿಂದ ಉಚ್ಚಿಲ ಶ್ರೀಮತಿ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 10.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ದೇವಸ್ಥಾನದ ಮುಂಭಾಗದಲ್ಲಿ ಗುರುಗಳ ಪುತ್ಥಳಿ ನಿರ್ಮಿಸಲುದ್ದೇಶಿಸಿದ್ದು, ಗುರುಗಳ ಸ್ವರ್ಣಲೇಪಿತ ಪಾದುಕೆಗಳನ್ನಿಡಲು ಉದ್ದೇಶಿಸಲಾಗಿದೆ. ಅದೇ ಜಾಗದಲ್ಲಿ ಗುರು ಪಾದಕಾಣಿಕೆ ಸಮರ್ಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಕೇರಳದ ಉಪ್ಪಳದಿಂದ ಬೈಂದೂರು ತಾಲೂಕಿನ ಶೀರೂರು ವರೆಗಿನ ಒಟ್ಟು 336 ಮೊಗವೀರ ಗ್ರಾಮಸಭೆ ಹಾಗೂ ಕೂಡುಕಟ್ಟು ಸೇರಿದಂತೆ ದೇಶ- ವಿದೇಶಗಳಲ್ಲಿರುವ ಮೊಗವೀರ ಸಂಘಟನೆಗಳ ಸುಮಾರು 10 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸಮಾಜ ಭಾಂಧವರು ಭಾಗವಹಿಸಲಿದ್ದಾರೆ. ಈ ಮಹತ್ವದ ಕಾರ್ಯಕ್ರಮದಂಗವಾಗಿ ಮೊಗವೀರ ಸಮಾಜದ ಯುವ ಬಾಂಧವರಿಗಾಗಿ ದ್ವಿಚಕ್ರ ವಾಹನ ರ್ಯಾಲಿ ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ 9.30ಗೆ ನಡೆಯಲಿದೆ. ಸುಮಾರು 2 ಸಾವಿರ ದ್ವಿಚಕ್ರ ವಾಹನಗಳು ಭಾಗವಹಿಸುವ ನಿರೀಕ್ಷೆ ಇದ್ದು ಶಿಸ್ತುಬದ್ಧವಾಗಿ ಮತ್ತು ಸಂಚಾರ ನಿಯಮ ಪಾಲಿಸಿ ವಾಹನ ಜಾಥಾ ನಡೆಸಲಾಗುವುದು ಎಂದರು.

ಸಮಾರಂಭದಲ್ಲಿ 500ಕ್ಕಿಂತ ಅಧಿಕ ಯುವಕರಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೃಹತ್‌ ರಕ್ತದಾನ ಶಿಬಿರದ ಆಯೋಜಿಸಲಾಗುವುದು ಎಂದು ಡಾ.ಜಿ. ಶಂಕರ್ ವಿವರಿಸಿದರು.

ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಪಾಧ್ಯಕ್ಷ ಮೋಹನ ಬೆಂಗ್ರೆ, ಉಚ್ಚಿಲ ಕ್ಷೇತ್ರಾಧ್ಯಕ್ಷ ಗಿರಿಧರ್ ಸುವರ್ಣ, ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮನೋಜ್ ಸಾಲ್ಯಾನ್ ಶರಣ್ ಕುಮಾರ್ ಮಟ್ಟು ಮೊದಲಾದವರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು