ಕಾಪು: ಐಎಸ್‌ಪಿಆರ್‌ಎಲ್ ಕಚ್ಚಾ ತೈಲ ಸಂಗ್ರಹಣಾ ಘಟಕದ 2ನೇ ಹಂತದ ಯೋಜನೆಗೆ ಸ್ಥಳೀಯರಿಂದ ವಿರೋಧ

ಕಾಪು: ಪಾದೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರದ ಐಎಸ್‌ಪಿಆರ್‌ಎಲ್ ಕಚ್ಚಾ ತೈಲ ಸಂಗ್ರಹಣಾ ಘಟಕದ 2ನೇ ಹಂತದ ಯೋಜನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು ಯೋಜನೆಯ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ವಿರುದ್ಧ ಸ್ಥಳೀಯರ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಹಭಾಗಿತ್ವದೊಂದಿಗೆ “ಪಾದೂರು ಉಳಿಸಿ – ಪರಿಸರ ರಕ್ಷಿಸಿ” ಸಾಂಕೇತಿಕ ಪ್ರತಿಭಟನೆ ನಡೆಯಿತು.

ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿ,ಪ್ರಥಮ ಹಂತದಲ್ಲಿ ದೇಶದ ಭದ್ರತಾ ವಿಚಾರದ ಸಂಸ್ಥೆಯೆಂಬ ಕಾರಣಕ್ಕೆ ಐಎಸ್‌ಪಿಆರ್‌ಎಲ್ ಗೆ ಸಂಪೂರ್ಣ ಜನಬೆಂಬಲ ನೀಡಲಾಗಿತ್ತು. ಯೋಜನೆಯ ವಿಸ್ತರಣೆಯ ಭಾಗವಾಗಿ 2ನೇ ಹಂತದ ಕಾಮಗಾರಿ ಪ್ರಾರಂಭಿಸಲು ಭೂಸ್ವಾದೀನ ಗೊಳಿಸಲಾಗಿದ್ದು ಕಾಮಗಾರಿ ಆರಂಭಿಸುವಾಗ ಅಗತ್ಯ ಇಲಾಖೆಗಳ ಸಮರ್ಪಕ ಅನುಮತಿಗಳನ್ನು ಪಡೆಯದೇ, ಸ್ಥಳೀಯರ ಗಮನಕ್ಕೆ ತರದೆ ಏಕಾಏಕಿ ಕೆಲಸ ಆರಂಭಿಸಿರುವುದು ಖಂಡನೀಯವಾಗಿದೆ. ಐಎಸ್‌ಪಿಆರ್‌ಎಲ್ ಎರಡನೇ ಹಂತದ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿರುವ ಮೇಘಾ ಇಂಜಿನಿಯರಿಂಗ್ ಕಂಪನಿಯು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೆ ಹೊರರಾಜ್ಯದ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಕಾಮಗಾರಿ ಆರಂಭಿಸಿರುವುದಾಗಿ ಮಾಹಿತಿ ದೊರಕಿದ್ದು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್, ಶಾಸಕರು, ಸಂಸದರು ಯಾರೂ ಕೂಡಾ ಮಾತನಾಡುತ್ತಿಲ್ಲ.

ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು ಜನಾಭಿಪ್ರಾಯಕ್ಕೆ ಮನ್ನಣೆ ದೊರಕಿದ್ದಲ್ಲಿ ಉಗ್ರ ಹೋರಾಟ ನಡೆಸಲೂ ಸಿದ್ಧರಿದ್ದೇವೆ ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಎಸ್.ಡಿ.ಪಿ.ಐ ಮುಖಂಡ ಮಹಮ್ಮದ್ ಹನೀಫ್, ಪಾದೂರು ಹಿತರಕ್ಷಣಾ ಸಮಿತಿ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್ ಮಾತನಾಡಿದರು.

ಈ ಸಂದರ್ಭ ಪಾದೂರು ಉಳಿಸಿ – ಪರಿಸರ ರಕ್ಷಿಸಿ ಹೋರಾಟ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶರ್ಫುದ್ದೀನ್ ಶೇಖ್, ಪ್ರಮುಖರಾದ ಜಿತೇಂದ್ರ ಪುರ್ಟಾಡೋ, ರಾಜೇಶ್ ರಾವ್ ಪಾಂಗಾಳ, ಫಾರೂಕ್ ಚಂದ್ರನಗರ ಸೇರಿದಂತೆ ಕಾಪು ಪುರಸಭೆ ಸದಸ್ಯರು, ಜನಪ್ರತಿನಿಧಿಗಳು, ಪ್ರಗತಿಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು