ಉಡುಪಿ: ನಗರದ ಪ್ರಮುಖ ಜಂಕ್ಷನ್ ಆಗಿರುವ ಕರಾವಳಿ ಬೈಪಾಸ್ ಬಳಿ ವ್ಯಾಪಾರ ವೈಷಮ್ಯದ ಹಿನ್ನೆಲೆಯಲ್ಲಿ ಬೇಕರಿ ಮಾಲೀಕರೊಬ್ಬರ ಮೇಲೆ ಚಾಕು ತೋರಿಸಿ ಭೀಕರ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ.
ಕರಾವಳಿ ಬೈಪಾಸ್ ಬಳಿಯ ಪ್ರಸಿದ್ಧ ಪೂಜಾ ಬೇಕರಿ ಮಾಲೀಕರಾದ ಮುರಳಿಧರ ಎಂಬುವವರೇ ಹಲ್ಲೆಗೊಳಗಾದ ದುರ್ದೈವಿಯಾಗಿದ್ದು, ಪಕ್ಕದಲ್ಲೇ ಹೊಸದಾಗಿ ಬೇಕರಿ ಆರಂಭಿಸಿದ್ದ ಕೃಷ್ಣ ಬೇಕರಿಯ ಮಾಲೀಕ ಅಶೋಕ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಗಾಯಾಳು ಮುರಳಿಧರ ಅವರು ಕಳೆದ ಸುಮಾರು 20 ವರ್ಷಗಳಿಂದ ಕರಾವಳಿ ಬೈಪಾಸ್ ಬಳಿ ಅತ್ಯಂತ ಪ್ರಾಮಾಣಿಕವಾಗಿ ಬೇಕರಿ ಉದ್ಯಮ ನಡೆಸಿಕೊಂಡು ಬರುತ್ತಿದ್ದರು. ಆದರೆ, ಕೇವಲ ಒಂದು ವರ್ಷದ ಹಿಂದೆಯಷ್ಟೇ ಆರೋಪಿ ಅಶೋಕ್ ಎಂಬಾತ ಇವರ ಅಂಗಡಿಯ ಪಕ್ಕದಲ್ಲೇ ಮತ್ತೊಂದು ಬೇಕರಿ ವ್ಯವಹಾರವನ್ನು ಆರಂಭಿಸಿದ್ದ ಎನ್ನಲಾಗಿದೆ.
ಶನಿವಾರದಂದು ಏಕಾಏಕಿ ಮುರಳಿಧರ ಅವರ ಅಂಗಡಿಯ ಮುಂಭಾಗಕ್ಕೆ ಬಂದ ಆರೋಪಿ ಅಶೋಕ್ ತೀವ್ರ ಗಲಾಟೆ ಆರಂಭಿಸಿದ್ದಾನೆ. ನನ್ನ ವ್ಯಾಪಾರಕ್ಕೆ ನೀನು ತೊಂದರೆ ಕೊಡುತ್ತಿದ್ದೀಯಾ, ನಿನ್ನಿಂದಲೇ ನನ್ನ ಬಿಸಿನೆಸ್ ಹಾಳಾಗುತ್ತಿದೆ ಎಂದು ಕಿರುಚಾಡುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದಾನೆ. ಈ ವೇಳೆ ಸಮಾಧಾನದಿಂದಲೇ ಉತ್ತರಿಸಿದ ಮುರಳಿಧರ, ನಿನ್ನ ವ್ಯಾಪಾರಕ್ಕೆ ನಾನಾಗಲಿ, ನನ್ನ ಅಂಗಡಿಯಾಗಲಿ ಯಾವುದೇ ಅಡ್ಡಿಪಡಿಸುತ್ತಿಲ್ಲ ಎಂದು ಹೇಳಿ ಸುಮ್ಮನಾಗಿದ್ದಾರೆ.
ಮುರಳಿಧರ ಅವರ ಶಾಂತ ನಡೆಗೆ ಮತ್ತಷ್ಟು ಉದ್ರಿಕ್ತನಾದ ಆರೋಪಿ ಅಶೋಕ್, ರೌಡಿಯಂತೆ ವರ್ತಿಸಲು ಶುರು ಮಾಡಿದ್ದಾನೆ. ಮೊದಲು ಅಂಗಡಿಯ ಮುಂಭಾಗದಲ್ಲಿದ್ದ ಬೇಕರಿ ಸಾಮಗ್ರಿಗಳನ್ನು ರಸ್ತೆಗೆ ಎಸೆದು ಧ್ವಂಸಗೊಳಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಅಂಗಡಿಯ ಒಳಭಾಗಕ್ಕೆ ನುಗ್ಗಿ ಮಾಲೀಕ ಮುರಳಿಧರ ಅವರ ಕಾಲರ್ ಹಿಡಿದು ಜಗ್ಗಾಡಿದ್ದಾನೆ. ಅಲ್ಲದೆ ತನ್ನ ಬಳಿಯಿದ್ದ ಚಾಕುವನ್ನು ಹೊರತೆಗೆದು, ಸಾರ್ವಜನಿಕರ ಸಮ್ಮುಖದಲ್ಲೇ ಜೀವಬೆದರಿಕೆ ಒಡ್ಡಿ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.
ಮೊಬೈಲ್‌ನಲ್ಲಿ ದೃಶ್ಯ ಸೆರೆ – ಪೊಲೀಸ್ ದೂರು:
ಆರೋಪಿ ಅಶೋಕ್ ನಡೆಸುತ್ತಿದ್ದ ಈ ದಾಂಧಲೆ ಹಾಗೂ ರೌಡಿಸಂನ ಸಂಪೂರ್ಣ ಕೃತ್ಯವನ್ನು ಅಲ್ಲೇ ಇದ್ದ ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವೀಡಿಯೋ ತುಣುಕು ಲಭ್ಯವಿದ್ದು, ಘಟನೆಯ ತೀವ್ರತೆಗೆ ಸಾಕ್ಷಿಯಾಗಿದೆ.
ಈ ಭೀಕರ ಹಲ್ಲೆ ಹಾಗೂ ದೌರ್ಜನ್ಯದ ಕುರಿತು ಸಂತ್ರಸ್ತ ಮುರಳಿಧರ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ವ್ಯಾಪಾರ ವೈಷಮ್ಯಕ್ಕೆ ಚಾಕು ತೋರಿಸಿ ಹಲ್ಲೆ ನಡೆಸಿರುವ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

0 ಕಾಮೆಂಟ್‌ಗಳು