ಉಡುಪಿ ಪತ್ರಿಕಾ ಭವನ ಸಮಿತಿಯ ವಾರ್ಷಿಕ ಮಹಾಸಭೆಯು ಸಮಿತಿ ಸಂಚಾಲಕ ಅಜಿತ್ ಆರಾಡಿ ಅಧ್ಯಕ್ಷತೆಯಲ್ಲಿ ಪತ್ರಿಕಾಭವನದಲ್ಲಿ ಮಂಗಳವಾರ ನಡೆಯಿತು.
ಉಡುಪಿ ನಗರದ ಪತ್ರಿಕಾ ಭವನ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಪತ್ರಕರ್ತರ ಅನುಕೂಲಕ್ಕಾಗಿ ಆರೋಗ್ಯ ನಿಧಿಯನ್ನು ಸ್ಥಾಪಿಸುವ ಬಗ್ಗೆ ಸಮಿತಿ ಸದಸ್ಯರಿಂದ ಒಪ್ಪಿಗೆ ಪಡೆದುಕೊಂಡಿದ್ದು, ಈ ಹಿಂದಿನ ಹಳೆಯ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕ್ರೋಢೀಕರಿಸಿ ಸುಮಾರು 3 ಲಕ್ಷ ರೂ. ವನ್ನು ಆರೋಗ್ಯ ನಿಧಿಗೆ ಮೀಸಲಿಡುವ ಬಗ್ಗೆ ನಿರ್ಣಯ ಮಾಡಿ ಘೋಷಿಸಲಾಯಿತು.
ಮಹಾಸಭೆ ಆರಂಭಕ್ಕೂ ಮುನ್ನ ಅಗಲಿದ ಹಿರಿಯ ಪತ್ರಕರ್ತ ಜಯಕರ ಸುವರ್ಣ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಮಿತಿ ಸಂಚಾಲಕ ಅಜಿತ್ ಆರಾಡಿ 2022 ರ ನವೆಂಬರ್ 1 ರಿಂದ 2023 ರ ಮಾರ್ಚ್ 31 ರ ವರೆಗೆ ಹಾಗೂ 2023 ಏಪ್ರಿಲ್ 1 ರಿಂದ 2024 ರ ಮಾರ್ಚ್ 31 ರ ವರೆಗಿನ ಸಾಲಿನಲ್ಲಿ ಸಮಿತಿ ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ವರದಿಯನ್ನು ವಾಚಿಸಿದರು. ವರದಿಯ ಬಗ್ಗೆ ಸದಸ್ಯರ ಅಭಿಪ್ರಾಯವನ್ನು ಕ್ರೋಢಿಕರಿಸಲಾಯಿತು.
2022 ನವೆಂಬರ್ನಿಂದ 2024 ರ ಮಾರ್ಚ್ 31 ರ ವರೆಗಿನ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟು ಚರ್ಚಿಸಿ, ಪ್ರಶ್ನಾವಳಿಗೆ ಅವಕಾಶ ಕೊಟ್ಟು ಅಂಗೀಕಾರ ಮಾಡಲಾಯಿತು.
ಪತ್ರಿಕಾ ಭವನದಲ್ಲಿ ಕೆಲವೊಂದು ನಿಯಮಾವಳಿಯನ್ನು ರೂಪಿಸುವ ಬಗ್ಗೆ ಸದಸ್ಯರು ಸಲಹೆ ಸೂಚನೆ ಕೊಟ್ಟರು.
ಸಮಿತಿ ಸಹಸಂಚಾಲಕ ನಜೀರ್ ಪೊಲ್ಯ ಸಮಿತಿ ಅನುಷ್ಠಾನಕ್ಕೂ ಮುನ್ನ ಪ್ರೆಸ್ಕ್ಲಬ್ನ ಆದಾಯದ ಲೆಕ್ಕಾಚಾರವನ್ನು ಶೀಘ್ರವೇ ಮಂಡಿಸಿ ಉಳಿದ ಮೊತ್ತವನ್ನು ಸಂಘದ ಖಾತೆಗೆ ಜಮೆ ಮಾಡುವ ಬಗ್ಗೆ ವಿಷಯ ಮಂಡಿಸಿದರು. ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರಿಂದ ಒಪ್ಪಿಗೆ ಪಡೆದುಕೊಂಡರು.
ಸಂಘದ ಅಧ್ಯಕ್ಷ, ಸಮಿತಿ ಗೌರವ ಸದಸ್ಯ ರಾಜೇಶ್ ಶೆಟ್ಟಿ ಅಲೆವೂರು, ಗೌರವ ಸದಸ್ಯ, ಸಂಘದ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಸಮಿತಿ ಸದಸ್ಯ ಅವಿನ್ ಶೆಟ್ಟಿ ಸ್ವಾಗತಿಸಿದರು. ಸಹ ಸಂಚಾಲಕ ಅಂಕಿತ್ ಶೆಟ್ಟಿ ವಂದಿಸಿದರು.