ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ಬೀಸಿದ ಬಲೆಗೆ ಸಿಲುಕಿ ನ್ಯಾಯಾಂಗ ಬಂಧನದಲ್ಲಿದ್ದ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು (40) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಿಮ್ಮರಾಜು ಚಿತ್ರದುರ್ಗ ಬಂಧಿಖಾನೆಯಲ್ಲಿ ನ್ಯಾಯಾಂಗದ ವಶದಲ್ಲಿದ್ದರು. ಕಾರಾಗೃಹದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇ-ಖಾತೆ ಮಾಡಿಕೊಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಖ್ಯಾಧಿಕಾರಿ ತಿಮ್ಮರಾಜು ಪುರಸಭೆ ಸದಸ್ಯ ಎನ್ ಶಂಕ್ರಪ್ಪ ಬಳಿ 25 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ತಂಡಕ್ಕೆ ಸಿಕ್ಕಿ ಬಿದ್ದಿದ್ದರು.