ವಿದುಷಿ ಉಷಾ ಹೆಬ್ಬಾರ್ ಅವರು ಶಾಸ್ತ್ರೀಯ ಸಂಗೀತ ಗಾಯಕಿ. ಉಡುಪಿ– ಮಣಿಪಾಲ ಪ್ರದೇಶವನ್ನು ಕೇಂದ್ರವಾಗಿಸಿಕೊಂಡು ಭಾರತೀಯ ಶಾಸ್ತ್ರೀಯ ಹಾಗೂ ಭಕ್ತಿಗೀತೆಗಳ ಸಂಗೀತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಯಸ್ಸಿನ ಮಿತಿಯಿಲ್ಲದೆ ನಡೆಯುವ ಅವರ ಭಜನೆಯ ತರಗತಿಗಳು ಎಲ್ಲರ ಮೆಚ್ಚುಗೆಗೆ ಪಾತ್ರ ವಾಗಿದೆ. ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಇವರು ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಅನೇಕ ಭಜನ ಕಾರ್ಯಕ್ರಮಗಳು, ಸಂಗೀತೋತ್ಸವಗಳು ಹಾಗೂ ಸಾಂಸ್ಕೃತಿಕ ಸಮಾರಂಭಗಳಲ್ಲಿ ಪ್ರಮುಖ ಗಾಯಕಿಯಾಗಿ ಪಾಲ್ಗೊಂಡಿದ್ದಾರೆ. ಅವರ ಸಂಗೀತದಲ್ಲಿ ಕಾಣುವ ಶಿಸ್ತು, ಭಕ್ತಿಭಾವ ಮತ್ತು ಸಾಂಸ್ಕೃತಿಕ ಮೌಲ್ಯಗಳು ಶ್ರೋತೃವರ್ಗದ ಮೆಚ್ಚುಗೆಗೆ ಪಾತ್ರವಾಗಿವೆ.
ಭಜನ ಮಂಡಳಿಗಳ ನೇತೃತ್ವ ವಹಿಸುವುದರ ಜೊತೆಗೆ, ಯುವ ಕಲಾವಿದರಿಗೆ ಸಂಗೀತ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಅವರು ಗುರು–ಶಿಷ್ಯ ಪರಂಪರೆಯನ್ನು ಜೀವಂತವಾಗಿರಿಸಿದ್ದಾರೆ. ಸಂಗೀತವನ್ನು ಕೇವಲ ಕಲೆಯಾಗಿ ಮಾತ್ರವಲ್ಲದೆ ಸಮಾಜಸೇವೆಯ ಮಾಧ್ಯಮವಾಗಿಯೂ ಬಳಸಿರುವುದು ಅವರ ಸಾಧನೆಯ ವಿಶೇಷತೆಯಾಗಿದೆ. ಸಂಗೀತ ಕ್ಷೇತ್ರದಲ್ಲಿನ ಅವರ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಸಂದಿವೆ, ಇದೀಗ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ಸಂಗೀತ ರತ್ನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

0 ಕಾಮೆಂಟ್‌ಗಳು