ಭಾರೀ ಗಾಳಿ ಮಳೆಗೆ ಮರದ ಕೊಂಬೆ ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ಕಡಿದು ಬಿದ್ದು ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದ ಕುಂದಾಪುರ ಮೂಲದ ಯುವ ಯಕ್ಷಗಾನ ಕಲಾವಿದ ರಂಜಿತ್ ಬನ್ನಾಡಿ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಶೃಂಗೇರಿಯ ಕೊಪ್ಪ ಸಮೀಪದಲ್ಲಿ ಏರ್ಪಾಟಾಗಿದ್ದ ಸೂರಾಲು ಮೇಳದ ಯಕ್ಷಗಾನ ಪ್ರದರ್ಶನ ಮಳೆಯಿಂದ ರದ್ದಾದ ಕಾರಣ ಕಲಾವಿದರು ಅರ್ಧದಲ್ಲಿ ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ಆಗುಂಬೆ ಬಳಿಯಿಂದ ರಂಜಿತ್ ತನ್ನ ಬೈಕಿನಲ್ಲಿ ಬರುತ್ತಿದ್ದಾಗ ಗಾಳಿ ಮಳೆಗೆ ಮರದ ಕೊಂಬೆ ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇದರಿಂದ ದ್ವಿಚಕ್ರ ವಾಹನ ಬಿಡುತ್ತಿದ್ದ ರಂಜಿತ್ ಗಂಭೀರ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರು. ಈ ವೇಳೆ ಹಿಂಬದಿ ಸವಾರ ಸ್ತ್ರೀ ಪಾತ್ರಧಾರಿ ವಿನೋದ್ ರಾಜ್ ಎನ್ನುವವರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ.ಘಟನೆ ನಡೆದ ಕೂಡಲೇ ಸ್ಥಳೀಯರು ಸೇರಿ ರಂಜಿತ್ ಅವರನ್ನು ತುರ್ತಾಗಿ ಮಣಿಪಾಲ ಅಸ್ಪತ್ರೆಗೆ ತರಲಾಯಿತಾದರೂ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆಯಾಗಿತ್ತು. ಕಾಡಿನ ಮಧ್ಯದ ರಸ್ತೆಯಲ್ಲಿ ಬರುತ್ತಿದ್ದಾಗ ಯಕ್ಷಗಾನ ಕಲಾವಿದರ ಪಾಲಿಗೆ ವಿದ್ಯುತ್ ತಂತಿ ಯಮನ ರೂಪದಲ್ಲಿ ಬಂದೆರಗಿತ್ತು.