ಕೋಟ: ಕುಂದಾಪುರ ಕನ್ನಡ ಎಂಬ ಗ್ರಾಮೀಣ ಸೊಗಡಿನ ಕನ್ನಡ ಭಾಷೆ ಕೇವಲ ಭಾಷೆಯಾಗಿ ಉಳಿದಿಲ್ಲ, ಬದಲಾಗಿ ಕುಂದಾಪುರ ಕನ್ನಡ ಕರಾವಳಿ ಭಾಗದ ಜನರ ಬದುಕಾಗಿ ಜನ ಜೀವನದಲ್ಲಿ ಹಾಸು ಹೊಕ್ಕಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕೋಟ ಶಿವರಾಮ ಕಾರಂತ ಥೀಂ ಪಾರ್ಕಿನಲ್ಲಿ ಕುಂದಾಪುರ ಕನ್ನಡದ “ಕಾಂಬ” ೫ನೇ ಸಮಾವೇಶದ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಕುಂದಾಪುರ ಕನ್ನಡ ಸಮಾವೇಶದ ಘನ ಅಧ್ಯಕ್ಷತೆ ವಹಿಸಿದ್ದ ಡಾ. ಅಣ್ಣಯ್ಯ ಕುಲಾಲ್ ದಂಪತಿಗಳಿಗೆ ಕುಂದಾಪುರ ಕನ್ನಡಿಗರ ಪರವಾಗಿ ಸನ್ಮಾನಿಸಿದ ಕೋಟ, ಮೊದಮೊದಲು ಕುಂದಾಪುರದ ಕನ್ನಡವನ್ನು ಸಾರ್ವಜನಿಕವಾಗಿ ಮಾತನಾಡಲು ತಡಕಾಡುತ್ತಿದ್ದ ದಿನಗಳಿದ್ದವು. ಇಂದಿನ ದಿನಗಳಲ್ಲಿ ಕುಂದಾಪುರ ಕನ್ನಡಕ್ಕೆ ತನ್ನದೇ ಆದ ಗೌರವ ಘನತೆಗಳು ಹೆಚ್ಚುತ್ತಿವೆ. ಆದ್ದರಿಂದ, ಕುಂದಾಪುರ ಕನ್ನಡವನ್ನು ಹೆಮ್ಮೆಯಿಂದ ಹಂಚಿಕೊಳ್ಳೋಣ ಎಂದು ಕರೆಯಿತ್ತರು. ಸಭೆಯಲ್ಲಿ ಶ್ರೀ ಆನಂದ್ ಸಿ. ಕುಂದರ್, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಶ್ರೀ ಸತೀಶ್ ಕುಂದರ್, ಶ್ರೀ ನರೇಂದ್ರ ಕುಮಾರ್ ಕೋಟ ಮುಂತಾದವರಿದ್ದರು.