ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಬೆಳ್ಳಂಪಳ್ಳಿ ಕುಕ್ಕಿಕಟ್ಟೆಯ ಕೃಷ್ಣ ನಾಯಕ್ ಅವರ ಪುತ್ರ ಆದಿತ್ಯ ನಾಯಕ್ (15) ಎಂದು ಗುರುತಿಸಲಾಗಿದೆ. ಕುಕ್ಕಿಕಟ್ಟೆ ಶಾಲೆಯ ವಿದ್ಯಾರ್ಥಿಯಾಗಿದ್ದು, ರಜೆಯ ಹಿನ್ನೆಲೆಯಲ್ಲಿ ಸಂಬಂಧಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದ.
ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿದ್ದು, ಕೆಲ ಭಕ್ತರು ಕೆರೆಯಲ್ಲಿ ಈಜುತ್ತಿದ್ದ ಹಿನ್ನೆಲೆಯಲ್ಲಿ ಆದಿತ್ಯ ಕೂಡ ಕೆರೆಗೆ ಇಳಿದು ಈಜುತ್ತಿದ್ದ. ಆದರೆ, ಆತನೊಂದಿಗೆ ಬಂದಿದ್ದ ಸಂಬಂಧಿಗೆ ಈಜು ಬಾರದ ಕಾರಣ ಅವರು ಕೆರೆಗೆ ಇಳಿದಿರಲಿಲ್ಲ.
ಕೆರೆಯ ಮಧ್ಯಭಾಗದಲ್ಲಿ ಈಜುತ್ತಿದ್ದ ಆದಿತ್ಯ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ದೇವಸ್ಥಾನದವರು ಕೂಡಲೇ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ತೆರಳಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು. ಸುಮಾರು ಒಂದು ಗಂಟೆಯ ಕಾರ್ಯಾಚರಣೆ ಬಳಿಕ ಆದಿತ್ಯನನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.
ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಆದಿತ್ಯ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
