BREAKING
ಆರೋಗ್ಯ

ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಗಂಭೀರ ಹಾಗೂ ಮಾರಣಾಂತಿಕವಾದ ಕಾಯಿಲೆಗಳೊಂದಿಗೆ ಬದುಕುತ್ತಿರುವವರಿಗೆ ಉಪಶಾಮಕ ಆರೈಕೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 10, 2026ರಂದು ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನವನ್ನು (ಡಬ್ಲ್ಯುಎಚ್‌ಪಿಸಿಡಿ) ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ.

ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೆಯ ಶನಿವಾರ ಆಚರಿಸಲಾಗುತ್ತಿದ್ದು ಈ ವರ್ಷ ಅಕ್ಟೋಬರ್ 10ರಂದು ಬಂದಿದೆ. ‘ನೋವು ನಿರ್ವಹಣೆ: ಉಪಶಾಮಕ ಆರೈಕೆಯ ಅತ್ಯಗತ್ಯ ಭಾಗ’ ಎಂಬುದು 2026ರ ಧ್ಯೇಯವಾಕ್ಯವಾಗಿದ್ದು, ಸಮಗ್ರ ಆರೈಕೆಯ ಭಾಗವಾಗಿ ಕಾಯಿಲೆಯ ಯಾತನೆಯನ್ನು ನಿರ್ವಹಿಸುವ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ. ಉಪಶಾಮಕ ಆರೈಕೆಯು ದೈಹಿಕ ಸ್ಥಿತಿಯನ್ನಷ್ಟೇ ಅಲ್ಲದೆ, ಮಾನಸಿಕ, ಸಾಮಾಜಿಕ ಮತ್ತು ಆಂತರಂಗಿಕ ಪರಿಸ್ಥಿತಿಗಳನ್ನು ಪರಿಗಣಿಸಿ, ನೆಮ್ಮದಿ, ಘನತೆ ಮತ್ತು ಜೀವನದ ಗುಣಮಟ್ಟಕ್ಕೆ ಆದ್ಯತೆ ನೀಡುತ್ತದೆ.

ಈ ಆಚರಣೆಯ ಅಂಗವಾಗಿ ಮಣಿಪಾಲ ಹಾಸ್ಪಿಸ್‌ ಆ್ಯಂಡ್ ರೆಸ್ಪೈಟ್ ಸೆಂಟರ್ (ಎಂಎಚ್‌ಆರ್‌ಸಿ) ಅಕ್ಟೋಬರ್ 10, 2026ರಂದು ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಕಾರ್ಯಕ್ರಮವನ್ನು ಆಯೋಜಿಸಿದೆ. ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ಕುರಿತು ಜಾಗೃತಿ ಮೂಡಿಸಲು, ಕರಾವಳಿ ಕರ್ನಾಟಕದ ವಿವಿಧ ಕ್ಲಬ್‌ಗಳ ಓಟಗಾರರು ಮತ್ತು ಸೈಕ್ಲಿಸ್ಟ್‌ಗಳು ಬೆಳಿಗ್ಗೆ 5:15ಕ್ಕೆ ಮಂಗಳೂರಿನ ಲಾಲ್‌ಬಾಗ್ ಬಳಿಯ ಕಾರ್ಪೊರೇಷನ್ ವೃತ್ತದಿಂದ ಹೊರಟು ಮಣಿಪಾಲದ ಎಂಎಚ್‌ಆರ್‌ಸಿವರೆಗೆ ಸುಮಾರು 68 ಕಿ. ಮೀ. ದೂರವನ್ನು ಕ್ರಮಿಸಲಿದ್ದಾರೆ.

ಕ್ಲಿನಿಕಲ್ ಸೇವೆಯ ಮೊದಲ ವರ್ಷವನ್ನು ಪೂರೈಸಿರುವ ಎಂಎಚ್‌ಆರ್‌ಸಿ, ಗಂಭೀರ ಹಾಗೂ ಜೀವಿತಾವಧಿಯನ್ನು ಸೀಮಿತಗೊಳಿಸುವ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಾಸ್ಪಿಸ್‌, ಜೀವನಾಂತ್ಯದ ಆರೈಕೆ, ರೆಸ್ಪೈಟ್ (ವಿರಾಮ) ಆರೈಕೆ, ಪುನಶ್ಚೇತನ ಹಾಗೂ ಪೂರಕ ಶುಶ್ರೂಷೆಯನ್ನು ಒದಗಿಸುವ ವಿಶೇಷ ಆರೋಗ್ಯ ಸೇವಾಕೇಂದ್ರವಾಗಿದೆ. ರೋಗಿಯ ಕುಟುಂಬದೊಂದಿಗೆ ಸೌಹಾರ್ದದಿಂದ ವ್ಯವಹರಿಸುವ ಕಾರ್ಯವಿಧಾನದೊಂದಿಗೆ, ರೋಗಿಯ ವೈದ್ಯಕೀಯ ಶುಶ್ರೂಷೆ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಗತ್ಯಗಳನ್ನು ಪೂರೈಸುತ್ತದೆ.

2025ರ ಏಪ್ರಿಲ್‌ನಲ್ಲಿ ಉದ್ಘಾಟನೆಗೊಂಡ ಎಂಎಚ್‌ಆರ್‌ಸಿ, 2025ರ ಸೆಪ್ಟೆಂಬರ್ 1ರಿಂದ ರೋಗಿಗಳನ್ನು ದಾಖಲಿಸಿಕೊಳ್ಳಲು ಆರಂಭಿಸಿತು. 10 ಹಾಸಿಗೆಗಳೊಂದಿಗೆ ಕಾರ್ಯಾರಂಭ ಮಾಡಿದ ಕೇಂದ್ರವು ಈಗ 40 ಹಾಸಿಗೆಗಳಿಗೆ ವಿಸ್ತರಣೆಗೊಂಡಿದ್ದು, ಮೊದಲ ವರ್ಷದಲ್ಲಿ 694 ರೋಗಿಗಳಿಗೆ ಆರೈಕೆ ನೀಡಿದೆ ಹಾಗೂ 1,300ಕ್ಕೂ ಹೆಚ್ಚು ಕುಟುಂಬದ ಆರೈಕೆದಾರರಿಗೆ ಬೆಂಬಲ ಒದಗಿಸಿದೆ. ಈ ಎಲ್ಲ ಸೇವೆಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗಿದೆ. 2026ರಲ್ಲಿ ನರ-ಉಪಶಾಮಕ ಆರೈಕೆಗೆ (ನ್ಯೂರೋಪ್ಯಾಲಿಯೇಟಿವ್ ಕೇರ್) ವಿಶೇಷ ಒತ್ತು ನೀಡಿ 65 ಹಾಸಿಗೆಗಳಿಗೆ ಹಾಗೂ 2027ರಲ್ಲಿ 100 ಹಾಸಿಗೆಗಳಿಗೆ ವಿಸ್ತರಿಸಲು ಎಂಎಚ್‌ಆರ್‌ಸಿ ಯೋಜಿಸಿದೆ. ಕೆಎಂಸಿ ಮಣಿಪಾಲದ ಪ್ಯಾಲಿಯೇಟಿವ್ ಮೆಡಿಸಿನ್ ಆ್ಯಂಡ್ ಸಪೋರ್ಟಿವ್ ಕೇರ್ ವಿಭಾಗದ ಹೊರರೋಗಿ ವಿಭಾಗದ (ಒಪಿಡಿ) ಮೂಲಕ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಎಂಎಚ್‌ಆರ್‌ಸಿಗೆ ದಾಖಲಾತಿ ಪಡೆಯಬಹುದು.

ಹಾಸ್ಪಿಸ್ ಆರೈಕೆಯ ಕುರಿತಾದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕೂಡ ಎಂಎಚ್‌ಆರ್‌ಸಿ ಶ್ರಮಿಸುತ್ತಿದೆ. ಇದು ವೃದ್ಧಾಶ್ರಮವಲ್ಲ; ವೃತ್ತಿಪರ ವೈದ್ಯಕೀಯ, ಶುಶ್ರೂಷಾ, ಉಪಶಾಮಕ, ಪುನಶ್ಚೇತನ ಹಾಗೂ ಪೂರಕ ಆರೈಕೆಯನ್ನು ಒದಗಿಸುವ ವಿಶೇಷ ಆರೋಗ್ಯ ಸೇವಾ ಕೇಂದ್ರವಾಗಿದೆ. ಮಾಹೆ ಮತ್ತು ಎಂಎಚ್‌ಆರ್‌ಸಿ ಸಂಸ್ಥೆಗಳು ಕ್ಲಿನಿಕಲ್ ಸೇವೆಗಳ ಜೊತೆಗೆ, ಆರೋಗ್ಯಸೇವಾ ವೃತ್ತಿಪರರಲ್ಲಿ ಉಪಶಾಮಕ ಆರೈಕೆಯ ಕೌಶಲಗಳನ್ನು ಹೆಚ್ಚಿಸಲು ಶಿಕ್ಷಣ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಉಪಕ್ರಮಗಳನ್ನು ರೂಪಿಸುತ್ತಿವೆ. ಎಂಎಚ್‌ಆರ್‌ಸಿಯ ಅಭಿವೃದ್ಧಿ ಮತ್ತು ಸೇವೆಗಳಿಗೆ ಹರೀಶ್ ಆ್ಯಂಡ್ ಬೀನಾ ಶಾ ಫೌಂಡೇಶನ್, ಸೀಮೆನ್ಸ್ ಹಾಗೂ ಮಣಿಪಾಲ ಫೌಂಡೇಶನ್ ಬೆಂಬಲ ನೀಡಿವೆ. ಎಂಎಚ್‌ಆರ್‌ಸಿಗೆ ಸಂಬಂಧಿಸಿ ಮಾಹೆಯು ಆ್ಯಕ್ಸಿಸ್‌ ಬ್ಯಾಂಕಿನೊಂದಿಗೆ ಸಹಭಾಗಿತ್ವವನ್ನು ಹೊಂದಿರುವುದು ಗಮನಾರ್ಹವಾಗಿದೆ,

ಎಂಎಚ್‌ಆರ್‌ಸಿ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿರುವ ಬಗ್ಗೆ ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ‘ಉಪಶಾಮಕ ಆರೈಕೆಯನ್ನು ಆರೋಗ್ಯ ಸೇವೆಯ ವಿಸ್ತರಣೆಯಾಗಿಯೇ ಕಾಣುವ ಅಗತ್ಯವಿದೆ. ಉಪಶಾಮಕ ಆರೈಕೆಯನ್ನು ಒದಗಿಸುವ ಮಹತ್ವದ ಹೊಣೆಗಾರಿಕೆ ಆರೋಗ್ಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಮೇಲಿದೆ. ಎಂಎಚ್‌ಆರ್‌ಸಿಯನ್ನು ಸ್ಥಾಪಿಸುವ ಮೂಲಕ ಮಾಹೆ ಪ್ರಮುಖವಾದ ಹೆಜ್ಜೆಯನ್ನಿರಿಸಿದ್ದು, ತನ್ನ ಆರೋಗ್ಯಸೇವಾ ವ್ಯವಸ್ಥೆಯ ವ್ಯಾಪ್ತಿಯೊಳಗೆ ಸುಸಜ್ಜಿತ ಹಾಸ್ಪೈಸ್ ಅನ್ನು ಸ್ಥಾಪಿಸಿರುವ ಭಾರತದ ಏಕೈಕ ವಿಶ್ವವಿದ್ಯಾಲಯ ಎನಿಸಿಕೊಂಡಿದೆ. ಮಾಹೆಯು ಈ ಸೇವೆಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿರುವುದು ಗಮನಾರ್ಹವಾಗಿದೆ. ಆರೈಕೆಯ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿಯ ಜೀವನದ ಕೊನೆಯ ಹಂತದ ಘನತೆಗೆ ಧಕ್ಕೆಯಾಗಬಾರದು. ಅಗತ್ಯವಿರುವ ಎಲ್ಲರಿಗೂ ಸಹಾನುಭೂತಿಯ ಉಪಶಾಮಕ ಆರೈಕೆ ಲಭ್ಯವಾಗುವಂತೆ ಮಾಡುವ ಧ್ಯೇಯವನ್ನು ಈಡೇರಿಸುವಲ್ಲಿ ಮಾಹೆಯೊಂದಿಗೆ ಸಮಾಜವೂ ಜೋಡಿಸಬೇಕೆಂದು ಅಪೇಕ್ಷಿಸುತ್ತೇವೆ’ ಎಂದು ಹೇಳಿದರು.

ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ‘ಮಾಹೆ ಸದಾ ಪ್ರವರ್ತಕ ಸಂಸ್ಥೆಯಾಗಿದೆ. ಆರೋಗ್ಯ ಸೇವೆ ಒದಗಿಸುವುದನ್ನು ಮೀರಿ, ಜ್ಞಾನಸೃಷ್ಟಿ ಹಾಗೂ ಭವಿಷ್ಯಕ್ಕಾಗಿ ಸಾಮರ್ಥ್ಯ ವೃದ್ಧಿಯೂ ನಮ್ಮ ಜವಾಬ್ದಾರಿಯಾಗಿದೆ. ಉಪಶಾಮಕ ಆರೈಕೆಯ ಕುರಿತಾದ ಈಗಿರುವ ಜ್ಞಾನ ಮತ್ತು ಮಾದರಿಗಳಲ್ಲಿ ಹೆಚ್ಚಿನವು ಪಾಶ್ಚಾತ್ಯ ವಿಧಾನಗಳ ಪ್ರೇರಣೆಯಿಂದ ರೂಪುಗೊಂಡಿವೆ. ಎಂಎಚ್‌ಆರ್‌ಸಿ ಮೂಲಕ ಭಾರತ ಮತ್ತು ಆಗ್ನೇಯ ಏಷ್ಯಾದ ಸನ್ನಿವೇಶಕ್ಕೆ ಯಾವುದು ಸೂಕ್ತ ಎಂಬುದನ್ನು ಅರಿತು, ಅದನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದ್ದೇವೆ. ಉಪಶಾಮಕ ಆರೈಕೆಯಲ್ಲಿನ ತರಬೇತಿ ಅಗತ್ಯಗಳನ್ನು ಪೂರೈಸಿ, ಈ ಆರೈಕೆ ನೀಡಲು ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ಆರೋಗ್ಯ ಸೇವಾದಾರರಿಗೆ ಒದಗಿಸುತ್ತೇವೆ. ಈ ಮೂಲಕ ಎಂಎಚ್‌ಆರ್‌ಸಿಯು ಉಳಿದ ಸಂಸ್ಥೆಗಳಿಗೆ ಒಂದು ಮಾದರಿ ಸಂಸ್ಥೆಯಾಗಬೇಕೆಂಬುದು ನಮ್ಮ ಆಶಯ. ಉಪಶಾಮಕ ಆರೈಕೆ ಸೇವೆಗಳು ಮಾಹೆಯಾಚೆಗೂ ವಿಸ್ತರಿಸಲು ನೆರವಾಗುವ ಕಲಿಕಾ ಸಂಪನ್ಮೂಲವಾಗಿ ಎಂಎಚ್‌ಆರ್‌ಸಿಯ ಅನುಭವ ರೂಪುಗೊಳ್ಳಬೇಕು ಎಂಬ ಆಶಯವನ್ನು ಹೊಂದಿದ್ದೇವೆ’" ಎಂದರು.

ಎಂಎಚ್‌ಆರ್‌ಸಿಯ ನಿರ್ದೇಶಕರಾದ ಉಪಶಾಮಕ ವೈದ್ಯಶಾಸ್ತ್ರ ಸಲಹಾ ತಜ್ಞೆ ಡಾ. ಸೀಮಾ ಆರ್. ರಾವ್ ಮಾತನಾಡಿ, ‘ಗಂಭೀರ ಕಾಯಿಲೆ ಇರುವ ರೋಗಿಗಳ ದೊಡ್ಡ ಭಯಗಳಲ್ಲಿ ನೋವು ಕೂಡ ಒಂದು. ಬಹುತೇಕ ಸಂದರ್ಭಗಳಲ್ಲಿ ಅದನ್ನು ಉತ್ತಮವಾಗಿ ನಿರ್ವಹಿಸಬಹುದು. ತಮ್ಮ ಪ್ರೀತಿಪಾತ್ರರು ನೋವಿಲ್ಲದೆ ನೆಮ್ಮದಿಯಿಂದ ಇದ್ದಾಗ ಕುಟುಂಬ ಅನುಭವಿಸುವ ಸಮಾಧಾನವನ್ನು ಮೊದಲ ವರ್ಷದಲ್ಲಿ ನಾವು ಕಂಡಿದ್ದೇವೆ. ಉಪಶಾಮಕ ಆರೈಕೆಯನ್ನು ಸವಾಲಾಗಿ ಪರಿಗಣಿಸಿ ಅದನ್ನು ಕೈಬಿಡುವುದಲ್ಲ, ರೋಗಿಯ ಬದುಕಿನ ಪ್ರತಿದಿನಕ್ಕೂ ನೆಮ್ಮದಿ ಮತ್ತು ಘನತೆಯನ್ನು ತುಂಬುವುದು ಬಹಳ ಅಗತ್ಯ. ರೋಗಿಯ ಆರೈಕೆಯ ಕಠಿಣ ಕೆಲಸವನ್ನು ಮೌನವಾಗಿ ನಿರ್ವಹಿಸುವ ಆರೈಕೆದಾರ ಕುಟುಂಬದೊಂದಿಗೂ ನಾವು ನಿಲ್ಲುತ್ತೇವೆ. ಕುಟುಂಬಗಳು ಮತ್ತು ವೈದ್ಯರು ಕೊನೆಯ ಕೆಲವು ದಿನಗಳಿಗಿಂತ ಆರಂಭಿಕ ಹಂತದಲ್ಲೇ ನಮ್ಮನ್ನು ಸಂಪರ್ಕಿಸುವಲ್ಲಿ ನಾವು ಲಭ್ಯರಿದ್ದೇವೆ’ ಎಂದರು.

ಡಬ್ಲ್ಯುಎಚ್‌ಪಿಸಿಡಿ 2026ರ ಮೂಲಕ, ಉಪಶಾಮಕ ಆರೈಕೆಯ ಕುರಿತು ಸಾರ್ವಜನಿಕ ತಿಳಿವಳಿಕೆಯನ್ನು ಹೆಚ್ಚಿಸುವುದು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ಉಪಶಾಮಕ ಆರೈಕೆಯನ್ನು ಸಮಗ್ರ ಆರೋಗ್ಯ ಸೇವೆಯ ಅವಿಭಾಜ್ಯ ಅಂಗವಾಗಿ ಗುರುತಿಸುವಂತೆ ಆರೋಗ್ಯ ಸಂಸ್ಥೆಗಳು ಮತ್ತು ಸಮುದಾಯಗಳನ್ನು ಪ್ರೇರೇಪಿಸುವುದು ಮಾಹೆ ಮತ್ತು ಎಂಎಚ್‌ಆರ್‌ಸಿಯ ಉದ್ದೇಶವಾಗಿದೆ.

ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಕುಲಪತಿ ಡಾ. ಶರತ್ ಕೆ. ರಾವ್, ಸಹ ಕುಲಪತಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಎಂಎಚ್‌ಆರ್‌ಸಿಯ ನಿರ್ದೇಶಕರಾದ ಉಪಶಾಮಕ ವೈದ್ಯಶಾಸ್ತ್ರ ಸಲಹಾ ತಜ್ಞೆ ಡಾ. ಸೀಮಾ ಆರ್. ರಾವ್ ಹಾಗೂ ಸಂಶೋಧನಾ ನಿರ್ದೇಶಕ ಮತ್ತು ಉಪಶಾಮಕ ವೈದ್ಯಶಾಸ್ತ್ರ ಮತ್ತು ಪೂರಕ ಆರೈಕೆ ವಿಭಾಗದ ಪ್ರಾಧ್ಯಾಪಕ ಡಾ. ನವೀನ್ ಸಾಲಿನ್ಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!