Header Ads Widget

ಭಾರತೀಯ ಸೈನ್ಯದ ಕಾರ್ಯಾಚರಣೆ ಪ್ರತಿಯೊಬ್ಬರು ಹೆಮ್ಮೆಪಡುವಂತಾಗಿದೆ ~ರಮೇಶ್ ಕಾಂಚನ್

ಏ.22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಅಮಾಯಕ ಭಾರತೀಯ ಪ್ರವಾಸಿಗರ ಹತ್ಯಾಕಾಂಡ ನಡೆಸಿರುವ ಪಾಕಿಸ್ತಾನ ಪ್ರಯೋಜಿತ ಉಗ್ರರಿಗೆ ಹಾಗೂ ಬೆಂಬಲಿಗರಿಗೆ ಭಾರತದ ಸೈನ್ಯವು ಮಂಗಳವಾರ ತಡ ರಾತ್ರಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿದ್ದು ಭಾರತೀಯ ಸೈನ್ಯದ ಕಾರ್ಯಾಚರಣೆ ಪ್ರತಿಯೊಬ್ಬರು ಹೆಮ್ಮೆಪಡುವಂತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (ಪಿ.ಒ.ಕೆ) ಒಟ್ಟು 9 ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿ ನಡೆಸಿರುವ "ಆಪರೇಷನ್ ಸಿಂಧೂರ" ಕಾರ್ಯಾಚರಣೆಯಿಂದಾಗಿ ಪಹಲ್ಗಾಮ್ ದಾಳಿಯಲ್ಲಿ ಹತ್ಯೆಯಾದವರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಉಗ್ರರ ವಿರುದ್ದ ಕೇಂದ್ರ ಸರಕಾರ ಕೈಗೊಳ್ಳುವ ಯಾವುದೇ ಕಾರ್ಯಾಚರಣೆಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುವುದರೊಂದಿಗೆ ಭಾರತೀಯರೆಲ್ಲರೂ ಒಂದು ಎಂಬ ಸಂದೇಶವನ್ನು ಜಗತ್ತಿಗೆ ಹಾಗೂ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ತೋರಿಸಿದೆ. ಭಾರತೀಯ ಸೈನ್ಯದ ಕಾರ್ಯಾಚರಣೆ ಬಗ್ಗೆ ನಮಗೆ ಯಾವಾಗಲೂ ಹೆಮ್ಮೆ ಇದೆ. ಮಾಜಿ ಪ್ರಧಾನಿಗಳಾದ ಶ್ರೀಮತಿ ಇಂದಿರಾ ಗಾಂಧಿ ಮತ್ತು ಜವಾಹರ್‌ಲಾಲ್ ನೆಹರು ಅವರ ಅವಧಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ನಡೆದ ಯುದ್ದದಲ್ಲೂ ಕೂಡ ನಮ್ಮ ಸೈನ್ಯವು ಹೀಗೆ ಕಾರ್ಯಾಚರಣೆ ನಡೆಸಿದೆ. ಉಗ್ರರನ್ನು ಮಟ್ಟಹಾಕುವುದು ಅತ್ಯಂತ ಅವಶ್ಯಕವಾಗಿತ್ತು. ರಾಷ್ಟ್ರದಲ್ಲಿ ಶಾಂತಿ ನೆಲೆಗೊಳ್ಳಬೇಕಾದರೆ ಅವರಿಗೆ ಪಾಠ ಕಲಿಸಲೇಬೇಕಿತ್ತು. ದಾಳಿ ನಡೆಸುವ ಮೂಲಕ ಭಾರತೀಯ ಸೈನ್ಯ ಒಳ್ಳೆಯ ಕೆಲಸ ಮಾಡಿದೆ. ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದೊಂದಿಗಿದೆ. ಆಪರೇಷನ್ ಸಿಂಧೂರ್ ಭಾರತೀಯ ಸೈನ್ಯ ಕಾರ್ಯಾಚರಣೆಗೆ ಇನ್ನಷ್ಟು ಸ್ಥೈರ್ಯ ತುಂಬಲು ರಾಜ್ಯದ ಎಲ್ಲ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸುವಂತೆ ಮುಜರಾಯಿ ಇಲಾಖೆ ಸಚಿವರಾದ ಸನ್ಮಾನ್ಯ ರಾಮಲಿಂಗಾ ರೆಡ್ಡಿ ಅವರು ಸೂಚನೆ ನೀಡಿದ್ದಾರೆ. 

ಅಪರೇಶನ್ ಸಿಂಧೂರ ಕಾರ್ಯಾಚರಣೆಯು ನಮ್ಮ ದೇಶದ ಮಿಲಿಟರಿಯ ಶಕ್ತಿಯನ್ನು ಮಾತ್ರವಲ್ಲದೆ ನಮ್ಮ ನೈತಿಕ ಸಂಯಮವನ್ನೂ ಪ್ರತಿಬಿಂಬಿಸುತ್ತದೆ. ಭಾರತೀಯ ಪಡೆಗಳು ತಮ್ಮ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿವೆ. ಭಾರತೀಯ ಸಶಸ್ತ್ರ ಪಡೆಗಳು ನಿಖರತೆ, ಜಾಗರೂಕತೆ ಮತ್ತು ಸೂಕ್ಷ್ಮತೆಯಿಂದ ಕಾರ್ಯ ನಿರ್ವಹಿಸಿವೆ. ನಮ್ಮ ಸೈನ್ಯದ ಸೈನಿಕರು ಮತ್ತು ಅಧಿಕಾರಿಗಳು ನಿಜಕ್ಕೂ ಅಬಿನಂದರ್ಹಾರು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.