ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಐದನೇ ದಿನದ ಕಾರ್ಯಕ್ರಮ

ಉಡುಪಿ: ನಡಿಗೆ, ಓಟಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಂತನನ್ನಾಗಿ ಮಾಡಿದರೆ, ರಂಗಚಟುವಟಿಕೆಗಳು ಸೃಜನಶೀಲ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆಮಾಡಿ ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಮಣಿಪಾಲ ಎಚ್‌ಪಿಆರ್‌ ಸಮೂಹ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್‌ ರೈ ಅಭಿಪ್ರಾಯಪಟ್ಟರು.

ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಐದನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿಯ ಶ್ರೀಮಂತ ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಸುಮನಸಾ ಕೊಡವೂರು ಸಂಘಟನೆ ಮಾಡುತ್ತಾ ಬಂದಿದೆ ಎಂದು ಶ್ಲಾಘಿಸಿದರು.

ರಂಗಸಾಧಕ ಸನ್ಮಾನ ಸ್ವೀಕರಿಸಿದ  ಬಹುಕ್ಷೇತ್ರದ ಸಾಧಕಿ ಕುಸುಮಾ ಕಾಮತ್‌ ಮಾತನಾಡಿ, ‘ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಈ ಸನ್ಮಾನ ಸಲ್ಲಲಿದೆ. ಸುಂದರ ಮನಸ್ಸುಗಳು ನಳನಳಿಸುವ ಸಂಘಟನೆ. ಕಠಿಣ ಪರಿಶ್ರಮ, ಶಿಸ್ತು, ಹೊಂದಾಣಿಕೆ ಇದ್ದಾಗ ಮಾತ್ರ ಮುಂದುವರಿಯಲು ಸಾಧ್ಯ. ಅವೆಲ್ಲ ಗುಣಗಳನ್ನು ಸುಮನಸಾ ಕೊಡವೂರು ತಂಡ ಹೊಂದಿದೆ’ ಎಂದು ಹೇಳಿದರು.

ಕಲಾವಿದರಿಗೆ ಅನೇಕ ನೋವುಗಳಿರುತ್ತವೆ. ಆದರೆ, ರಂಗದ ಮೇಲೆ ಬಂದಾಗ ಎಲ್ಲ ನೋವುಗಳನ್ನು ಮರೆತು ಪ್ರದರ್ಶನ ನೀಡುತ್ತಾರೆ. ಕಲೆಗೆ ಭಾಷೆಯ ಹಂಗಿಲ್ಲ. ಯಾವುದೇ ಭಾಷೆಯಾದರೂ ಕಲೆ ಅರ್ಥವಾಗುತ್ತದೆ ಎಂದು ವಿಶ್ಲೇಷಿಸಿದರು.

ಕೊಡವೂರು ಶಿರಿಡಿ ಸಾಯಿಬಾಬ ಮಂದಿರದ ಧರ್ಮದರ್ಶಿ ದಿವಾಕರ್ ಶೆಟ್ಟಿ ತೋಟದಮನೆ, ಬೊಳ್ಜೆ ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಅಧ್ಯಕ್ಷ ದಿನೇಶ್ ಸಾಲಿಯಾನ್, ಸಿತಾರ ಎಂಟರ್ ಪ್ರೈಸಸ್ ಪಾಲುದಾರ ಪ್ರಭಾಕರ್ ತಿಂಗಳಾಯ, ಮಲ್ಪೆ ಬೋಟ್ ಸಾಯಿಶ್ಯಾಮ್ ಉದ್ಯಮಿ ಹರೀಶ್ ಪೂಜಾರಿ, ಉಡುಪಿ ವ್ಯಾಸ ಮುದ್ರಣ ಮಾಲೀಕ ರಾಮಚಂದ್ರ ಪೂಜಾರಿ, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷ ವಿನಯ್‌ ಕಲ್ಮಾಡಿ ಉಪಸ್ಥಿತರಿದ್ದರು.

ಪ್ರಜ್ಞಾಶ್ರೀ ಸ್ವಾಗತಿಸಿದರು. ಪ್ರಜ್ಞಾ ವಂದಿಸಿದರು, ಶ್ರೀವತ್ಸ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು