ಕಾಪು : ಪ್ರಪಂಚದಾದ್ಯಂತ ನೆಲೆಸಿರುವ ಕಾಪುವಿನ ಅಮ್ಮನ ಮಕ್ಕಳ ಸಹಕಾರದೊಂದಿಗೆ ಸಮಗ್ರವಾಗಿ ಜೀರ್ಣೋದ್ಧಾರಗೊಂಡು ಶೋಭಿಸುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಂಗಳವಾರ ಭಕ್ತರ ಶ್ರೇಯೋಭಿವೃದ್ಧಿ, ಜಾಗತಿಕ ಶಾಂತಿ ಮತ್ತು ಮದ್ಯಪ್ರಾಚ್ಯ ರಾಷ್ಟ್ರಗಳ ಯುದ್ದೋನ್ಮಾಧದಿಂದಾಗಿ ತೊಂದರೆಗೀಡಾಗಿರುವ ಅನಿವಾಸಿ ಭಾರತೀಯರ ಸುರಕ್ಷತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರಧಾನ ತಂತ್ರಿ ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿ ಅವರು ಪ್ರಾರ್ಥನೆ ಸಲ್ಲಿಸಿ, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣವಿದೆ. ಅಮೇರಿಕಾ, ಇರಾನ್, ಇಸ್ರೇಲ್ ಹಾಗೂ ಅರಬ್ ರಾಷ್ಟ್ರಗಳಲ್ಲಿರುವ ಲಕ್ಷಾಂತರ ಭಾರತೀಯರು, ತುಳು ಕನ್ನಡಿಗರು ಅಸುರಕ್ಷತೆಯ ಭೀತಿಯಲ್ಲಿದ್ದಾರೆ. ಅವರಲ್ಲಿ ಹೆಚ್ಚಿನವರು ಉಚ್ಚಂಗೀ ಸಹಿತ ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ತುಂಬು ಸಹಕಾರ ನೀಡಿದ್ದಾರೆ. ಅವರೆಲ್ಲರನ್ನೂ ರೆಕ್ಷಿಸುವ ಭಾರ ಅಮ್ಮನದ್ದಾಗಿದ್ದು, ಎಲ್ಲರೂ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಲು ಧೈರ್ಯವನ್ನು ನೀಡುವಂತಾಗಲಿ ಎಂದು ಪ್ರಾರ್ಥಿಸಿದರು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ, ಅಭಿವೃದ್ಧಿ ಸಮಿತಿಯ ಆರ್ಥಿಕ ಸಮಿತಿ ಅಧ್ಯಕ್ಷ ಉದಯ ಸುಂದರ್ ಶೆಟ್ಟಿ, ಟ್ರಸ್ಟಿಗಳಾದ ಮಾಧವ ಆರ್. ಪಾಲನ್, ಶೇಖರ್ ಸಾಲ್ಯಾನ್, ಮನೋಹರ ರಾವ್, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತ ದೇವಾಡಿಗ, ಮಾತೃವೈಭವ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ, ಕೋಶಾಧಿಕಾರಿ ರಮೇಶ್ ಹೆಗ್ಡೆ ಕಲ್ಯ, ಪಾತ್ರಿಗಳಾದ ಗುರುಮೂರ್ತಿ, ಸಚಿನ್ ಪಾತ್ರಿ ಮತ್ತಿತರರು ಉಪಸ್ಥಿತರಿದ್ದರು

0 ಕಾಮೆಂಟ್‌ಗಳು