ತೆಂಕನಿಡಿಯೂರು : 6 ದಿನಗಳ ಮಸಾಲೆ ಪುಡಿ ತಯಾರಿಕಾ ತರಬೇತಿ ಕಾರ್ಯಕ್ರಮ ಸಮಾರೋಪ

ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ತೆಂಕನಿಡಿಯೂರು ಗ್ರಾಮ ಪಂಚಾಯತ್ ಮತ್ತು ಪ್ರಗತಿ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 6 ದಿನಗಳ ಮಸಾಲೆ ಪುಡಿ ತಯಾರಿಕಾ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಬೆನ್ನೂರು ಅವರು ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಇಂತಹ ಕೌಶಲ್ಯ ತರಬೇತಿಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.

ಡಿಆರ್‌ಪಿ ರೂಪಶ್ರೀ ಅವರು ಪಿಎಂಎಫ್‌ಎಂಇ ಯೋಜನೆಯ ಕುರಿತು ಮಾಹಿತಿ ನೀಡಿದರು. ಕೃಷಿ ಇಲಾಖೆಯ ಬ್ಲಾಕ್ ಮ್ಯಾನೇಜರ್ ಸಂಜನಾ ಅವರು ರೈತರಿಗೆ ಸರ್ಕಾರದಿಂದ ದೊರೆಯುವ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮೋಹಿನಿ ಪೆರ್ಡೂರು ಹಾಗೂ ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ತರಬೇತಿ ಕಾರ್ಯಕ್ರಮದಿಂದ ಒಟ್ಟು 29 ಮಹಿಳೆಯರು ಪ್ರಯೋಜನ ಪಡೆದರು. ರಾಧಾ ಮತ್ತು ಸಂಜನಾ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು