ಉಡುಪಿ ಜಿಲ್ಲೆಯ ಅರ್ಹ ಶಿಕ್ಷಕರಿಗೆ ತಮ್ಮದೇ ಸರಕಾರ ಘೋಷಿಸಿದ್ದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಹಿಜಾಬ್ ಬೆಂಬಲಿತ ಮತಾಂಧ ಶಕ್ತಿಗಳ ಓಲೈಕೆಗಾಗಿ ಹಿಂಪಡೆದ ಕಾಂಗ್ರೆಸ್ ಸರ್ಕಾರದ ನಿಲುವನ್ನು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಶಿಕ್ಷಕ ವಿರೋಧಿ ಮಾನಸಿಕತೆ ಬಯಲಾಗಿದೆ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಜಿಲ್ಲೆಯ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಹಿಜಾಬ್ ಸಹಿತ ಹಲವು ವಿವಾದಗಳ ಮುಂದುವರಿದ ಭಾಗವಾಗಿ ಶಿಕ್ಷಕರ ನೈತಿಕ ಸ್ಥೈರ್ಯ ಕುಗ್ಗಿಸಲು ಹೊಸ ಹುನ್ನಾರ ನಡೆಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಶಿಕ್ಷಕರ ಬೆಂಬಲಕ್ಕೆ ನಿಂತಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಿಕ್ಷಕರ ಮೇಲೆ ಎಷ್ಟು ಗೌರವವಿದೆ ಎಂಬುದನ್ನು ಸಾಬೀತುಪಡಿಸಿದೆ.
ಮಲ್ಪೆ, ಆದಿಉಡುಪಿ ಮತ್ತು ಸಂತೆಕಟ್ಟೆ ಅಂಡರ್ ಪಾಸ್, ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಗಳ ಬಗ್ಗೆ ಶಾಸಕರು ಹಾಗೂ ಸಂಸದರು ನಿರಂತರ ಸಭೆಗಳನ್ನು ನಡೆಸಿ, ಕಾಮಗಾರಿ ಪ್ರಗತಿಯಲ್ಲಿದ್ದು ಅತೀ ಶೀಘ್ರದಲ್ಲಿ ಪೂರ್ಣಗೊಳಿಸುವ ಬಗ್ಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ವೃಥಾ ಆರೋಪ ಮಾಡುವ ಮುನ್ನ ರಾಜ್ಯವನ್ನು ಆರ್ಥಿಕ ದಿವಾಳಿತನಕ್ಕೆ ದೂಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಲವು ತಿಂಗಳ ಸಂಬಳ ಬಾಕಿ ಇಟ್ಟಿರುವ ರಾಜ್ಯದ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಲಿ.
ಕಳೆದ ಸುಮಾರು 15 ತಿಂಗಳಿನಲ್ಲಿ ಉಡುಪಿ ಜಿಲ್ಲೆಗೆ ನೀಡಿದ ಅನುದಾನದ ಬಗ್ಗೆ ಕಾಂಗ್ರೆಸ್ ಪಕ್ಷ ಮಾಹಿತಿಯನ್ನು ಜನರ ಮುಂದಿಡಲಿ. ಕೇವಲ ಒಂದು ಕೆಡಿಪಿ ಸಭೆ ನಡೆಸಿರುವ ತಮ್ಮ ಸಚಿವರನ್ನು ಪ್ರಶ್ನಿಸದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ತಮ್ಮದೇ ಪಕ್ಷದ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗ್ಯಾಂಗ್ ವಾರ್ ರೀತಿ ಹೊಡೆದಾಡಿಕೊಂಡರೂ ಮೌನವಾಗಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಶಾಸಕರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ.
ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳು ಬಿಜೆಪಿ ಶಾಸಕರನ್ನು ಹೊಂದಿರುವ ಏಕೈಕ ಕಾರಣಕ್ಕಾಗಿ ಜಿಲ್ಲೆಯ ಅಭಿವೃಧ್ದಿಯನ್ನು ಕಾಂಗ್ರೆಸ್ ಸರ್ಕಾರ ನಿರಂತರ ಕಡೆಗಣಿಸುತ್ತಿದೆ. ಬಿಜೆಪಿ ಕಾರ್ಯಕರ್ತರು ರಾಷ್ಟೀಯವಾದಿ ಚಿಂತನೆಯ ಮೂಲಕ ಬೆಳೆದು ಬಂದಿದ್ದು ಕಾಂಗ್ರೆಸ್ ಪಕ್ಷ ಇಂತಹ ನೂರು ಕೇಸುಗಳನ್ನು ದಾಖಲಿಸಿದರೂ ನ್ಯಾಯದ ಪರ ಶಿಕ್ಷಕರ ಜೊತೆ ನಿಲ್ಲಲು ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.