ಉಡುಪಿ: ಗಲ್ಫ್ ದೇಶದಲ್ಲಿ ಕನ್ನಡ ಮತ್ತು ತುಳು ಭಾಷೆಗಾಗಿ ಅವಿರತ ಶ್ರಮಿಸಿದ್ದ ಸಮಾಜ ಸೇವಕ ಉಡುಪಿ ಬ್ರಹ್ಮಗಿರಿಯ ಇಕ್ಬಾಲ್ ಮನ್ನಾ, ವಿಶ್ವ ಮಾನವ ಹಕ್ಕುಗಳ ಪೀಪಲ್ಸ್ ಕೌನ್ಸಿಲ್ ನೀಡುವ ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕತಾರ್‌ನಲ್ಲಿ ಸಾಮಾಜಿಕ ಮತ್ತು ದತ್ತಿ ಚಟುವಟಿಕೆಗಳಿಂದ ಗುರುತಿಸಲ್ಪಟ್ಟ ಇವರು, ಕತಾರ್ ತುಳು ಕೂಟದ ಸ್ಥಾಪಕ ಸದಸ್ಯ , ಮತ್ತು ಕೆಎಂಸಿಎ ಕತಾರ್ ಸ್ಥಾಪಕ ಸದಸ್ಯರಾಗಿದ್ದರು. ಸ್ವದೇಶಕ್ಕೆ ಮರಳಿದ ಬಳಿಕ ಹಲವು ಸಾಮಾಜಿಕ ಸಂಘಟನೆಗಳಲ್ಲಿ ತನ್ನನ್ನು ತಾವು ತೊಡಗಿಸಿಕೊಂಡಿದ್ದ ಇವರು, ಉಡುಪಿಯ ಜೈಂಟ್ಸ್ ಗ್ರೂಪ್, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್, ಸಾಹೇಬನ್ ವೆಲ್ಫೇರ್ ಟ್ರಸ್ಟ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್, ಬ್ರಹ್ಮಗಿರಿ ನಾಯಕರೆಯ ಹಾಶಿಮಿ ಮಸೀದಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ, ಇತ್ಯಾದಿ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.
ಸೆ.28ರಂದು ಸಂಜೆ 5.30ಕ್ಕೆ ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.