Header Ads Widget

ಉಡುಪಿ: ರೈಲಿನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನಿಸಿದಾತ ಒಂದೇ ಗಂಟೆಯಲ್ಲಿ ಅರೆಸ್ಟ್



ರೈಲಿನಲ್ಲಿ ಯುವತಿಯ ಮಾನಭಂಗ ಯತ್ನಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಭಟ್ಕಳ ಮೂಲದ ಮೊಹಮ್ಮದ್ ಶುರೈಮ್ (22) ಬಂಧಿತ ಆರೋಪಿ ಆಗಿದ್ದಾನೆ. ಕಳೆದ ಭಾನುವಾರ ರೈಲಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಮೂಲತಃ ಉಡುಪಿ ತಾಲೂಕಿನ ಮಣಿಪಾಲದವರು. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಉಡುಪಿಗೆ ಹೊರಟಿದ್ದರು.

ಭಾನುವಾರ ಮುಂಜಾನೆ ರೈಲು ಸಂಚರಿಸುತ್ತಿದ್ದಾಗಲೇ ಅಸಭ್ಯ ವರ್ತನೆ ತೋರುತ್ತಿದ್ದ. ಯುವತಿಯ ಖಾಸಗಿ ಅಂಗಗಳನ್ನು ಮುಟ್ಟಿ ಕಾಮಚೇಷ್ಠೆ ತೀರಿಸಿಕೊಳ್ಳುತ್ತಿದ್ದ. ಇನ್ನೇನು ಉಡುಪಿಗೆ ಅರ್ಧ ಗಂಟೆ ಇರುವಾಗ ಮಂಗಳೂರು ಹೊರವಲಯದ ಮುಲ್ಕಿ ಬಳಿ ಯುವತಿಯ ಮೇಲೆ ಎರಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಕೂಡಲೇ ಇದಕ್ಕೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗಾಬರಿಗೊಂಡ ಶುರೈಂ ಕ್ಷಮೆಯಾಚಿಸಿದ್ದಾನೆ.

ಕೂಡಲೆ ಯುವತಿ ಆತನ ಫೋಟೊ ತೆಗೆದುಕೊಂಡಿದ್ದಾಳೆ. ಜತೆಗೆ ತಪ್ಪಿಸಿಕೊಂಡು ಹೋಗುತ್ತಿದ್ದವನನ್ನು ಸಹ ಪ್ರಯಾಣಿಕರು ಹಿಡಿದುಕೊಂಡಿದ್ದಾರೆ. ಕೂಡಲೇ ಘಟನೆ ಕುರಿತು ಯುವತಿ ಉಡುಪಿ ರೈಲ್ವೆ ಪೊಲೀಸ್‌ರಿಗೆ ಮಾಹಿತಿ ನೀಡಿದ್ದಾಳೆ. ರೈಲ್ವೆ ಮದದ್ ಆಯಪ್ ಮೂಲಕವೂ ದೂರು ನೀಡಿದ್ದರು. ಯುವತಿ ಮಾಹಿತಿ ಆಧರಿಸಿ ಕೂಡಲೇ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನೂರಾರು ಪ್ರಯಾಣಿಕರ ನಡುವೆ ಆರೋಪಿಯನ್ನು ಪತ್ತೆ ಮಾಡಿದ್ದು ಹೇಗೆ?:

ಇನ್ನು ಯುವತಿ ನೀಡಿದ್ದ ದೂರು, ಹಾಗೂ ಕೆಲ ಸುಳಿವುಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದೇ ರೋಚಕ. ಮೊದಲಿಗೆ ಪೊಲೀಸರು ರೈಲಿನಲ್ಲಿ ಪ್ರಯಾಣಿಸಿದ್ದ ಎಲ್ಲಾ ಪ್ರಯಾಣಿಕರ ವಿವರ ಪಡೆದು ಬಳಿಕ ಅದರಿಂದ ಶಾರ್ಟ್ ಲಿಸ್ಟ್ ಮಾಡಿದರು. ಘಟನೆ ನಡೆದದ್ದು ವೀಕೆಂಡ್ ಆದ ಹಿನ್ನೆಲೆ ಬೆಂಗಳೂರು-ಮುರ್ಡೇಶ್ವರ ನಡುವೆ ಸಂಚರಿಸುವ ಮುರ್ಡೇಶ್ವರ ಎಕ್ಸ್ ಪ್ರೆಸ್ ರೈಲಿನಲ್ಲಿ ಶನಿವಾರ ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ್ದರು. 3 ಹಂತಗಳಲ್ಲಿ ಶಾರ್ಟ್ ಲಿಸ್ಟ್ ರೆಡಿ ಮಾಡಿ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ.

ಬಳಿಕ ಆರೋಪಿ ಭಟ್ಕಳದಲ್ಲಿ ಇಳಿದು ಹೋಗಿದ್ದನ್ನ ಪತ್ತೆ ಹಚ್ಚಿದ್ದ ಪೊಲೀಸರು ಸಿಸಿಟಿವಿ ಫೂಟೇಜ್, ಪ್ರಯಾಣಿಕರ ವಿವರ ಆಧರಿಸಿ ಕಾರ್ಯಾಚರಣೆ ನಡೆಸಿ ಭಟ್ಕಳದ ನಿವಾಸದಿಂದಲೇ ಆರೋಪಿಯನ್ನು ಬಂಧಿಸಿದ್ದಾರೆ.