ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಈ ಬಾರಿಯ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿದೆ. ಸಿನಿಮಾ ರಂಗದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುತ್ತ ಬಂದಿದೆ. 74ನೇ ವಯಸ್ಸಿಗೆ ಈ ಅವಾರ್ಡ್ ಪಡೆದ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಮಿಥುನ್ ಅವರು ಸಿನಿಮಾ ಜರ್ನಿ ನಿಜಕ್ಕೂ ಹಲವು ತಲೆಮಾರಿಗಳಿಗೆ ಸ್ಫೂರ್ತಿ. ದಾದಾಸಾಹೇಬ್ ಫಾಲ್ಕೆ ಆಯ್ಕೆ ಸಮಿತಿ ಮಿಥುನ್ ಚಕ್ರವರ್ತಿಗೆ ಈ ಅವಾರ್ಡ್ ನೀಡಲು ನಿರ್ಧರಿಸಿದೆ. ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ ಈ ಅವಾರ್ಡ್ ನೀಡಲಾಗುತ್ತಿದೆ’ ಎಂದು ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ. 70ನೇ ರಾಷ್ಟ್ರೀಯ ಫಿಲ್ಮ್ ಅವಾರ್ಡ್ ಕಾರ್ಯಕ್ರಮ ಅಕ್ಟೋಬರ್ 8ರಂದು ನಡೆಯಲಿದೆ. ಈ ವೇಳೆ ಮಿಥುನ್ ಚಕ್ರವರ್ತಿಗೆ ಅವಾರ್ಡ್ ನೀಡಿ ಗೌರವಿಸೋ ಕೆಲಸ ಆಗಲಿದೆ. ಸದ್ಯ ಬಾಲಿವುಡ್ ಸೇರಿದಂತೆ ಚಿತ್ರರಂಗದ ಅನೇಕರು ಮಿಥುನ್ಗೆ ಅಭಿನಂದನೆ ಕೋರಿದ್ದಾರೆ. ಮಿಥುನ್ ಚಕ್ರವರ್ತಿ ಜನಿಸಿದ್ದು 1950ರಲ್ಲಿ. ಮಿಥುನ್ ಚಕ್ರವರ್ತಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 1976ರಲ್ಲಿ. ಅಂದರೆ 26ನೇ ವಯಸ್ಸಿಗೆ ಅವರು ಹೀರೋ ಆದರು. ‘ಮೃಗಯಾ’ ಅವರ ನಟನೆಯ ಮೊದಲ ಸಿನಿಮಾ. ಅವರಿಗೆ ಮೊದಲ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ‘ಸುರಕ್ಷಾ’, ‘ಡಿಸ್ಕೋ ಡ್ಯಾನ್ಸರ್’, ‘ಡ್ಯಾನ್ಸ್ ಡ್ಯಾನ್ಸ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಹಿಂದಿ ಹಾಗೂ ಬೆಂಗಾಲಿ ಭಾಷೆಯಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ.