Header Ads Widget

ಶಿವರಾಮ ಕಾರಂತರು ಮತ್ತು ಗಿಲಿಗಿಲಿ ಮ್ಯಾಜಿಕ್

  

1997 ರಲ್ಲಿ ಗಿಲಿಗಿಲಿ ಮ್ಯಾಜಿಕ್ ಕುಟುಂಬ ಉಡುಪಿಯಲ್ಲಿ 2 ನೇ ಭಾರಿ ಜಾಗತಿಕ ಜಾದೂ ಸಮ್ಮೇಳನ ಏರ್ಪಡಿಸಿತ್ತು.

ನಮ್ಮ ಹುಚ್ಚು ಅಭಿಮಾನದಿಂದ ಶಿವರಾಮ ಕಾರಂತರಿಗೂ ಆಮಂತ್ರಣ ಕಳುಹಿಸಿದ್ದೆವು. ಬರುವ ನಿರೀಕ್ಷೆ ಏನೂ ಇರಲಿಲ್ಲ. ಆದರೆ ಕಾರಂತರು ಬಂದೇ ಬಿಟ್ಟರು. 

ನಮಗೋ ...

ದಿಗ್ಭ್ರಮೆ, ಗಾಬರಿ, ಸಂಭ್ರಮ ಗೌರವದಿಂದ ಸ್ವಾಗತಿಸಿ ಕುಳ್ಳಿರಿಸಿದೆವು. ಕಾರಂತರು ಯಾವುದೇ ಕಾರ್ಯಕ್ರಮಕ್ಕೆ ಪ್ರೇಕ್ಷಕನಾಗಿ ಬರುವುದಿಲ್ಲ, ಬಂದರೂ ಐದು ನಿಮಿಷಕ್ಕಿಂತ ಹೆಚ್ಚು ಹೊತ್ತು ಉಳಿಯುವುದಿಲ್ಲ ಎಂದೇ ನಮ್ಮಲ್ಲಿ ತಿಳಿಸಿದವರು ಎಷ್ಟೋ ಜನ. 

ಆದರೆ ಕಾರಂತರು ಆ ವಯಸ್ಸಿನಲ್ಲೂ 3 ಗಂಟೆಗಳ ಕಾಲ ಕುರ್ಚಿಯಲ್ಲಿ ಕುಳಿತೇ ಮ್ಯಾಜಿಕ್ ನೋಡಿದರು.

ಒಂದು ಗಂಟೆ ಕಳೆದಾಗ ಜ್ಯೂನಿಯರ್ ಶಂಕರ್ ಅವರ ಕಾಲಬುಡದಲ್ಲಿ ಕುಳಿತು, ಮೆಲ್ಲಗೆ ಅಜ್ಜಾ ನಿಮಗೆ ಕಷ್ಟ ಆಗುವುದಿಲ್ವೋ ಇಷ್ಟು ಹೊತ್ತು ಕೂತುಕೊಳ್ಳುವುದಕ್ಕೆ... ? ರೆಸ್ಟ್ ತೆಕ್ಕೊಳ್ತೀರಾ...? ರೂಮಿಗೆ ಕರಕ್ಕೊಂಡೋಗ್ಲಾ..?  ಅಂತ ಕೇಳಿದಾಗ ಕಷ್ಟ ಸ್ವಲ್ಪ ಆಗ್ತದೆ ಮುದುಕ ಅಲ್ವೋ...? ಆದರೆ ಇಷ್ಟೆಲ್ಲಾ ಇದೆಯಲ್ಲಾ ನನಗೆ ಗೊತ್ತಿಲ್ಲದ್ದು ... !! ಎಂದು ಹೇಳಿದ ಬೆರಗು ಕಣ್ಣುಗಳ ಅಜ್ಜನನ್ನು ಮರೆಯುವುದಾದರೂ ಹೇಗೆ...? ನಂತರ ಮರುದಿನ ಮಲ್ಪೆ ಬೀಚಿನಲ್ಲಿ 50000 ಕ್ಕೂ ಮಿಕ್ಕಿ ಪ್ರೇಕ್ಷಕರ ಮುಂದೆ ಐತಿಹಾಸಿಕ 'ಇಂಡಿಯನ್ ರೋಪ್ ಟ್ರಿಕ್' ಪ್ರದರ್ಶನವಾಯ್ತು. 

ಕಾರಂತರು ಆಯಾಸಗೊಂಡಿದ್ದರಿಂದ, ಮಾಲಿನಿ ಮಲ್ಯ ಬಂದಿದ್ದರು. ಅಲ್ಲಿ ಅವರಿಗೆ ಈ ಸಮ್ಮೇಳನದ ಸಂಯೋಜನೆ, ಒಟ್ಟೂ ಖರ್ಚು ವೆಚ್ಚದ ಬಗ್ಗೆ ಗೊತ್ತಾಗಿ, ಕಾರಂತರಿಗೆ ವಿಷಯ ತಿಳಿಸಿದರಂತೆ.

ಈ ಸಮ್ಮೇಳನ ನಡೆಸಲು ಯಾವುದೇ ಸ್ವಾಗತ ಸಮಿತಿ ಇಲ್ಲವಂತೆ ...! ಯಾವುದೇ ಪ್ರಾಯೋಜಕರೂ ಇಲ್ಲವಂತೆ ...!ಪ್ರೊಫೆಸರ್ ಶಂಕರ್ ಮತ್ತು ಅವರ ಕುಟುಂಬ, ತಂಡದವರು, ಮತ್ತು ಕೆಲವಾರು ಆಪ್ತ ಸ್ನೇಹಿತರನ್ನು ಮಾತ್ರ ಸೇರಿಸಿಕೊಂಡು ಮಾಡಿದ್ದಂತೆ....! ಆರೇಳು ಲಕ್ಷಗಳಷ್ಟು ಖರ್ಚು ಶಂಕರ್ ಅವರೇ ಮಾಡಿದ್ದಂತೆ ...! ಅಂತ.

ಇದು ಕೇಳಿದ ಕೂಡ್ಲೇ ಕಾರಂತರು ಹೌದಾ ... ನನ್ನ ಅಕೌಂಟಿನಲ್ಲಿ ಎಷ್ಟು ದುಡ್ಡು ಉಂಟು ನೋಡು... ಅಂದ್ರಂತೆ. ನೋಡಿದ್ರೆ ಅದರಲ್ಲಿ ಐದು ಸಾವಿರ ರುಪಾಯಿ ಮಾತ್ರ ಇದ್ದದ್ದು. ಕೂಡಲೇ ಐದು ಸಾವಿರದ ಚೆಕ್ ಬರೆದು... ಹೋಗುವ ಶಂಕರ್ ಅವರಿಗೆ ಕೊಟ್ಟು ಬರುವ ಅಂತ ಹೊರಟು ಉಡುಪಿಗೆ ಬಂದಾಗ, ಶಂಕರ್ ಮನೆಗೆ ಬೀಗ. ಕಾರ್ಯಕ್ರಮ ಎಲ್ಲಾ ಮುಗಿಸಿ, ಶಂಕರ್ ಕುಟುಂಬ ಸಂಬಂದಿಕರ ಮದುವೆಗಾಗಿ ವಿಟ್ಲಕ್ಕೆ ಬಂದಿತ್ತು.

ಕಾರಂತರು ಮನೆಗೆ ಬಂದಿದ್ದರಂತೆ ಅಂತ ಗಿಲಿಗಿಲಿ ಬಳಗದವರೇ ಆಗಿದ್ದ ಪತ್ರಕರ್ತ ಆಸ್ಟ್ರೋ ಮೋಹನ್ ಫೋನ್ ಮಾಡಿ ತಿಳಿಸಿದಾಗ ಶಂಕರ್ ರಾತ್ರಿಯೇ ಉಡುಪಿಗೆ ಹೋಗಿ ಮರುದಿನ ಬೆಳಿಗ್ಗೆಯೇ ಕಾರಂತರ ಮನೆಗೆ ಹೋದರು. 

ಜೊತೆಗೆ ಕುತೂಹಲದಿಂದ ಆಸ್ಟ್ರೋ ಮೋಹನ್ ಕೂಡಾ ಅಲ್ಲಿ ಹೋದ ಕೂಡ್ಲೇ ಕಾರಂತರು, ಬನ್ನಿ ಕೂತುಕೊಳ್ಳಿ ಅಂತ ಹೇಳಿ... ಮಾಲಿನಿ ... ಒಳಗಿಂದ ಅದು ತಾ ..ಅಂತ ಹೇಳಿ, ಮಾಲಿನಿ ಮಲ್ಯ ಅವರು ತಂದ ಮೈಸೂರು ಪೇಠಾ ವನ್ನು ಶಂಕರ್ ಅವರ ತಲೆಗಿಟ್ಟು, (ಆಸ್ಟ್ರೋ ಮೋಹನ್ ಕೈಯಲ್ಲಿ ಕ್ಯಾಮರಾ ಕಂಡದ್ದರಿಂದ) ಸರ್ರನೆ ಕೈ ಹಿಂತೆಗೆದುಕೊಂಡರು. 

ಅಷ್ಟರಲ್ಲಿ ಚಾಣಾಕ್ಷ ಮೋಹನ್ ಆ ಕ್ಷಣವನ್ನು ದಾಖಲಿಸಿ ಆಗಿತ್ತು. "ಇದು ಮೈಸೂರು ಮಹಾರಾಜರು ನನ್ನ ತಲೆಗಿಟ್ಟ ಪೇಠಾ. ಅದು ಇರಬೇಕಾದ್ದು ನನ್ನ ತಲೆಯಲ್ಲಿ ಅಲ್ಲ...  ನಿಮ್ಮ ತಲೆಯಲ್ಲಿ. ಯಾಕೆ ಕೇಳ್ತೀರೋ...!! ಎಷ್ಟೋ ಸಮ್ಮೇಳನ ನೋಡಿದ್ದೇನೆ. ಯಾವುದೇ ಸಮಿತಿ, ಗಿಮಿತಿ ಇಲ್ಲದೇ ಮನೆಯವರು ಮತ್ತು ಕೆಲವೇ ಸ್ನೇಹಿತರ ಸಹಾಯದಿಂದ ಇಷ್ಟು ದೊಡ್ಡ ಜಾಗತಿಕ ಸಮ್ಮೇಳನವನ್ನು ಮಾಡಿದವರನ್ನು ನನ್ನ ಜೀವಮಾನದಲ್ಲೇ ಮೊದಲು ನೋಡ್ತಾ ಇರುವುದು.

ಪೇಠಕ್ಕೆ ಒಂದು ಗೌರವ ಬೇಕಲ್ಲಾ....!!ಇಕೊಳ್ಳಿ ನನ್ನ ಕಿರು ಸಹಾಯ. ಇಷ್ಟೇ ಇದ್ದದ್ದು... ಅಂತ ಹೇಳಿ ಚೆಕ್ ನೀಡಿದರು. ಇದು ಬಹುದೊಡ್ಡ ಗೌರವ ಅಂತ ಶಂಕರ್ ಅವರಿಗೆ ಧನ್ಯತಾ ಭಾವ. ಮತ್ತೆ ಹತ್ತು ದಿನ ಕಳೆದಾಗ ಉಡುಪಿ ಸಮೀಪ ಯಾವುದೋ ಒಂದು ಸಾಹಿತ್ಯ ಸಭೆಗೆ ಅತಿಥಿಯಾಗಿ ಬರಬೇಕೆಂದು ಅಲ್ಲಿಯ ಸಂಘಟಕರುಶಂಕರ್ ಅವರನ್ನು ವಿನಂತಿಸಿಕೊಂಡಾಗ ಶಂಕರ್ ಅವರಿಗೆ ಆಶ್ಚರ್ಯ ಆಗಿ ನಾನು ಬರುವುದಿಲ್ಲಪ್ಪಾ... ಸಾಹಿತ್ಯ ಸಭೆಗೂ, ನನಗೂ ಏನು ಸಂಬಂಧ... ಎಂದಾಗ ಸಂಘಟಕರು-

ಅದು ನಾವು ಶಿವರಾಮಕಾರಂತರನ್ನು  ಆಮಂತ್ರಿಸಲು ಹೋದಾಗ ... ಕಾರಂತರು .... ನನ್ನನ್ನು ಯಾಕೆ ಮುದುಕನನ್ನು ಕರೀತೀರಿ ... ಅಲ್ಲಿ ಒಬ್ರಿದ್ದಾರೆ ಉಡುಪಿಯಲ್ಲಿ ಜಾದುಗಾರ ಶಂಕರ್... ಅವರನ್ನು ಕರೀರಿ.... ಅಂತ ಹೇಳಿದ್ರು ಹಾಗೆ ನಿಮ್ಮಲ್ಲಿಗೆ ಬಂದದ್ದು ಅಂತ ಹೇಳುವಾಗ ... ಕಾರಂತರು ಹೇಳಿದ್ರಾ..!!! ? ಹಾಗಾದ್ರೆ ಖಂಡಿತಾ ಬರ್ತೇನೆ... ಅಂತ ಶಂಕರ್ ಒಪ್ಪಿಕೊಂಡೇ ಬಿಟ್ರು. ನಂತರ ಕೆಲವೇ ದಿನಗಳಲ್ಲಿ ಕಾರಂತರು ಅಸ್ವಸ್ಥರಾದರು. ಮಣಿಪಾಲ ಆಸ್ಪತ್ರೆಗೆ ದಾಖಲಾದಾಗ, ಶಂಕರ್ ಬ್ಯಾಂಕಿಗೆ ಲಾಸ್ ಆಫ್ ಪೇ ರಜೆ ಹಾಕಿ, ನಾಲ್ಕು ದಿವಸ ಹಗಲೂ, ರಾತ್ರಿ ಆಸ್ಪತ್ರೆಯಲ್ಲಿ ಕಾರಂತರ ಆರೈಕೆಗೆ ನಿಂತರು. 

ಕೊನೆಗೆ ಕಾರಂತರ ಉಸಿರು ಸಂಪೂರ್ಣ ನಿಂತು, ಶರೀರ ನಿರ್ಜೀವವಾದಾಗ, ದೇಹವನ್ನು ಅಂಬ್ಯುಲೆನ್ಸ್ ಗೆ ಏರಿಸಿದವರು ಶಂಕರ್ ಮತ್ತು ಅವರ ಸ್ನೇಹಿತರು. (ಪ್ರಾಯಷಃ ಅಷ್ಟ್ರೋ ಮೋಹನ್ ಮತ್ತು ಬೊಳುವಾರು)  ಶಂಕರ್ ... ತನ್ನ ಅಪ್ಪ ಅಮ್ಮ ನಿಧನರಾದಾಗಲೂ ಕಂಗೆಟ್ಟವರಲ್ಲ. ಯಾಕೋ ಕಾರಂತರು ನಿಧನರಾದಾಗ ಶಂಕರ್ ತುಂಬಾ ಅಸ್ತವ್ಯಸ್ಥರಾಗಿದ್ದರು. 

-ಮೂರ್ತಿ ದೇರಾಜೆ