ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭವು ಶುಕ್ರವಾರ ನಡೆಯಲಾಯಿತು. ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರು ಟಿ.ಎಂ.ಎ ಪೈ ಪುತ್ಥಳಿಗೆ ಪುಷ್ಪ ನಮನಗೈದು, ಮುಂದೆ ನೂತನವಾಗಿ ನಿರ್ಮಿಸಲಾದ ಟಿ. ಮೋಹನ ದಾಸ ಪೈ ಮೆಮೋರಿಯಲ್ ಕೌಶಲ್ಯಾಭಿವೃದ್ಧಿ ಕೇಂದ್ರದ ಕಟ್ಟಡ 'ಅಮೃತ ಸೌಧ’ದ ಉದ್ಘಾಟನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಮೃತ ಮಹೋತ್ಸವ ಪ್ರಯುಕ್ತ ಕಾಲೇಜಿನ ವಿವಿಧ ವಿಭಾಗಗಳಿಂದ ಆಯೋಜನೆಗೊಂಡಿರುವ ವಿಶೇಷ ವಸ್ತು ಪ್ರದರ್ಶನವನ್ನು ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಉದ್ಘಾಟಿಸಿದರು.
ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಈ ವಸ್ತು ಪ್ರದರ್ಶನವು ಕಾಲೇಜಿನ ಸಮರ್ಪಣಾಭಾವ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿದೆ. ಇದು ಸಂಸ್ಥೆಯ ಪ್ರಯಾಣ ಮತ್ತು ಸಾಧನೆಗಳನ್ನು ಪ್ರತಿಬಿಂಬಿಸುವ ವಿವಿಧ ವಿಷಯಗಳನ್ನು ಪ್ರದರ್ಶಿಸುತ್ತದೆ. ಈ ಅಮೃತ ಮಹೋತ್ಸವ ವರ್ಷದಲ್ಲಿ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮುಂದು ವರೆಸಲಿ ಎಂದು ಹಾರೈಸಿದರು.
ಟಿ.ಸತೀಶ್ ಯು. ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿಯನ್ನು ವಹಿಸಿದ ಉಡುಪಿ ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚಿಸಿ, ಈ ನಾಡು ಹಲವಾರು ಪುಣ್ಯಾತ್ಮರು ನೆಲೆಸಿರುವ ಪುಣ್ಯ ಕ್ಷೇತ್ರವಾಗಿದೆ.
ಇಲ್ಲಿನ ಎಂಜಿಎಂ ಕಾಲೇಜು ವಿದ್ಯಾರ್ಥಿ ಶ್ರೇಯೋಭಿವೃದ್ಧಿಗಾಗಿ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಶ್ರೇಷ್ಠ ಸಾಧನೆ ಮಾಡಿದೆ. ಈ ಕಾಲೇಜು ಸ್ಥಾಪನೆಯಾದಾಗಿನಿಂದ ಹಂತಹಂತವಾಗಿ ಗಮ ನಾರ್ಹ ಬೆಳವಣಿಗೆ ಕಂಡಿದೆ. ಅದರ ನಿರಂತರ ಯಶಸ್ಸಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಭಾಗವಹಿಸಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉಡುಪಿ ಜಿಲ್ಲೆಗೆ ಕರಾವಳಿ, ಮಣಿಪಾಲ, ಕೃಷದೇಗುಲಗಳಂತೆ ಎಂಜಿಎಂ ಕಾಲೇಜು ಕೂಡಾ ಒಂದು ಆಧಾರ ಸ್ಥಂಭ ವಾಗಿದೆ. ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯಬೇಕು ಎಂದು ಹಾರೈಸಿದರು.
ಪೋಸ್ಟಲ್ ಕವರ್ ಬಿಡುಗಡೆ: ಕಾಲೇಜಿನ ಅಮೃತ ಮಹೋತ್ಸವ ಪ್ರಯುಕ್ತ ಉಡುಪಿಯ ಅಂಚೆ ಅಧೀಕ್ಷಕ ರಮೇಶ್ ಪ್ರಭು ಅವರು ಕಾಲೇಜಿನ ಅಮೃತ ಮಹೋತ್ಸವದ ಪ್ರಯುಕ್ತ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದರು.
ಅಂಚೆ ಲಕೋಟೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇದು ಉಡುಪಿಯಲ್ಲಿ ಸ್ಥಾಪನೆಯಾದ ಮೊದಲ ಕಾಲೇಜು. ಟಿ.ಎಂ.ಎ. ಪೈ ಅವರು ತಮ್ಮ ಭಿನ್ನ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಸ್ಥಾಪಿಸಿದ ಸಂಸ್ಥೆಗಳು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿ ಉಜ್ವಲ ವಿದ್ಯಾರ್ಥಿಗಳನ್ನು ನಿರಂತರವಾಗಿ ಬೆಳೆಸಿವೆ. ಈ ಸಂಸ್ಥೆಯ ಯಶಸ್ಸಿಗೆ ಅದರ ನಿರ್ವಹಣೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸಮರ್ಪಣೆ ಕಾರಣ ಎಂದು ನಾನು ನಂಬುತ್ತೇನೆ ಹಾಗೂ ಅವರೆಲ್ಲರೂ ಕೂಡ ಈ ಅಭಿನಂದನಾರ್ಹರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗಿಯಾದ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಮಾತನಾಡಿ, ಸಂಸ್ಥೆಯ ಯಶಸ್ಸಿಗೆ ಭದ್ರ ಬುನಾದಿ ಹಾಕಿದ ಎಂಜಿಎಂ ಕಾಲೇಜಿನ ಮಾಜಿ ಪ್ರಾಂಶು ಪಾಲರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಅಭಿವೃದ್ಧಿಶೀಲ ಆರ್ಥಿಕತೆಯಲ್ಲಿ ನುರಿತ ವೃತ್ತಿಪರರ ಅಗತ್ಯ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಇದನ್ನು ಪೂರೈಸಲು ಹೊಸ ಕೌಶಲ್ಯ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ ರುವುದನ್ನು ಶ್ಲಾಘಿಸಿದರು.
ಅಕಾಡೆಮಿಯ ಕಾರ್ಯದರ್ಶಿ ಸಿಎ ಬಿ.ಪಿ ವರದರಾಯ ಪೈ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಎಂಜಿಎಂ ಕಾಲೇಜಿನ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.
ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ಬೆಂಗಳೂರು ಉತ್ತರ ವಿ.ವಿ.ಯ ಉಪಕುಲಪತಿ ನಿರಂಜನ ವಾನಳ್ಳಿ, ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆದು, ತಮ್ಮ ಪ್ರಗತಿಗೆ ಎಂಜಿಎಂ ನೀಡಿದ ಕೊಡುಗೆ ಅಪಾರ ಎಂದರು.
ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್, ಮಾಹೆಯ ಸಹ ಉಪಕುಲಪತಿ ಡಾ.ನಾರಾಯಣ ಸಭಾಹಿತ್, ಡಾ.ಟಿ.ಎಂ.ಎ ಫೌಂಡೇಶನ್‌ನ ಅಧ್ಯಕ್ಷ ಟಿ.ಅಶೋಕ್ ಪೈ, ಎಂಜಿಎಂ ಕಾಲೇಜು ವಿಶ್ವಸ್ಥ ಮಂಡಳಿಯ ಟ್ರಸ್ಟಿ ವಸಂತಿ ಆರ್.ಪೈ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಟಿ.ಎಂ.ಎ. ಪೈಗಳ ಕುಟುಂಬ ವರ್ಗ, ನಿವೃತ್ತ ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಪ.ಪೂ.ಕಾಲೇಜು ಪ್ರಾಂಶುಪಾಲೆ ಮಾಲತಿದೇವಿ, ಟಿ.ಮೋಹನದಾಸಪೈ ಕೌಶಲ್ಯಾಭಿವೃದ್ಧಿಕೇಂದ್ರದ ನಿರ್ದೇಶಕ ಟಿ.ರಂಗ ಪೈ ಉಪಸ್ಥಿತರಿದ್ದರು.
ಎಂಜಿಎಂ ಪದವಿ ಕಾಲೇಜಿನ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಸ್ವಾಗತಿಸಿ, ಸಂಧ್ಯಾ ಕಾಲೇಜಿನ ಪ್ರಾಂಶು ಪಾಲ ಡಾ.ದೇವಿದಾಸ್ ಎಸ್ ನಾಯ್ಕ ವಂದಿಸಿದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಅಶ್ವಿನಿ ಸಿ. ಆಚಾರ್ಯ ಮತ್ತು ಸಂಸ್ಕೃತ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಎಂ. ನಿರೂಪಿಸಿದರು.