Header Ads Widget

ಗುರು ಪರಂಪರಾ ಸಂಪ್ರದಾಯ ಬದ್ಧ ಸಂಗೀತ ಕಛೇರಿ

ರಾಗ ಧನ ಉಡುಪಿ (ರಿ) ಸಂಸ್ಥೆಯು ದಿನಾಂಕ 24. 11. 2024 ಆದಿತ್ಯವಾರ ಸಂಜೆ 3.00 ರಿಂದ 6:30ರ ವರೆಗೆ 'ಸರಿಗಮ ಭಾರತಿ ಸಂಗೀತ ವಿದ್ಯಾಲಯ' ಪರ್ಕಳ, ಉಡುಪಿ ಇಲ್ಲಿ "ರಾಗರತ್ನ ಮಾಲಿಕೆ- 31" 'ರಂಜನಿ ಸಂಸ್ಮರಣಾ ಸಂಗೀತ ಕಛೇರಿ'ಯನ್ನು ಹಮ್ಮಿಕೊಂಡಿತ್ತು.

ಇದನ್ನು ನಡೆಸಿಕೊಟ್ಟವರು ಪ್ರಸಿದ್ಧ ಸಂಗೀತ ಕಲಾವಿದರಾದ ಶ್ರೀ ಹೆಮ್ಮಿಗೆ ಎಸ್.ಪ್ರಶಾಂತ್- ಬೆಂಗಳೂರು ರವರು. ಇವರ ಗುರುಗಳಲ್ಲೊಬ್ಬರಾದ ಶ್ರೇಷ್ಠ ವಿದ್ವಾಂಸರಾದ ಕೆ. ವಿ. ನಾರಾಯಣ ಸ್ವಾಮಿಯವರ ಛಾಪನ್ನು ಇವರ ಸಂಗೀತದಲ್ಲಿಯೂ ಕಾಣಬಹುದಾಗಿದೆ.

ಶ್ರೀ ಪ್ರಶಾಂತ್ ಅವರು ಆರಿಸಿಕೊಂಡ ಎಲ್ಲಾ ಪ್ರಸ್ತುತಿಗಳಲ್ಲಿಯೂ ಆಯಾ ರಾಗಗಳಲ್ಲಿನ ಸಂಚಾರದಲ್ಲಿನ ನಿಖರತೆ, ಸ್ವರಪ್ರಸ್ತಾರಗಳಲ್ಲಿನ ಖಚಿತತೆ, ಲಯ ಬದ್ಧತೆ ಎಲ್ಲವೂ ಎದ್ದು ಕಾಣುತ್ತಿತ್ತು.

ಅವರು ಆರಿಸಿಕೊಂಡ ವರ್ಣ ನೆರನಮ್ಮಿತಿ -ಕಾನಡಾ- ಅಟತಾಳ ಸಂಪ್ರದಾಯಬದ್ಧವಾಗಿತ್ತು. ಮುಂದಕ್ಕೆ 'ನೀವಾಡ ನೇಗಾನ' (ಸಾರಂಗ- ಖಂಡ ಛಾಪು- ತ್ಯಾಗರಾಜ) ಚಿಕ್ಕ ಚೊಕ್ಕದಾದ ಸ್ವರಪ್ರಸ್ತಾರದಿಂದ ಕೂಡಿತ್ತು. ಮುಂದೆ (ಲೇಕನಾ ನಿನ್ನು ಜೂಟಿ- ಅಸಾವೇರಿ- ಆದಿತಾಳ ವಿಳಂಬ) ಶುದ್ಧ ಪಾಠಾಂತರ, ಆಲಾಪನೆ, ಕಲ್ಪನಾ ಸ್ವರಗಳಿಂದ ಅಲಂಕರಿಸಲ್ಪಟ್ಟಿತ್ತು. ಮುಂದೆ ಪ್ರಸ್ತುತಗೊಂಡ "ರಾಮಾ ಇಕ ನನ್ನು ಬ್ರೋವರಾದಾ- ಶಹನ-ರೂಪಕ- ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ಕೃತಿ"- ಆಲಾಪನೆ ಹಾಗೂ ಸ್ವರ ಪ್ರಸ್ತಾರದಲ್ಲಿ ಅವರ ಸಾಧನೆಯ ದೃಢತೆ ಎದ್ದು ಕಾಣುತ್ತಿತ್ತು. 

ಇವರ ಸಬ್ ಮೈನ್ ಕೃತಿ "ಕರಿಕಲಾಭ ಮುಖಮ್" ಎಂಬ ಸಾವೇರಿ ರಾಗದ, ತ್ರಿಶ್ರ ಏಕತಾಳದ- ದೀಕ್ಷಿತರ ಅಪರೂಪವಾಗಿ ಕೇಳಿಬರುವ ಕೃತಿ 'ಕರಿಕಲಾಭಿ' ಎಂಬಲ್ಲಿ ಇವರು ಹಾಕಿದ ಕಲ್ಪನಾ ಸ್ವರಗಳಲ್ಲಿ ಗಟ್ಟಿ ಲಯ, ದೃಢವಾದ ಆತ್ಮವಿಶ್ವಾಸದಿಂದೊಡಗೂಡಿದ ಸ್ವರಗುಚ್ಛಗಳು ಬಹುಕಾಲ ನೆನಪಿನಲ್ಲಿ ಉಳಿಯುವಂಥಾ ಪ್ರಕಾರಗಳು. ಕನ್ನಡ ಗೌಳ ರಾಗದ ಆದಿತಾಳದ "ಓರಜೂಪು" ತ್ಯಾಗರಾಜರ ಕೃತಿಯ ನಂತರ ಪ್ರಧಾನ ಪ್ರಸ್ತುತಿ ಕಾಂಭೋಜಿರಾಗದ ಎವ್ವರಿಮಾಟ- ವಿಳಂಬ-ಆದಿತಾಳ- ತ್ಯಾಗರಾಜ ಕೃತಿ, ವಿಸ್ತಾರವಾದ ಆಲಾಪನೆ (ಪರಮಭಕ್ತ ಪರಾಧೀನುಡನುಚು) ಎಂಬಲ್ಲಿ ವಿದ್ವತ್ಪೂರ್ಣವಾದ ನೆರವಲ್, ಕಲ್ಪನಾ ಸ್ವರಗಳಿಂದ ಅಲಂಕರಿಸಿದರು. ಶ್ರೀಯುತರ ಗಾಯನದಲ್ಲಿ ವಿದ್ವಾನ್ ಕೆ. ವಿ. ನಾರಾಯಣಸ್ವಾಮಿಯವರ ಶೈಲಿಯನ್ನು ಕಾಣಬಹುದಾಗಿದೆ. 

ತನಿ ಆವರ್ತನದ ಬಳಿಕ 'ಹೂವ ತರುವರ ಮನೆಗೆ ಹುಲ್ಲತರುವಾ' ಎಂಬ ಪುರಂದರದಾಸರ ದೇವರ ನಾಮವನ್ನು (ಅಭೇರಿ-ಖಂಡ ಚಾಪು) ಹೃದ್ಯವಾಗಿ ನಿರೂಸಿದರು. ಮುಂದೆ ಸಿಂಧುಭೈರವಿಯಲ್ಲಿ ಮಂಕುತಿಮ್ಮನ ಕಗ್ಗವನ್ನು ಹಾಡಿ ಬಿಹಾಗರಾಗದಲ್ಲಿ ಡಿವಿಜಿಯವರ 'ಏನೇ ಶುಕಭಾಷಿಣಿ' (ಆದಿತಾಳ) 'ಅಂತ:ಪುರ ಗೀತೆ'ಯನ್ನು ಹಾಡಿ 'ಪವಮಾನ' ಮಂಗಲದೊಂದಿಗೆ ಸಂಗೀತ ಕಛೇರಿ ಸಂಪನ್ನಗೊಳಿಸಿದರು. 

ಈ ಕಲಾವಿದರಿಗೆ ಅನುಭವವೀ ಕಲಾವಿದರಾದ ಶ್ರೀಮತಿ ಚಾರುಲತಾ ರಾಮಾನುಜಂ- ಬೆಂಗಳೂರು ವಯೊಲಿನ್ ನಲ್ಲಿಯೂ, ವಿದ್ವಾನ್ ಸುನಾದಕೃಷ್ಣ ಅಮೈ ಮೃದಂಗದಲ್ಲಿಯೂ ಪ್ರಧಾನ ಕಲಾವಿದರಿಗೆ ಸರಿಸಾಟಿಯಾದ ಉತ್ತಮ ರೀತಿಯ ಸಹಕಾರವನ್ನು ಕೊಟ್ಟಿದ್ದಾರೆ. ಈ ಮೂರೂ ಕಲಾವಿದರ ಮೇಳೈಸುವಿಕೆಯಿಂದ ಕೂಡಿದ ಈ ಸಂಗೀತ ಕಛೇರಿ ದೀರ್ಘಕಾಲ ಸ್ಮೃತಿಪಟಲದಲ್ಲಿ ಉಳಿಯುವಂಥಾದ್ದು. ಇದಕ್ಕೆ ಕಾರಣೀಭೂತರಾದ ಎಲ್ಲಾ ಸಂಗೀತ ಸಂಘಟಕರಿಗೆ, ಸಂಗೀತ ಪ್ರಿಯರಿಗೆ, ಸಂಗೀತಾರಾಧಕರಿಗೆ ತುಂಬು ಹೃದಯದ ನಮನಗಳು.

~ವಿದುಷಿ ಶ್ರೀಮತಿ ವಾರಿಜಾಕ್ಷಿ ಆರ್.ಎಲ್. ಭಟ್, ಉಡುಪಿ.