ಭಾರತೀಯ ಅಂಚೆ ಇಲಾಖೆಯ ಅಸ್ಮಿತೆಗಳಲ್ಲಿ ಒಂದಾಗಿರುವ ಅಂಚೆ ಚೀಟಿ ಹಾಗು ಅಂಚೆ ಪರಿಕರಗಳ ಭಾಗವಾಗಿರುವ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು (ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್) ವಿಶೇಷ ವ್ಯಕ್ತಿಗಳೊಂದಿಗೆ,ವಿಶಿಷ್ಟ ವಸ್ತು ಹಾಗು ಸ್ಥಳಗಳೊಂದಿಗೆ ವೈಶಿಷ್ಟ್ಯ ಪೂರ್ಣ ನಂಟು ಹೊಂದಿದೆ. ಕರ್ನಾಟಕ ಅಂಚೆ ವೃತ್ತದಿಂದ ಅನಾವರಣ ಗೊಂಡ ಹನ್ನೆರಡು ಪಿ ಪಿ ಸಿ ಗಳಲ್ಲಿ ಭೌಗೋಳಿಕ ಮಾನ್ಯತೆ ಇರುವ ಶಂಕರಪುರ ಮಲ್ಲಿಗೆ ಹಾಗೂ ಮಟ್ಟು ಗುಳ್ಳ ಇವೆರಡು ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸ್ ಲೇಷನ್ ಗಳನ್ನು ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ ನ ಅಡಿಟೋರಿಯಮ್ ನಲ್ಲಿ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ರವರು ವರ್ಚುವಲ್ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು. ಬಳಿಕ ಶಂಕರಪುರ ಉಪ ಅಂಚೆ ಕಚೇರಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ರಮೇಶ್ ಪ್ರಭುರವರು ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ ಬಗ್ಗೆ ಮಾಹಿತಿ ನೀಡಿ ವಿಶೇಷ ವಸ್ತು, ವಿಶೇಷ ಸ್ಥಳ,ವಿಶೇಷ ವ್ಯಕ್ತಿಗಳ ವೈಶಿಷ್ಟ್ಯತೆಯನ್ನು ಸಾರುವ ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು, ಉಚಿತ ಸೇವೆಯಾಗಿ ಲಭ್ಯವಿರುವ ಇದನ್ನು ಪತ್ರ ವ್ಯವಹಾರಗಳಲ್ಲಿ ಇಲ್ಲವೇ ಸಂಗ್ರಹಣೆಯಲ್ಲಿ ಹೆಚ್ಚು ಹೆಚ್ಚು ಬಳಸಿ ಆ ವಸ್ತುವಿನ ಪ್ರಾಮುಖ್ಯತೆಯನ್ನು ಎಲ್ಲರಿಗೂ ಮನದಟ್ಟು ಮಾಡಬೇಕು ಎಂದು ಕರೆ ನೀಡಿದರು. ಶಂಕರಪುರ ಉಪ ಅಂಚೆ ಕಚೇರಿಯ ಅಂಚೆ ಪಾಲಕ ಹರೀಶ್ ಕಿರಣ್ ಸ್ವಾಗತಿಸಿದರು. ವಿನ್ಯಾಸಗೊಳಿಸಿದ ಹಿರಿಯ ಅಂಚೆ ಚೀಟಿ ಸಂಗ್ರಹಣಾಕಾರರಾದ ಎಮ್ ಕೆ ಕೃಷ್ಣಯ್ಯ ಶುಭ ಹಾರೈಸಿದರು. ಹಿರಿಯ ಅಂಚೆ ಚೀಟಿ ಸಂಗ್ರಹಣಾಕಾರರಾದ ವಿದ್ಯಾ ಬಾಗಲೋಡಿ ಹಾಗು ನಾಗೇಂದ್ರನಾಯಕ್ ಅಮ್ಮುಂಜೆ ಉಪಸ್ಥಿತಿತರಿದ್ದರು.ಅಂಚೆ ನಿರೀಕ್ಷಕರಾದ ಶಂಕರ್ ಲಮಾಣಿ, ಉಡುಪಿ ವಿಭಾಗೀಯ ಕಚೇರಿಯ ಪ್ರಜ್ವಲ್ ಸಹಕರಿಸಿದರು. ಸಹಾಯಕ ಅಂಚೆ ಅಧೀಕ್ಷಕ ವಸಂತ್ ಧನ್ಯವಾದವಿತ್ತರು. ಉಡುಪಿ ಅಂಚೆ ಕಚೇರಿಯ ಪೂರ್ಣಿಮಾ ಜನಾರ್ದನ ನಿರೂಪಿಸಿದರು.