ಉಡುಪಿ : ಸೌಹಾರ್ದ ಸಹಕಾರಿ ಬೆಳವಣಿಗೆಯಲ್ಲಿ ಸಹಕಾರಿಯ ಆಡಳಿತ ಮಂಡಳಿಯ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಸಹಕಾರಿಯ ಪ್ರತಿಯೊಂದು ವ್ಯವಹಾರದ ಹೊಣೆಗಾರಿಕೆ ಆಡಳಿತ ಮಂಡಳಿ ನಿರ್ದೇಶಕರದ್ದಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ಉಡುಪಿ ಜಿಲ್ಲಾ ನಿರ್ದೇಶಕ ಮಂಜುನಾಥ್ ಎಸ್.ಕೆ.ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ಉಡುಪಿ ಡಯಾನ ಹೊಟೇಲಿನಲ್ಲಿ ಉಡುಪಿ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ನಿರ್ದೇಶಕರುಗಳಿಗಾಗಿ ಶುಕ್ರವಾರ ನಡೆದ ಆಡಳಿತ ಪರಿಣಿತಿ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಫೆಡರೇಶನ್ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಮಾತನಾಡಿ, ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಡಳಿತ ಮಂಡಳಿ ಸದಸ್ಯರಿಗೆ ತಮ್ಮ ಸಹಕಾರಿಯನ್ನು ಸಮರ್ಥವಾಗಿ ನಡೆಸಲು ಸಹಾಯವಾಗುವ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದರು. ಸಹಕಾರಿ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿಗಳ ಬೆಳವಣಿಗೆ ಉತ್ತಮವಾಗಿದೆ. ಆಡಳಿತ ಮಂಡಳಿಯ ಸದಸ್ಯರು ಅತ್ಯಂತ ಜಾಗರೂಕರಾಗಿ ಸಹಕಾರಿಯ ಲೆಕ್ಕಪತ್ರಗಳು ಮತ್ತು ಸಾಲ ನೀಡಿಕೆ ಕುರಿತು ಆಡಳಿತ ಮಂಡಳಿಯಲ್ಲಿ ಸೂಕ್ತ ರೀತಿಯಲ್ಲಿ ಚರ್ಚಿಸಬೇಕು ಎಂದರು. ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಅಧಿಕಾರಿ ಹೆನ್ರಿ ಡಿಸೋಜಾ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ನಿರ್ದೇಶಕರುಗಳಾದ ಬೋಳ ಸದಾಶಿವ ಶೆಟ್ಟಿ, ಮಧುಸೂದನ್ ನಾಯಕ್,ಸುಧೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲೋಹಿತ್ ಜಿ.ಸಾಲ್ಯಾನ್ ವಂದಿಸಿದರು.