ಅದ್ಧೂರಿಯಾಗಿ ಉದ್ಘಾಟನೆಗೊಂಡ ಉಡುಪಿ ಆಯುರ್ವೇದ ಕಾಲೇಜಿನ ನೂತನ ಕಟ್ಟಡ

ಉಡುಪಿ : ಎಸ್‌ಡಿಎಂ ಆಯುರ್ವೇದಿಕ್‌ ಮತ್ತು ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೂತನ ಕಟ್ಟಡ ದಿ.31.ಜ 2025ರಂದು  ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ಈ ಮೊದಲು ಆಯುರ್ವೇದವನ್ನು ಶೈಕ್ಷಣಿಕವಾಗಿ ಸರಿಯಾಗಿ ಕಲಿಯುವ ಅವಕಾಶ ಇರಲಿಲ್ಲ. ಆದರೆ ಈಗ ಹಾಗಿಲ್ಲ. ಯಾರು ಬೇಕಾದರೂ ಆಯುರ್ವೇದವನ್ನು ಅಧ್ಯಯನ ಮಾಡುವ ಅವಕಾಶಗಳಿವೆ. ಕೊರೋನಾದ ಸಂದರ್ಭದಲ್ಲಿ ಆಯುರ್ವೇದ ಮಹತ್ತರ ಪಾತ್ರ ಹೊಂದಿತ್ತು ಮತ್ತು ಇಂದು ಜನರಿಗೆ ಈ ಕುರಿತು ಅರಿವು ಮೂಡಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿದರು. 


ಎಸ್‌ಡಿಎಂ ‌ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆಯುರ್ವೇದ ನಮ್ಮ ದೇಶದ ಪ್ರಾಚೀನ ಪದ್ಧತಿ. ನಮ್ಮಲ್ಲಿರುವ ಮೂರು ಆಯುರ್ವೇದದ ಕಾಲೇಜುಗಳು ಉತ್ತಮ ಹೆಸರನ್ನು ಕಾಯ್ದುಕೊಂಡಿದೆ. 


ಶ್ರೇಯಸ್‌ ಅವರ ನೇತೃತ್ವದಲ್ಲಿ ಉಡುಪಿಯ ಈ ಕಟ್ಟಡ ಸಂಪೂರ್ಣಗೊಂಡಿರುವುದು ಸಂತೋಷದ ವಿಚಾರ ಎಂದು ಎಸ್‌ಡಿಎಂ ಶಿಕ್ಷಣ ಸಮೂಹಗಳ ನಿರ್ದೇಶಕ ಶ್ರೇಯಸ್‌ ಅವರನ್ನು ಶ್ಲಾಘಿಸಿದರು.    ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀಶ್ರೀಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳು ಆಶೀರ್ವಚನ ನೀಡಿ, ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆಯಲ್ಲಿ ಪಾಳ್ಗೊಳ್ಳಲು ಸಂತಸವಾಗುತ್ತಿದೆ. ಇವತ್ತು ದೇಶದಲ್ಲಿ ಎಸ್‌ಡಿಎಂ ಎನ್ನುವ ಮೂರಕ್ಷರದ ಹೆಸರು ಎಲ್ಲೆಡೆ ಪಸರಿಸಿದೆ. ಯೋಗ, ಶಿಕ್ಷಣ, ನ್ಯಾಚು ರೋಪತಿ,ಆಯುರ್ವೇದ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರವೇಶಿಸಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದೆ ಮತ್ತು ನೀಡುತ್ತಿದೆ. ಇದರ ಪೂರ್ಣ ಸೂತ್ರದಾರರು ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರು ಎಂದರು.


ಅಯೋಧ್ಯೆಯಲ್ಲಿ ರಾಮಮಂದಿರ ಪೂರ್ಣವಾಯಿತು. ಆದರೆ ನಮಗೆ ರಾಮರಾಜ್ಯದ ಕನಸು ನನಸಾಗ ಬೇಕು. ಅಂದರೆ ಸಮಾಜದ ಎಲ್ಲರೂ ಸುಖಿಗಳಾಗಿರಬೇಕು. ಹಿಂದಿನ ಕಾಲದಲ್ಲಿ ಯೋಗಶಾಲೆ- ಆಸ್ಪತ್ರೆ ಗಳ ಅವಶ್ಯಕತೆಯಿರಲಿಲ್ಲ. ಏಕೆಂದರೆ ಎಲ್ಲರ ಆಹಾರ ಪದ್ಧತಿಯೇ ಹಾಗಿತ್ತು. ಕಾಲಕ್ಕನುಗುಣ ವಾಗಿ ಅಗತ್ಯವನ್ನು ಪೂರೈಸುವುದಕ್ಕೆ ಎಸ್‌ಡಿಎಂ ಸಂಸ್ಥೆಗಳಿಂದ ಸಾಧ್ಯವಾಗಿದೆ. ಇಂತಹ ಉಪಕಾರವನ್ನು ನಾಡಿಗೆ ಮಾಡುತ್ತ ಬಂದಿರುವ ಧರ್ಮಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಬೇಕು ಎಂದು ಆಶೀರ್ವಚನ ನೀಡಿದರು.

  

ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶ್ರೀ. ಡಿ ವೀರೇಂದ್ರ ಹೆಗ್ಗಡೆ ಯವರು ಹಲವು ವರ್ಷಗಳಿಂದ ಸಮಾಜ ಕಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ. ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟವರನ್ನು ನೋಡಿದರೆ ಹೆಮ್ಮೆಯಾಗುತ್ತಿದೆ. ಇಂತಹ ನೂರಾರು ಸಂಸ್ಥೆಗಳನ್ನು ಕಟ್ಟುವ ಸಾಮರ್ಥ್ಯ ಹೆಗ್ಗಡೆಯವರಿಗೆ ಮತ್ತು ಕ್ಷೇತ್ರಕ್ಕಿದೆ ಎಂದು ಹೇಳಿದರು. 


ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಶ್ರೀ ಶ್ರೀ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದಂಗಳು ಉದ್ಘಾಟನಾ ಭಾಷಣದಲ್ಲಿ ಆಶೀರ್ವಚನ ನೀಡುತ್ತಾ, ಇಂದು ಕರ್ನಾಟಕದಲ್ಲಿ ಬಹು ವಿಶೇಷವಾದ ದಿನವಾಗಿದೆ. ಮಂಜುನಾಥನ ಪ್ರಸನ್ನತೆ ಇಡೀ ವಿಶ್ವಕ್ಕೆ ಒಳ್ಳೆಯದನ್ನೇ ಮಾಡುತ್ತಿದೆ. ಮಂಜುನಾಥೇಶ್ವರನ ಹೆಸರಿನಿಂದ ದೇಶದಲ್ಲಿ ಹತ್ತು ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವ ಮತ್ತು ಹಲವು ಮುಖಗಳಿಂದ ದೇಶಕ್ಕೆ ಮತ್ತು ನಾಡಿಗೆ ನೀಡುತ್ತಿರುವುದು ಸಂಸ್ಥೆಯ ಮುಖ್ಯ ಕೊಡುಗೆ.


ಹದಿನಾಲ್ಕು ವಿದ್ಯೆಗಳಲ್ಲಿ ಒಂದಾದ ಆಯುರ್ವೇದವನ್ನು ಆಧುನಿಕ ಚಿಕಿತ್ಸಾ ಪದ್ದತಿಗೆ ಮೋಹಗೊಂಡು ನಾವೆಲ್ಲಾ ಇದನ್ನು ಮರೆಯುತ್ತಿದ್ದೇವೆ.  ಈ ಕ್ಷೇತ್ರದ ಮಹತ್ವವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಕಟ್ಟಿದ ಈ ಸಂಸ್ಥೆಗೆ ಶುಭವೇ ಆಗಲಿದೆ. ಆಯುರ್ವೇದ ಶಾಸ್ತ್ರದಲ್ಲಿ ಮಾಯವಾಗದ ರೋಗವೂ ಇಲ್ಲ ಮತ್ತು ಔಷಧವೂ ಇಲ್ಲ. ಇದನ್ನು ಸಮಾಜ ಅರಿಯದಿರುವುದು ನಮ್ಮ ದೌರ್ಭಾಗ್ಯ. ಮತ್ತೊಮ್ಮೆ ನಮ್ಮ ಪ್ರಾಚೀನತೆಯನ್ನು ನೆನಪಿಸಿಕೊಡುತ್ತ ಸಮಾಜವನ್ನು ಗುಣಮುಕ್ತವಾಗಿಸುವುದರಲ್ಲಿ ತೊಡಗಿರುವ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಿಗೆ ಧನ್ಯವಾದಗಳು ಎಂದರು. 


ಆಯುರ್ವೇದ ಮಂಡಳಿಯ ಅಧ್ಯಕ್ಷರು, ಭಾರತೀಯ ವೈದ್ಯಕೀಯ ಪದ್ದತಿ ರಾಷ್ಟ್ರೀಯ ಆಯೋಗ, ಆಯುಷ್‌ ಸಚಿವಾಲಯ ವದೆಹಲಿಯ ಶ್ರೀನಿವಾಸ ಪ್ರಸಾದ್‌ ಬುದುರು ಮಾತನಾಡಿ, ಎಸ್‌ಡಿಎಂ ಕಾಲೇಜಿನ ಗುರಿಯನ್ನು ನಾನು ಶ್ಲಾಘಿಸುತ್ತೇನೆ. ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಶ್ರೀ ವೀರೇಂದ್ರ ಹೆಗ್ಗಡೆಯವರು ಆಯುರ್ವೇದ ಕಾಲೇಜಿನ ಕನಸನ್ನು ಹೊಂದಿದ್ದರು. ಎಂದು ಹೇಳಿದರು ಮತ್ತು ಎಸ್‌ಡಿಎಂ ಆಯುರ್ವೇದ ಕಾಲೇಜು, ಉಡುಪಿಯ ಸ್ನಾತಕೋತ್ತರ ವಿಭಾಗದ ಬೆಳ್ಳಿ ಹಬ್ಬದ ಅಂಗವಾಗಿ 25 ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಿದರು.


ಕಾಪು ವಿಧಾಸಭಾ ಕ್ಷೇತ್ರದ ಶಾಸಕ ಗುರುಮೆ ಶ್ರೀನಿವಾಸ ಶೆಟ್ಟಿಯವರು ಎಸ್‌ಡಿಎಂ ಉಡುಪಿಯ ಅಮೂಲ್ಯ 250 ಪುಷ್ಪ ಔಷಧಿ ಸಸ್ಯಗಳ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ನೈರುತ್ಯ ಪಧ ವೀಧರ ವಿಧಾನಪರಿಷತ್‌ ಕ್ಷೇತ್ರದ ಶಾಸಕ ಡಾ. ಧನಂಜಯ್‌ ಸರ್ಜೆ ಮಾತನಾಡಿ, ಇಡೀ ಕಾಲೇಜಿನ ಮಾದರಿಯನ್ನು ಅಲೋಚಿಸಿ ಕಾರ್ಯರೂಪಕ್ಕೆ ತಂದು ಇಂದು ಉದ್ಘಾಟನೆಯವರೆಗೆ ತಂದು ನಿಲ್ಲಿಸಿದ ಶ್ರೇಯಸ್‌ಕುಮಾರ್‌ ಅವರ ಕಾರ್ಯತಂತ್ರಕ್ಕೆ ಸಲಾಂ ಎಂದು ಹೇಳಿದರು.  


ಶ್ರೀಮತಿ. ಲಕ್ಷೀ ಹೆಬ್ಬಾಳ್ಕರ್‌ ಪತ್ರದ ಮೂಲಕ ಸಂದೇಶ ಕಳುಹಿಸಿ ಶುಭ ಹಾರೈಸಿದರು. ಕಾರ್ಯಕ್ರಮ ದಲ್ಲಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ ಸುರೇಂದ್ರ ಕುಮಾರ್, ಕಾರ್ಯದರ್ಶಿಗಳಾದ ಡಿ ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಸೇರಿದಂತೆ ಗಣ್ಯರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು