Header Ads Widget

ಏ.30ರಂದು ಚೇರ್ಕಾಡಿ ರಾಷ್ಟೋತ್ಥಾನ ವಿದ್ಯಾ ಕೇಂದ್ರ, ರಾಷ್ಟೋತ್ಥಾನ ಪದವಿಪೂರ್ವ ಕಾಲೇಜು ಪ್ರಾರಂಭ

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿ ಗ್ರಾಮದ ಕೇಶವನಗರದ ಸುಮಾರು 20ಎಕರೆ ವಿಸ್ತೀರ್ಣದಲ್ಲಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮತ್ತು ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮ .30ರಂದು ಸಂಜೆ 4.30 ನಡೆಯಲಿದೆ ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ ಹೆಗ್ಡೆ ತಿಳಿಸಿದರು.

ಬ್ರಹ್ಮಾವರ ಚೇರ್ಕಾಡಿಯಲ್ಲಿ ಸೋಮವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನಿಕಟಪೂರ್ವ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದೆ.

.29ರ ಸಂಜೆ ಉಡುಪಿಯ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕತ್ಯಾರಿನ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಟ್ಟಡಗಳ ವಾಸ್ತುಪೂಜೆ ಮತ್ತು 30ರ ಬೆಳಿಗ್ಗೆ ಉಡುಪಿಯ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕಟ್ಟಡಗಳ ಗೃಹಪ್ರವೇಶ ಮತ್ತು ಉಳಿದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋ ಜಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ 60 ಸಂವತ್ಸರಗಳನ್ನು ಪೂರೈಸಿದ ರಾಷ್ಟ್ರೋತ್ಥಾನ ಭಾರತದ ಪರಂಪರೆ, ಸಂಸ್ಕೃತಿ, ಮಣ್ಣಿನ ಸೊಗಡನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ಈ ಶಾಲೆಯಿಂದ ಆಗುತ್ತಿದೆ.

ಶಿಕ್ಷಣದಲ್ಲಿ ಭಾರತೀಯತೆ ಇರಬೇಕು, ಆಧುನಿಕದೊಂದಿಗೆ ಭಾರತೀಯ ಜ್ಞಾನ ಪರಂಪರೆಯ ಶಿಕ್ಷಣವೂ ಬೇಕು, ಜೀವನ ಕೌಶಲ್ಯ ದೊಂದಿಗೆ ರಾಷ್ಟ್ರಭಕ್ತಿಯೂ ಬೆಳೆಯಬೇಕು. ನೆಲದ ಮಣ್ಣಿನ ಸೊಗಡನ್ನು ಮೈಗೂಡಿಸಿಕೊಳ್ಳುವ ಶಿಕ್ಷಣ ಮಕ್ಕಳಿಗೆ ಕೊಡಮಾಡಬೇಕು ಎನ್ನುವುದು ರಾಷ್ಟ್ರೋತ್ಥಾನದ ಉದ್ದೇಶವಾಗಿದೆ ಎಂದು ತಿಳಿಸಿದರು.


ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ, ಆಧ್ಯಾತ್ಮಿಕ, ಈ ಐದೂ ಆಯಾಮಗಳಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕಾಗಿ ಪಂಚಮುಖಿ ಶಿಕ್ಷಣ ನೀಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲೂ ಶಾಲೆಯನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದರು.


ಈ ಶೈಕ್ಷಣಿಕ ವರ್ಷದಲ್ಲಿ ಪ್ರೀ-ಕೇಜಿಯಿಂದ 8ನೇ ತರಗತಿ ಹಾಗೂ ಪ್ರಥಮ ಪಿಯುಸಿ (ಪಿಸಿಎಂಬಿ, ಪಿಸಿಎಂಸಿಎಸ್, ಕಾಮರ್ಸ್) ಆರಂಭಿಸ ಲಾಗುವುದು. ಜೆಇಇ. ನೀಟ್, ಕೆಸಿಇಟಿ, ಸಿಎ, ಸಿಎಸ್ ಹಾಗೂ ಕ್ಲಾಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯೊಂದಿಗೆ ಅರ್ಹ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ , ವಿಶೇಷ ರಿಯಾಯಿತಿ ನೀಡಲಾಗುವುದು.


ಹುಡುಗ ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರಲಿದೆ. ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ ಎಂದರು.


ಈ ಸಂದರ್ಭ ರಾಷ್ಟ್ರೋತ್ಥಾನದ ಪರಿಷತ್‌ನ ಪ್ರಮುಖರಾದ ಸಾಧು ಸಾಲಿಯಾನ್‌, ಋಷಿರಾಜ್‌, ವಸಂತ ಕುಮಾರ್‌, ಭಾಗ್ಯಶ್ರೀ ಐತಾಳ, ಪೂರ್ಣಿಮಾ, ಸುರೇಶ ಶೆಣೈ ಇದ್ದರು. ಭಾರತೀಶ್‌ ಸ್ವಾಗತಿಸಿ ವಂದಿಸಿದರು.