Header Ads Widget

ಮಕ್ಕಳ ರಂಗಶಿಬಿರ ‘ಕೊಂಡಾಟ’ ಉದ್ಘಾಟನೆ

ಉಡುಪಿ: ನಾವು ನಮ್ಮ ಮಕ್ಕಳನ್ನು ಒಂಟಿಯಾಗಿಸಿದ್ದೇವೆ. ಸಮುದಾಯ ಪ್ರಜ್ಞೆ ಸಿಗದಂತೆ ಮಾಡಿದ್ದೇವೆ. ಬೇಸಿಗೆ ಶಿಬಿರಗಳು ಸಮುದಾಯ ಪ್ರಜ್ಞೆಯನ್ನು ಮೂಡಿಸಲಿ ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ರಂಗಕರ್ಮಿ ಸಂತೋಷ್‌ ಶೆಟ್ಟಿ ಹಿರಿಯಡ್ಕ ತಿಳಿಸಿದರು.

ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಮಕ್ಕಳ ರಂಗಶಿಬಿರ ‘ಕೊಂಡಾಟ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲರೂ ಒಟ್ಟಾಗಿ ಬೆರೆಯುವ ಮೂಲಕ ಸಹಬಾಳ್ವೆಯನ್ನು ಮಕ್ಕಳಿಗೆ ಕಲಿಸಿಕೊಡಬೇಕಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಬೆರೆಯುವುದು, ಸಹಬಾಳ್ವೆಯಿಂದ ಬದುಕುವುದೇ ಸಮುದಾಯಪ್ರಜ್ಞೆ. ಸುಮನಸಾ ಕೊಡವೂರು ಸಂಘಟನೆಯು ಹಲವು ವರ್ಷಗಳಿಂದ ರಂಗಶಿಬಿರದ ಮೂಲಕ ಈ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಬದುಕಿನಲ್ಲಿ ಧಾವಂತಕ್ಕೆ ಬಿದ್ದಿದ್ದೇವೆ. ಗೊಂದಲಮಯವಾದ ವಾತಾವರಣ ಸೃಷ್ಟಿಯಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಸ್ಪರ್ಧಿಗಳಾಗಿದ್ದಾರೆ. ಇಂಥ ಶಿಬಿರಗಳಲ್ಲಿಯಾದರೂ ಪರಸ್ಪರ ಸ್ಪರ್ಧೆಗೆ ಬೀಳದೇ ನಾವೆಲ್ಲರೂ ಗೆಲ್ಲಬೇಕು ಎಂಬ ಮನಃಸ್ಥಿತಿಯನ್ನು ಕಲಿಸುವಂತಾಗಬೇಕು ಎಂದು ಸಲಹೆ ನೀಡಿದರು.

ನಿಮ್ಮ ವಯಸ್ಸಿಗೆ ಅನುಗುಣವಾದ ಪುಸ್ತಕಗಳನ್ನು ಓದುವ, ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವ, ಸಾಂಸ್ಕೃತಿಕ ಪ್ರಜ್ಞೆಯೊಂದಿಗೆ ಸಮುದಾಯ ಪ್ರಜ್ಞೆಯನ್ನು ಕಲಿಯುವ, ಸಮುದಾಯದೊಂದಿಗೆ ಬೆರೆತು ಬದುಕುವ ಶಿಕ್ಷಣ ಮಕ್ಕಳಿಗೆ ನೀಡಲು ಸಾಧ್ಯವಾದರೆ ಅದುವೇ ಶಿಬಿರದ ಯಶಸ್ಸು ಆಗಲಿದೆ ಎಂದು ಹೇಳಿದರು.

ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ‘ಕೊಂಡಾಟದ ನಿರ್ದೇಶಕ ಅಕ್ಷತ್ ಅಮೀನ್‌ ವಂದಿಸಿದರು. ಸಂಘಟನೆಯ ಉಪಾಧ್ಯಕ್ಷ ಯೋಗೀಶ್‌ ಕೊಳಲಗಿರಿ ನಿರೂಪಿಸಿದರು. ಸುಮನಸಾ ಕೊಡವೂರು ಸಂಚಾಲಕ ಭಾಸ್ಕರ ಪಾಲನ್‌, ರಂಗನಿರ್ದೇಶಕ ದಿವಾಕರ ಕಟೀಲ್‌ ಉಪಸ್ಥಿತರಿದ್ದರು.

ರಂಗ ಶಿಬಿರವು 15 ದಿನಗಳ ಕಾಲ ನಡೆಯಲಿದೆ.