Header Ads Widget

ಅಕ್ಷಯ ಎಂದರೆ ಕ್ಷಯವಿಲ್ಲದ್ದು ~ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್

ಅಕ್ಷಯ ಎಂದರೆ ಕ್ಷಯವಿಲ್ಲದ್ದು. ಕ್ಷಯ ಎಂದರೆ ಹಾಳಾಗುವುದು, ನಾಶವಾಗುವುದು. ಈ ಅಕ್ಷಯ ತದಿಗೆಯಂದು ಮಾಡುವ ಒಳ್ಳೆಯ ಕೆಲಸಗಳು ಎಂದಿಗೂ ಕ್ಷಯವಾಗುವುದಿಲ್ಲ. ಬದಲಾಗಿ ವೃದ್ಧಿಸುತ್ತವೆ.

ಅಕ್ಷಯ ತದಿಗೆಯಂದು ಮಾಡಿದ ಒಳ್ಳೆಯ ಕೆಲಸಗಳಿಂದ ಬರುವ ಪುಣ್ಯ ಅಕ್ಷಯವಾಗುತ್ತದೆ ಎಂಬುದು ಶಾಸ್ತ್ರ ವಿಧಿತ. ಹಾಗಾಗಿ ಉತ್ತಮ ಕಾರ್ಯ ಮಾಡೋಣ, ಅಕ್ಷಯ ಪುಣ್ಯ ಗಳಿಸೋಣ.

ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಸಲ್ಲುವುದನ್ನು ಮಾಡುವುದರ ಬದಲು, ಬೇಡದಿರುವುದನ್ನು ಮಾಡುವುದೇ ಹೆಚ್ಚಾಗಿದೆ.

ಅಕ್ಷಯ ತದಿಗೆಯಂದು ಯಾವ ಕೆಲಸ ಮಾಡಿದರೆ ಒಳಿತು ಯಾವ ಕಾರ್ಯದ ಫಲ ಅಕ್ಷಯವಾಗುತ್ತದೆ ಎಂಬುದನ್ನರಿತು ಮಾಡಿದರೆ ಒಳ್ಳೆಯದು. ಈ ದಿನ ಬೆಳ್ಳಿ, ಬಂಗಾರ ಖರೀದಿಸಿದರೆ ಅದು ಅಕ್ಷಯ ಆಗುವುದಿಲ್ಲ. ಆಸಕ್ತರು ಬಂಗಾರ ಖರೀದಿಸಿ, ಸಂಪತ್ತು ಹೆಚ್ಛಿಸಿಕೊಳ್ಳಿ. ಆದರೆ ಬಂಗಾರ ಅಕ್ಷಯವಾಗುತ್ತದೆ ಎಂಬ ಆಸೆ ಬಿಟ್ಟು, ಒಂದಿಷ್ಟು ದಾನ, ಧರ್ಮ ಮಾಡಿ.

ವಿಶೇಷವೇನೆಂದರೆ ಈ‌ ಹಬ್ಬದಂದು ದೀನರಿಗೆ ದಾನ ನೀಡಬೇಕು. ಸುಡು ಬೇಸಿಗೆ ಕಾಲವಾದ್ದರಿಂದ ನಿರ್ಗತಿಕರು ಬಿಸಿಲ ಬೇಗೆಯಿಂದ ಪಾರಾಗಲು ಅವರಿಗೆ ಕೊಡೆ ದಾನ ಮಾಡಬಹುದು. ಬಿಸಿ ನೆಲದ ಮೇಲೆ ನಡೆದಾಡಲು ಚಪ್ಪಲಿ ಕೊಡಿಸಬಹುದು. ದಾಹದಿಂದ ಬಳಲುವ ಜನರಿಗಾಗಿ ಅರವಂಟಿಗೆ ಇಡಬಹುದು. ಇದರ ಜತೆ ಅನಾರೋಗ್ಯ ಪೀಡಿತರು ಕಂಡು ಬಂದರೆ ಔಷಧ ಕೊಡಿಸಬಹುದು. ಇಂತಹ ಪುಣ್ಯಕಾರ್ಯಗಳನ್ನು ಮಾಡಿದರೆ, ನಾವು ಮಾಡುವ ಪುಣ್ಯ ಅಕ್ಷಯವಾಗುತ್ತದೆ. 

ಈ ದಿನ ನಾವು ಮಾಡುವ ದಾನ, ದೇವರಪೂಜೆ ಮತ್ತಿತರ ಪುಣ್ಯಕಾರ್ಯಗಳಿಂದ ಬರುವ ಪುಣ್ಯ ಮಾತ್ರವೇ ಅಕ್ಷಯವಾಗುತ್ತದೆ ಎಂಬುದನ್ನು ನೆನಪಿಡಿ. ಹಣವಿದ್ದವರು ಬೇಕಿದ್ದರೆ ಬೆಳ್ಳಿ ಬಂಗಾರ ಖರೀದಿಸಿ. ಮನವಿದ್ದವರು ಕಷ್ಟದಲ್ಲಿರುವವರಿಗೆ ದಾನ ಧರ್ಮ ಮಾಡುವ ಮೂಲಕ ನೆರವಾಗಿ. ಇಂತಹ ಪುಣ್ಯದ ಕೆಲಸಗಳ ಫಲ ಮಾತ್ರ ಖಂಡಿತ ಅಕ್ಷಯವಾಗುತ್ತದೆ. 

ಹಾಗೆಯೇ, ಈ ದಿನ ಹರಿಣೀಪತಿ ಶ್ರೀಪರಶುರಾಮ ದೇವರ ಜಯಂತಿ.

ಭೂಭಾರ ಏರಲಿಕ್ಕೆ ಕಾರಣೀಭೂತರಾದ ದುಷ್ಟ ಕ್ಷತ್ರಿಯರನ್ನು ಸದೆ ಬಡೆಯಲು ಹಾಗೂ ಶ್ರೀರಾಮಚಂದ್ರ ಪ್ರಭುವಿಗಿಂತ ಮೊದಲೇ ಪಿತೃವಾಕ್ಯ ಪರಿಪಾಲನೆ ಮಾಡಲು ಶ್ರೀಹರಿ ಧರೆಯಲ್ಲವತರಿಸಿದ ದಿನವಿದು.

ಶ್ರೀಮಹಾವಿಷ್ಣುವಿನ ಆರನೇ ಅವತಾರವಾದ ಶ್ರೀಪರಶುರಾಮರು, ಜಮದಗ್ನಿ ಮಹರ್ಷಿ ಹಾಗೂ ರೇಣುಕಾ ದೇವಿಯರ ಸುಪುತ್ರ. ಈ ದಂಪತಿಗೆ 5 ನೇ ಮಗನಾಗಿ ಜನಿಸಿದ ಮಹಾನುಭಾವರು ಇವರು. ಸಕಲ ವಿದ್ಯೆಯ ಕೋವಿದರಾದ ಶ್ರೀಪರಶುರಾಮರು 21 ಬಾರಿ ಭೂಪ್ರದಕ್ಷಿಣೆ ಮಾಡಿ, ಜನರಿಗೆ ಉಪಟಳ ನೀಡುತ್ತಿದ್ದ ದುಷ್ಟ ಕ್ಷತ್ರಿಯರನ್ನು ಸಂಹರಿಸಿದ ಮಹಾಮಹಿಮರು.

ತಂದೆಯ ಮಾತನ್ನು ಪಾಲಿಸಲು ತಾಯಿಯ ಶಿರಸ್ಸನ್ನು ಕಡಿದು, ತಂದೆಯ ಅನುಗ್ರಹಕ್ಕೆ ಪಾತ್ರರಾಗಿ ತಾಯಿಯನ್ನು ಮರಳಿ ಬದುಕಿಸಿದ ಮಹಾವೀರರು ಶ್ರೀಪರಶುರಾಮ ದೇವರು. 

ಇಂತಹ ಮಹಾನುಭಾವರು ಜನರನ್ನು ಕಾಡುತ್ತಿರುವ ರೋಗ ರುಜಿನಗಳನ್ನು ನಿವಾರಿಸಿ ಪ್ರಜೆಗಳಿಗೆ ಸಂತಸವೀಯಲಿ. ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ಹಾಗೂ ದುಃಖ ದುಮ್ಮಾನಗಳನ್ನು ಹೋಗಲಾಡಿಸಿ ಸುಖ ಸಂತೋಷ ತರಲಿ ಎಂದು ಬೇಡೋಣ.

ಅಂಗಾರವರ್ಣಮಭಿತೋಂಡಬಹಿ: ಪ್ರಭಾಭಿರ್ವ್ಯಾಪ್ತಂ ಪರಶ್ವಧಧನುರ್ಧರಮೇಕವೀರಂ | ಧ್ಯಾಯೇದಜೇಶಪುರುಹೂತಮುಖೈಸ್ತುವದ್ಭಿರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ||

ಶ್ರೀಪರಶುರಾಮಾಯ ನಮಃ...


ಶ್ರೀಶ ಚರಣಾರಾಧಕ,

ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್..