ಮಂಗಳೂರು ನಗರದ ಹೊರವಲಯದ ಕುಡುಪು ಬಳಿ ನಿರ್ಜನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಭಾನುವಾರ ಸಂಜೆ ವೇಳೆಗೆ ಪತ್ತೆಯಾಗಿದೆ.
ವ್ಯಕ್ತಿಯನ್ನು ಹಲ್ಲೆಗೈದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿನ ಸ್ಥಳೀಯರಿಗೆ ಮೃತ ವ್ಯಕ್ತಿಯ ಪರಿಚಯವಿಲ್ಲ. ಆತ ದಿನಗೂಲಿ ಕಾರ್ಮಿಕನಾಗಿರಬಹುದು ಎಂದು ಶಂಕಿಸಲಾಗಿದೆ. ಅಲ್ಲೇ ಸಮೀಪ ಕ್ರಿಕೆಟ್ ಪಂದ್ಯಾಟವೊಂದು ನಡೆದಿದ್ದು, ಅದನ್ನು ನೋಡಲು ಬಂದ ವ್ಯಕ್ತಿ ಕೊಲೆಯಾಗಿದ್ದಾನೆಯೇ ಎಂಬ ಅನುಮಾನವೂ ಇದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.