ಮಂಗಳೂರು ಮೇ 3: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಒಟ್ಟು ಎಂಟು ಜನ ಶಂಕಿತರನ್ನು ಬಂಧಿಸಿದ್ದಾರೆ. ಘಟನೆ ನಡೆದ ಬಳಿಕ ಎಂಟು ಜನರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಈ ಪ್ರಕರಣ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿದ್ದೂ ಹತ್ಯೆ ಹಿಂದೆ ಕಾಣದ ಕೈಗಳು ಇವೆ ಎಂದು ಬಿಜೆಪಿ ಆರೋಪಿಸಿದೆ.
ಮಂಗಳೂರಿನ ಸುಹಾಸ್ ಶೆಟ್ಟಿ ಹಿಂದೂ ಕಾರ್ಯಕರ್ತ. ಹಿಂದೊಮ್ಮೆ ನಡೆದ ಕೊಲೆ ಆರೋಪ ಇವರ ಮೇಲಿತ್ತು. ಈ ಕೊಲೆ ಸೇಡನ್ನು ತೀರಿಸಿಕೊಳ್ಳಲು ಸುಹಾಸ್ ಶೆಟ್ಟಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಹಿಂದೂ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ.ಸುಹಾಸ್ ಶೆಟ್ಟಿ ಕಾರಿಗೆ ಐದಾರು ಮಂದಿ ನಡುರಸ್ತೆಯಲ್ಲಿ ಗೂಡ್ಸ್ ವಾಹನದಿಂದ ಗುದ್ದಿ ತಲ್ವಾರ್‌ಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆ ಇಡೀ ಮಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಸಾರ್ವಜನಿಕರ ಎದುರೇ ದುಷ್ಕರ್ಮಿಗಳು ಸುಹಾಸ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್ ಫೋನ್‌ನಲ್ಲೂ ಸೆರೆಯಾಗಿದೆ. ಗುರುವಾರ (ಮೇ 1) ರಾತ್ರಿ ಈ ಘಟನೆ ನಡೆದ ಬಳಿಕ ಶುಕ್ರವಾರ (ಮೇ 2) ಮಂಗಳೂರು ಬಂದ್‌ಗೆ ಹಿಂದೂ ಕಾರ್ಯಕರ್ತರು ಕರೆ ನೀಡಿದ್ದರು. ಇದರಿಂದಾಗಿ ಕಳೆದ ದಿನ ಮಂಗಳೂರು ನಿಶಬ್ಧವಾಗಿತ್ತು.
ರಸ್ತೆಗಿಳಿದ ವಾಹನಗಳ ಮೇಲೆ ಕಲ್ಲೂ ತೂರಾಟ ನಡೆಸಿ ಉದ್ರಿಕ್ತರ ಗುಂಪು ಆಕ್ರೋಶ ಹೊರ ಹಾಕಿತ್ತು. ಈ ನಡುವೆ ಆರೋಪಿಗಳ ಭೇಟೆಗಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಪೊಲೀಸರ ಐದು ತಂಡಗಳನ್ನು ರಚನೆ ಮಾಡಿದ್ದರು. ಇದೀಗ ಘಟನೆ ನಡೆದು 24 ಗಂಟೆಯೊಳಗೆ ಪೊಲೀಸರು ಎಂಟು ಜನ ಶಂಕಿತರನ್ನು ಹೆಡೆಮುರಿ ಕಟ್ಟಿದ್ದಾರೆ.