Header Ads Widget

ಸಾಸ್ತಾನ ಟೋಲ್ ಗೇಟ್ ಬಳಿ ನಿಲ್ಲಿಸಿದ್ದ ಲಾರಿಯೊಳಗೆ ಚಾಲಕನ ಮೃತದೇಹ ಪತ್ತೆ!

ಸಾಸ್ತಾನ ಗುಂಡ್ಮಿ ಟೋಲ್ ಗೇಟ್ ಬಳಿ ನಿಲ್ಲಿಸಿದ್ದ ಗುಜರಾತ್ ರಾಜ್ಯದ ನೋಂದಣಿ ಸಂಖ್ಯೆ ಹೊಂದಿದ್ದ ಲಾರಿಯ ಚಾಲಕ ಲಾರಿಯೊಳಗೇ ಮೃತಪಟ್ಟಿರುವ ಘಟನೆ ನಡೆದಿದೆ. ಸಾಲಿಗ್ರಾಮದ ಸುನಿಲ್ ಕುಮಾರ್ ಎಂಬವರು ಲಾರಿ ಎರಡು ದಿನಗಳಿಂದಲೂ ಟೋಲ್ ಸಮೀಪ ನೀತಿರುವುದರ ಬಗ್ಗೆ ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಟೋಲ್ ಗೇಟ್ ಬಳಿಯ ಲಾರಿ ನಿಲುಗಡೆ ಸ್ಥಳದಲ್ಲಿ ಬುಧವಾರದಿಂದಲೂ ಗುಜರಾತ್ ನೋಂದಣಿ ಸಂಖ್ಯೆ ಹೊಂದಿದ್ದ ಲಾರಿಯೊಂದು ನಿಂತಿತ್ತು. ಗುರುವಾರ ಸಂಜೆ ಸುನಿಲ್ ಕುಮಾರ್ ಅನುಮಾನದಿಂದ ಲಾರಿ ಬಳಿ ಹೋಗಿ ನೋಡಿದಾಗ ಎದುರಿನ ಸೀಟಿನ ಕೆಳಗೆ ಓರ್ವ ವ್ಯಕ್ತಿ ಮಲಗಿರುವುದು ಕಂಡುಬಂತು. ಪರಿಶೀಲಿಸಿದಾಗ ಆತ ಮೃತಪಟ್ಟಿರುವುದು ಅರಿವಾಯಿತು. ಅವರು ತಕ್ಷಣ ಕೋಟ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆಗಮಿಸಿ ಲಾರಿಯಲ್ಲಿ ದೊರೆತ ಫೋನ್ ನಂಬ್ರಕ್ಕೆ ಕರೆ ಮಾಡಿ ಲಾರಿ ಮಾಲಕರನ್ನು ಸಂಪರ್ಕಿಸಿದರು. ಲಾರಿ ಕೇರಳದಿಂದ ಗುಜರಾತ್ ಗೆ ಬರುತ್ತಿದ್ದು, ಚಾಲಕ ತಾಯಿರ್ ಬಾಯಿ (55),  ಹಾಗೂ ಆತ ಹೃದ್ರೋಗಿ ಎಂಬುದು ತಿಳಿಯಿತು. ಇದೇ ಕಾರಣದಿಂದ ಆತ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಬುಧವಾರ ಸಂಜೆಯಿಂದ ಮೇ 8 ರ ಗುರುವಾರ ಮಧ್ಯಾನ್ಹದೊಳಗೆ ಚಾಲಕ ಮೃತಪಟ್ಟಿರಬಹುದು ಎನ್ನಲಾಗಿದೆ. ಕೋಟ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

ಮೃತ ದೇಹವನ್ನು ಜೀವನ್ ಮಿತ್ರ ನಾಗರಾಜ್ ಪುತ್ರನ್ ಕುಂದಾಪುರ ಶವಗಾರಕ್ಕೆ ಸಾಗಿಸಿರುತ್ತಾರೆ.