Header Ads Widget

ಬಾಹುಬಲಿ ಮತ್ತು ಶ್ರೀ ರಾಮಚಂದ್ರ ಮೂರ್ತಿ ಲೋಕಾರ್ಪಣೆ

ಉಡುಪಿ : ಬೈಂದೂರು ತಾಲೂಕಿನ ಬೋಳಂಬಳ್ಳಿ ಶ್ರೀ ಪಾರ್ಶ್ವನಾಥ ಸ್ವಾಮಿ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ 27 ಅಡಿ ಎತ್ತರದ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಹಾಗೂ 21 ಅಡಿ ಎತ್ತರದ ಶ್ರೀ ರಾಮಚಂದ್ರ ದೇವರ ಏಕಶಿಲಾ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದರು.

ಆಚಾರ್ಯ ಶ್ರೀ ಗುಲಾಬ್‌ ಭೂಷಣ ಮುನಿಮಹಾರಾಜರ ಸಾನಿಧ್ಯ ಹಾಗೂ ಸ್ವಸ್ತೀ ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಮಹಾಸ್ವಾಮೀಜಿ ಹುಂಬುಚ, ಸೋಂದಾ ಶ್ರೀ ಕ್ಷೇತ್ರ ಜೈನ ಮಠದ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿ ಶ್ರೀ ಭಟ್ಟ ಕಲಂಕ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಪ್ರತಿಷ್ಠಾಪನಾ ಕಾರ್ಯ ನೆರವೇರಿತು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ವಿರೇಂದ್ರ ಹೆಗ್ಡಡೆಯವರು ಶ್ರೀ ಕ್ಷೇತ್ರ ಬೋಳಂಬಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಭಗವಾನ್‌ ಬಾಹುಬಲಿ ಮತ್ತು ಶ್ರೀ ರಾಮಚಂದ್ರ ಮೂರ್ತಿ ಅದನ್ನು ನಿರ್ಮಾಣ ಮಾಡಿರುವವರ ಮನಸ್ಸಿನ ಪ್ರತೀಕ ಎಂಬಂತೆ ಮೂಡಿಬಂದಿದೆ. ಈ ಪವಿತ್ರ ಕಾರ್ಯದಲ್ಲಿ ಬೋಳಂಬಳ್ಳಿ ಮನೆತನ ಹಾಗೂ ಕ್ಷೇತ್ರದ ಧರ್ಮದರ್ಶಿಗಳಾದ ಧರ್ಮರಾಜ್‌ ಜೈನ್‌ ದಂಪತಿಯವರ ಭಕ್ತಿ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.


ಆದರ್ಶಗಳ ಪೂಜೆ

ಭಗವಾನ್‌ ಬಾಹುಬಲಿ ಮತ್ತು ಶ್ರೀ ರಾಮಚಂದ್ರ ದೇವರು ಇಬ್ಬರದ್ದೂ ಕೂಡ ಆದರ್ಶ ವ್ಯಕ್ತಿತ್ವ. ಹಾಗಾಗಿ ಇಲ್ಲಿ ಈ ಇಬ್ಬರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಎಂದರೆ ಅದು ಮೂರ್ತಿ ಪೂಜೆಯಲ್ಲ ಬದಲಾಗಿ ಆದರ್ಶಗಳ ಪೂಜೆ. ಭಾರತೀಯ ಸಂಸ್ಕೃತಿಯ ತ್ಯಾಗ ಪ್ರವೃತ್ತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಇಂತಹ ಆದರ್ಶ ವ್ಯಕ್ತಿತ್ವದ ಮೂರ್ತಿ ಪೂಜೆ ಅವಶ್ಯ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು. 

ಭಗವಾನ್‌ ಬಾಹುಬಲಿ ಮತ್ತು ಶ್ರೀ ರಾಮಚಂದ್ರ ಸ್ವಾಭಿಮಾನದ ಸಂಕೇತ. ಜಗತ್ತಿನಲ್ಲಿ ಸ್ವಾರ್ಥ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ತ್ಯಾಗ ಮೂರ್ತಿಯನ್ನು ಪ್ರತಿಷ್ಠಾಪನೆ ಮೂಲಕ ವೈಭವೀಕರಿಸುವ ಪುಣ್ಯ ಕಾರ್ಯ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವುದು ಅಭಿನಂದನಾರ್ಹ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಆಳುಪ ಮನೆತನದ ಧರ್ಮದರ್ಶಿಗಳಾದ ಧರ್ಮರಾಜ್‌ ಜೈನ್‌ ಹಾಗೂ ವನಿತಾ ಧರ್ಮರಾಜ್‌ ಜೈನ್‌, ಶೃದ್ಧಾ ಅಮಿತ್‌ ಕುಮಾರ್‌ ಧರ್ಮಸ್ಥಳ, ಸುಗ್ಗಿ ಸುಧಾಕರ್‌ ಶೆಟ್ಟಿ, ಉದ್ಯಮಿ ಜಯಶೀಲ ಶೆಟ್ಟಿ ಕಾಲ್ತೋಡು, ಬಾರ್ಕೂರು ಶಾಂತರಾಮ ಶೆಟ್ಟಿ, ರತ್ನಾಕರ ಜೈನ್‌ ಮಂಗಳೂರು, ಮಂಜುನಾಥ ರಾವ್‌ ಬಾರ್ಕೂರು, ಹರ್ಷೇಂದ್ರ ಜೈನ್‌ ಮಾಳ, ಉದ್ಯಮಿ ಸುಭಾಷ್‌ ಜೈನ್ ಕುಂದಾಪುರ, ಅನಿಲ್‌ಕುಮಾರ್‌ ಬೋಳಂಬಳ್ಳಿ, ಡಾ. ಅಕ್ಷತಾ ಆದರ್ಶ್‌, ಜಿನೇಶ್‌ಪ್ರಸಾದ್ ನೆಲ್ಲಿಕಾರು ಮೊದಲಾದವರು ಉಪಸ್ಥಿತರಿದ್ದರು. ನಿರೀಕ್ಷಾ ಹೊಸ್ಮಾರು ಪ್ರಾರ್ಥಿಸಿ, ಡಾ. ಆಕಾಶ್‌ರಾಜ್‌ ಸ್ವಾಗತಿಸಿದರು. ಬಬಿತಾ ಜೈನ್ ಸಾಗರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.    


ರಥೋತ್ಸವ

ಸಂಜೆ ಶ್ರೀ ಪದ್ಮಾವತಿ ಅಮ್ಮನವರ ರಥಯಾತ್ರ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ , ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್‌ ಗಂಟಿಹೊಳೆ, ಅಳದಂಗಡಿಯ ತಿಮ್ಮಣ್ಣ ಅರಸರಾದ ಪದ್ಮಪ್ರಸಾದ್‌ ಅಜಿಲ ಹಾಗೂ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ ಆಳ್ವ ಮೊದಲಾದ ಗಣ್ಯರು ಹಾಗೂ ಊರ ಪರವೂರು ಭಕ್ತಾಧಿಗಳು ರಥೋತ್ಸವ ಕಾರ್ಯಕ್ರಮದಲ್ಲಿ ಪುಣ್ಯ ಭಾಗಿಗಳಾದರು.