ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಧರಣಿ ಸತ್ಯಾಗ್ರಹ ಸಾಣೂರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಜೂನ್ 23 ಸೋಮವಾರದಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಜರುಗಿತು.
ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಪರಿಷತ್ತಿನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಾಣೂರು ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ರವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳಿಂದಾಗಿ ಈ ಹಿಂದೆ ಒಂದೆರಡು ವಾರಗಳಲ್ಲಿ ಸುಲಭವಾಗಿ ಗ್ರಾಮ ಪಂಚಾಯತ್ ನಲ್ಲಿಯೇ ಸಿಗುತ್ತಿದ್ದ 9/11 ಇದೀಗ ವಿನ್ಯಾಸ ನಕ್ಷೆಗಾಗಿ ಕಾಪು ಪ್ರದೇಶಕ್ಕೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿ, ಮೂರರಿಂದ ನಾಲ್ಕು ತಿಂಗಳು ವಿಳಂಬವಾಗುತ್ತಿದ್ದು, ಮನೆ ಕಟ್ಟಲು ಐದು ಸೆಂಟ್ಸ್ ಕನ್ವರ್ಷನ್ ಮತ್ತು 9/11 ದಾಖಲೆಗಳಿಗಾಗಿ ಸುಮಾರು 15 ರಿಂದ 20 ಸಾವಿರ ಲಂಚ ಕೊಡಬೇಕಾದ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರಕಾರ ಕೂಡಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಈ ಹಿಂದಿನಂತೆ 9/11 ದಾಖಲೆಗಳನ್ನು ಕೊಡುವ ಅಧಿಕಾರವನ್ನು ಗ್ರಾಮ ಪಂಚಾಯತಿಗೆ ನೀಡಿ ಗ್ರಾಮ ಮಟ್ಟದಲ್ಲಿಯೇ ಜನರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಆಗ್ರಹಪೂರ್ವಕವಾಗಿ ಒತ್ತಾಯಿಸಿದರು.
ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಒಂದು ಆಶ್ರಯ ಮನೆಗಳು ಕೂಡ ಫಲಾನುಭವಿಗಳಿಗೆ ಸಿಕ್ಕಿಲ್ಲ.
ಈ ಹಿಂದೆ ಬಿಜೆಪಿ ಸರಕಾರ ಇರುವಾಗ ಪ್ರತಿ ಗ್ರಾಮ ಪಂಚಾಯತಿಗೆ 100 ಆಶ್ರಯ ಮನೆಗಳು ನಿರ್ಮಾಣಗೊಂಡಿದ್ದವು ಎಂದು ನೆನಪಿಸಿದರು.
ಧರಣಿ ಸತ್ಯಾಗ್ರಹ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವರು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ.ಸುನಿಲ್ ಕುಮಾರ್ ರವರು ಧರಣಿ ಸತ್ಯಾಗ್ರಹದಲ್ಲಿರುವ ಜನರನ್ನು ಉದ್ದೇಶಿಸಿ ಮಾತನಾಡುತ್ತಾ,
ರಾಜ್ಯದ ಸುಮಾರು 23 ಲಕ್ಷ ವೃದ್ಧಾಪ್ಯ ಪಿಂಚಣಿ ಮತ್ತು ಸಂಧ್ಯಾ ಸುರಕ್ಷಾ ಸೌಲಭ್ಯಗಳನ್ನು ರದ್ದುಗೊಳಿಸಲು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದ್ದು, ತೀರ ಕಷ್ಟದಲ್ಲಿರುವ ಅಸಹಾಯಕ ವೃದ್ಧರು ದಿಕ್ಕೇ ತೋಚದಂತಾಗಿದ್ದಾರೆ.
ಈಗಾಗಲೇ ಹಲವಾರು ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ತನ್ನ ದುರಾಡಳಿತದಿಂದಾಗಿ ವಿಶೇಷವಾಗಿ ಗ್ರಾಮೀಣ ಭಾಗದ ಜನರ ದೈನಂದಿನ ಜೀವನದಲ್ಲಿ ಚೆಲ್ಲಾಟ ವಾಡುತ್ತಿದೆ, ಕಟ್ಟಡ ನಿರ್ಮಾಣಕ್ಕೆ ಮರಳು ಮತ್ತು ಕೆಂಪು ಕಲ್ಲುಗಳು ಸರಿಯಾಗಿ ಸಿಗದೆ ಕಟ್ಟಡ ನಿರ್ಮಾಣ ಕಾಮಗಾರಿಗಳು ವಿಳಂಬವಾಗಿ ಸಾವಿರಾರು ಕಾರ್ಮಿಕ ಕುಟುಂಬಗಳು ಕೆಲಸವಿಲ್ಲದೆ ಕಷ್ಟ ಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ನೇತೃತ್ವದ ಅಕ್ರಮ ಸಕ್ರಮ ಸಮಿತಿಗೆ ಗ್ರಾಮೀಣ ಭಾಗದ ಸಾವಿರಾರು ಕುಟುಂಬಗಳು ಹತ್ತಾರು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ಭೂಮಿಯನ್ನು ಸರಕಾರದಿಂದ ಮಂಜೂರಾತಿ ಪಡೆದುಕೊಳ್ಳಲು ಕಾನೂನು ಬದ್ಧವಾಗಿ ಅರ್ಜಿ ಸಲ್ಲಿಸಿದ್ದರೂ, ರಾಜ್ಯ ಸರಕಾರ ಸೂಕ್ತ ವಿಚಾರಣೆ ನಡೆಸದೆ ಕಂದಾಯ ಇಲಾಖೆಯ ಮೂಲಕ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು ತೀರಾ ಖಂಡನೀಯ ಎಂದರು.
ಒಂದು ಕಡೆ ಗ್ಯಾರಂಟಿ ಯೋಜನೆಯ ಮೂಲಕ ಉಚಿತ ವಿದ್ಯುತ್ತನ್ನು ನೀಡಿ ಇನ್ನೊಂದು ಕಡೆ ವಿದ್ಯುತ್ ದರವನ್ನು ಏರಿಸಿ ಜನರಿಂದ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸಾಣೂರು ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷರು ಹಾಗೂ ಪಂಚಾಯತ್ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ರವರು ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಮನವಿಯನ್ನು ರಾಜ್ಯ ಸರಕಾರಕ್ಕೆ ತಲುಪಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಮಧು ಎಂಸಿ ಯವರಿಗೆ ಹಸ್ತಾಂತರಿಸಿದರು.
ನೂರಾರು ಸಂಖ್ಯೆಯಲ್ಲಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡವರು ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ ಮತ್ತು ಜನರಿ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನಾ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು.
ಶ್ರೀ ಮೋಹನ್ ಶೆಟ್ಟಿ ಸಾಣೂರು ಕಾರ್ಯಕ್ರಮ ನಿರೂಪಿಸಿ ತಾಲೂಕು ಕಾರ್ಯದರ್ಶಿ ಕರುಣಾಕರ ಕೋಟ್ಯಾನ್ ರವರು ವಂದನಾರ್ಪಣೆಗೈದರು.
ಧರಣಿ ಸತ್ಯಾಗ್ರಹದಲ್ಲಿ ಬಿಜೆಪಿ ಪ್ರಮುಖರಾದ ಶ್ರೀ ಸುರೇಶ್ ಮಡಿವಾಳ್, ಪ್ರವೀಣ್ ಕೋಟ್ಯಾನ್,ವಿಶ್ವನಾಥ್ ಶೆಟ್ಟಿ, ಉದಯ ಅಂಚನ್, ಭಾಸ್ಕರ ಭಟ್, ರವೀಂದ್ರ ಪೂಜಾರಿ, ರತ್ನಾಕರ್ ಕಾಮತ್, ರಾಕೇಶ್ ಅಮೀನ್, ಪ್ರಸಾದ್ ಶೆಟ್ಟಿ ಮಾಧವ ಭಂಡಾರಕರ್, ಪ್ರಭಾಕರ ಸನಿಲ್, ಶ್ರೀಮತಿ ಶಾಮಲಾ, ರಾಜೇಶ್ ಪೂಜಾರಿ, ಸಂತೋಷ್ ಸುವರ್ಣ, ಕಿರಣ್ ಕುಲಾಲ್, ನಾಗೇಂದ್ರ ಶೆಟ್ಟಿಗಾರ್, ಸೀತಾರಾಮ್ ಶೆಟ್ಟಿಗಾರ್, ರಾಜೇಶ್ ಕೋಟ್ಯಾನ್ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಯಶೋದಾ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಶ್ರೀಮತಿ ಯಶೋಧ ಆರ್ ಸುವರ್ಣ, ಶ್ರೀಮತಿ ಸುಜಾತ ಶೆಟ್ಟಿ,ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ, ಪಂಚಾಯತ್ ಸದಸ್ಯರುಗಳಾದ ವಸಂತ, ಸತೀಶ್ ಪೂಜಾರಿ, ಶ್ರೀಮತಿ ಸುಮತಿ, ಶ್ರೀಮತಿ ಸರಸ್ವತಿ, ಶ್ರೀಮತಿ ಪ್ರಮೀಳಾ, ಶ್ರೀಮತಿ ಸುನಂದ ನಾಯ್ಕ, ಶ್ರೀಮತಿ ಗಿರಿಜಾ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು