BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಮಂಥನ

ಪ್ಲಾಸ್ಟಿಕ್ ಸಂತಾನ ಹೀನತೆಗೆ ಕಾರಣವೇ~ಡಾ ರಾಜಲಕ್ಷ್ಮಿ

 

ಕೈಗಾರಿಕಾ ರಂಗದಲ್ಲಿನ ಕ್ರಾಂತಿಯಿಂದ ಆವಿಷ್ಕಾರಗೊಂಡ ಪ್ಲಾಸ್ಟಿಕ್ ಇಂದು ಜನಸಾಮಾನ್ಯನ ದಿನನಿತ್ಯದ ಆಗುಹೋಗುಗಳಲ್ಲಿ ಹಾಸು ಹೊಕ್ಕಾಗಿದೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ನ ಮಿತಿಮೀರಿದ ಬಳಕೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಲ್ಲಿನ ಸಮಸ್ಯೆಗಳಿಂದಾಗಿ ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಹಲವು ವಿಪತ್ತುಗಳು ಸೃಷ್ಟಿಯಾಗುತ್ತಿವೆ ಪ್ಲಾಸ್ಟಿಕ್ ಎಂಬುದು ಇಂದಿನ ದಿನಗಳಲ್ಲಿ ಸರ್ವ ವ್ಯಾಪಿಯಾಗಿ ಕಂಡುಬರುವ ವಸ್ತು. 


 ದಿನಸಿ ಸಾಮಾನು, ಹಣ್ಣು, ತರಕಾರಿ, ಹಾಲು, ಮೀನು, ಮೊಟ್ಟೆಯನ್ನು ಅಂಗಡಿಯಿಂದ ಮನೆಗೆ ಸಾಗಿಸುವುದರಿಂದ ಹಿಡಿದು ಸೌಂದರ್ಯವರ್ಧಕ ಉತ್ಪನ್ನಗಳು, ಶೀಘ್ರವಾಗಿ ಆಹಾರವನ್ನು ಮನೆಮನೆಗೆ ತಲುಪಿಸುವ ಸ್ವಿಗ್ಗಿ ಝೋಮ್ಯಾಟೋ ದವರು ಅತಿಯಾಗಿ ಬಳಸುವ, ಎಲ್ಲರೂ ಮೆಚ್ಚಿಕೊಂಡ ಬಳಸಲು ಸುಲಭವಾದ ಎಲ್ಲೆಲ್ಲೂ ಕೈಗೆಟಕುವ ವಸ್ತು ಪ್ಲಾಸ್ಟಿಕ್. ನಮ್ಮ ದಿನನಿತ್ಯದ ಕೆಲಸಗಳನ್ನು ಸುಲಲಿತವಾಗಿ ಜರಗಿಸಲು ನಾವು ಆಯ್ದುಕೊಂಡ ಈ ಪ್ಲಾಸ್ಟಿಕ್ ಇಂದು ಹತ್ತು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದರೆ ತಪ್ಪಾಗಲಾರದು.

ಪ್ಲಾಸ್ಟಿಕ್ ಎಂಬ ಮಾಯ ಜಾಲ ತನ್ನ ಕಬಂಧ ಬಾಹುಗಳನ್ನು ಅಷ್ಟ ದಿಕ್ಕುಗಳಿಗೂ ಹರಡಿ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಸರ ಮಾಲಿನ್ಯಕ್ಕೆ ಮೂಲ ಕಾರಣವಾಗುತ್ತಿದೆ.  ಜೈವಿಕವಾಗಿ ವಿಘಟನೆ ಗೊಳ್ಳದ ಈ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕಿ ಜನ, ಜಲ, ವಾಯು, ಪ್ರಾಣಿ, ಪಕ್ಷಿಗಳಿಗೂ ಕಂಟಕವಾಗಿ ಪರಿಣಮಿಸಿದೆ.


ಪ್ಲಾಸ್ಟಿಕ್ ಎಲ್ಲೆಲ್ಲಿ ಬಳಕೆಯಾಗುತ್ತಿದೆ?

 1 ತರಕಾರಿ ಹಣ್ಣು ಹಂಪಲುಗಳ ವಿಲೇವಾರಿ 

 2 ದಿನಸಿ ವಸ್ತುಗಳ ಸಾಗಾಣಿಕೆ 

 3 ಮೀನು ಹಾಲು ಮೊಟ್ಟೆ ಮಾಂಸದ ಸಾಗಾಣಿಕೆ 

 4 ಮುಟ್ಟಿನ ನಿರ್ವಹಣೆಗಾಗಿ ಬಳಸುವ ಸ್ಯಾನಿಟರಿ ಪ್ಯಾಡ್ ಗಳಲ್ಲಿ

5  ನೀರಿನ ಬಾಟಲಿ ಟಿಫಿನ್ ಬಾಕ್ಸ್ ಗಳಲ್ಲಿ, ಬುತ್ತಿ ಪಾತ್ರೆಗಳಲ್ಲಿ 

 6 ಮನೆಯಲ್ಲಿ ಆಹಾರ ಹಾಗೂ ದಿನಸಿ ವಸ್ತುಗಳ ಶೇಖರಣೆಗಾಗಿ 

 7 ಸಾಮಾನುಗಳ ಪ್ಯಾಕೇಜ್ ಗಾಗಿ 

 8 ದಿನನಿತ್ಯ ಬಳಸುವ ಮೇಜು ಕುರ್ಚಿ ಮುಂತಾದ ಪೀಠೋಪಕರಣಗಳಲ್ಲಿ 

 8 ಬಟ್ಟೆಗಳಲ್ಲಿ

 9 ಮನೆ ಹಾಗೂ ಶೌಚಾಲಯದ ಸ್ವಚ್ಛತೆಗಾಗಿ ಬಳಸುವ ದ್ರಾವಣಗಳಲ್ಲಿ 

10  ವಿದ್ಯುನ್ಮಾನ ಉಪಕರಣಗಳಾದ ಫೋನ್ ಟಿವಿ ಫ್ರಿಡ್ಜ್ ಇತ್ಯಾದಿ ಸಲಕರಣೆಗಳಲ್ಲಿ  

11  ವಾಹನಗಳ ಬಿಡಿ ಭಾಗಗಳಲ್ಲಿ 

 12 ಕಟ್ಟಡ ನಿರ್ಮಾಣಕ್ಕೆ ಬಳಸುವ ಪೈಪುಗಳು ಹಾಗೂ ಇತರ ಸಲಕರಣೆಗಳಲ್ಲಿ 

 13 ಗೃಹಾಲಂಕಾರಕ್ಕೆ ಬಳಸುವ ಪರದೆಗಳು ಹಾಗೂ ಅಲಂಕಾರಿಕ ವಸ್ತುಗಳಲ್ಲಿ 

14  ಸುರಕ್ಷತಾ ಸಾಧನಗಳಾದ ಹೆಲ್ಮೆಟ್ ಸೀಟ್ ಬೆಲ್ಟ್ ಹಾಗೂ ಮಗುವಿನ ಸುರಕ್ಷತಾ ಆಸನಗಳಲ್ಲಿ 

 15 ಮಕ್ಕಳ ಆಟಿಕೆಗಳಲ್ಲಿ

16  ಸೌಂದರ್ಯವರ್ಧಕಗಳಲ್ಲಿ 

 17 ಕೆಲವೊಂದು ವೈದ್ಯಕೀಯ ಉಪಕರಣಗಳಲ್ಲಿ 

ಹೀಗೆ ನಾವು ದಿನನಿತ್ಯ ಬಳಸುವ ಹಲವು ವಸ್ತುಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ


ಪ್ಲಾಸ್ಟಿಕ್ ನಲ್ಲಿರುವ ಅಪಾಯಕಾರಿ ಅಂಶಗಳು ಯಾವುವು?

ತ್ಯಾಲೆಟ್, ಬಿಸ್ ಫಿನಾಲ್, ಬೆಂಕಿ ಆರಿಸುವ ದ್ರವ್ಯಗಳು, PFA ಮುಂತಾದ ರಾಸಾಯನಿಕಗಳು ಪ್ಲಾಸ್ಟಿಕ್ ನಲ್ಲಿ ಅಡಕವಾಗಿದೆ.  ಇವುಗಳಲ್ಲಿ ಹಲವಾರು ರಾಸಾಯನಿಕಗಳನ್ನು ಪ್ಲಾಸ್ಟಿಕನ್ನು ಮೃದುವಾಗಿಸಲು ಬಳಸಲಾಗುತ್ತದೆ


ಪ್ಲಾಸ್ಟಿಕ್ ದೇಹವನ್ನು ಹೇಗೆ ಸೇರಿಕೊಳ್ಳುತ್ತದೆ?  

ಆಹಾರದ ಮೂಲಕ, ಉಸಿರಾಟದ ಮೂಲಕ, ಚರ್ಮದ ಮೂಲಕ ಪ್ಲಾಸ್ಟಿಕ್ ನ ಅಂಶಗಳು ದೇಹದ ಒಳಗೆ ಸೇರಿಕೊಳ್ಳುತ್ತವೆ


ಪ್ಲಾಸ್ಟಿಕ್ ದೇಹದೊಳಗೆ ಏನೇನು ಮಾಡುತ್ತದೆ?

 ಪ್ಲಾಸ್ಟಿಕ್ ನಲ್ಲಿರುವ ಮೈಕ್ರೋ ಮತ್ತು ನ್ಯಾನೋ ಪ್ಲಾಸ್ಟಿಕ್ ಗಳು ದೇಹಕ್ಕೆ ಅಪಾಯಕಾರಿ ವಸ್ತುಗಳಾಗಿವೆ . ಇವೆರಡು ಮಾನವನ ಜನನಾಂಗ ವ್ಯೂಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಪ್ಲಾಸ್ಟಿಕ್ ನಲ್ಲಿರುವ ಬಿಸ್ ಫಿನಾಲ್ ಹಾಗೂ ತ್ಯಾಲೆಟ್ ಎಂಬ ರಾಸಾಯನಿಕಗಳು ನಮ್ಮ ದೇಹದಲ್ಲಿನ ರಸದೂತ ಗಳಂತೆ ವರ್ತಿಸಿ , ದೇಹದ ಸ್ವಾಭಾವಿಕವಾದ ರಸದೂತಗಳಲ್ಲಿ ವ್ಯತ್ಯಾಸವನ್ನು ಉಂಟು ಮಾಡುತ್ತವೆ. ಇದರಿಂದಾಗಿ ಅಂಡಾಣು ಹಾಗೂ ವೀರ್ಯಾಣುಗಳ ಫಲವತ್ತತೆ ಕುಸಿತಗೊಂಡು ಜೀವಾಂಕರಗೊಳ್ಳುವ ಸಂಭವನೀಯತೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಪ್ಲಾಸ್ಟಿಕ್ ನಿಂದಾಗಿ ಸಂತಾನ ಹೀನತೆ ಹೇಗೆ ಆಗುತ್ತದೆ? 

 ಇತ್ತೀಚಿನ ದಿನಗಳಲ್ಲಿ ಮಗುವಿಗಾಗಿ ವೈದ್ಯರ ಸಲಹೆ ಪಡೆಯುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದ್ದು ಒಂದು ಸಮೀಕ್ಷೆಯ ಪ್ರಕಾರ 6 ದಂಪತಿಗಳಲ್ಲಿ ಓರ್ವ ದಂಪತಿ ಸಂತಾನ ಹೀನತೆಯಿಂದ ಬಳಲುತ್ತಿದ್ದಾರೆ.  ಪ್ರತಿವರ್ಷ ಸಂತಾನೋತ್ಪತ್ತಿಯ ಪ್ರಮಾಣ ಶೇಕಡ ಒಂದರಷ್ಟು ಇಳಿಮುಖವಾಗುತ್ತಿದೆ. ವೈಜ್ಞಾನಿಕ ಸಂಶೋಧನೆಗಳು ಪ್ಲಾಸ್ಟಿಕ್ ಕಡೆಗೆ ಬೆರಳು ತೋರುತ್ತಿವೆ.  ಆರೋಗ್ಯದ ದೃಷ್ಟಿಯಿಂದ ಪ್ಲಾಸ್ಟಿಕ್ ಹಾಗೂ ಅದರ ಜೊತೆಗಿನ ಬಿಸ್ ಫಿನಾಲ್ ತಾಲೆಟ್ ಗಳು ಖಳನಾಯಕರಾಗಿ ಮೂಡಿ ಬರುತ್ತಿವೆ. 


 ಗಂಡಸರಲ್ಲಿ ಮೈಕ್ರೋ ಪ್ಲಾಸ್ಟಿಕಿನಿಂದಾಗಿ ವೀರ್ಯಾಣುವಿನ DNA ಘಾಸಿಗೊಂಡು ಅದರ ಜೀವಿತಾವಧಿ ಕ್ಷೀಣಿಸುತ್ತದೆ. ಜೊತೆಗೆ ವೀರ್ಯಾಣುಗಳ ಜೀವಕೋಶದೊಳಗಿನ ಆಂತರಿಕ ವಾತಾವರಣವನ್ನು ಪ್ಲಾಸ್ಟಿಕ್ ಮಲಿನಗೊಳಿಸಿ ಜೀವ ವಾಹಿನಿಗಳಲ್ಲೂ ಬದಲಾವಣೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಅಂಡಾಣುವಿನೊಂದಿಗೆ ಸಂಯೋಗ ಹೊಂದಿ ಜೀವಾಂಕುರಕ್ಕೆ ಕಾರಣವಾಗುವ ವೀರ್ಯಾಣುವಿನ ಬಲ ಕ್ಷೀಣಿಸಿ ಸಂತಾನ ಹೀನತೆಗೆ ಕಾರಣವಾಗುತ್ತದೆ.  ಪ್ಲಾಸ್ಟಿಕ್ ನ ಜೊತೆಗಿರುವ ಹಾನಿಕಾರಕ ರಾಸಾಯನಿಕ ವಸ್ತುಗಳು ವೀರ್ಯಾಣುವಿನ ಚಲನೆಯ  ಮೇಲೂ ದುಷ್ಪರಿಣಾಮ ಬೀರುತ್ತವೆ.


ಹೆಂಗಸರಲ್ಲಿ ಸಣ್ಣ ವಯಸ್ಸಿನಲ್ಲಿ ಋತುಬಂಧಕ್ಕೆ ಕಾರಣವಾಗುವ ಪ್ಲಾಸ್ಟಿಕ್,  ಅಂಡಾಣು ಬೇಗನೆ ಪ್ರಬುದ್ಧತೆ ಹೊಂದಿ (aging) ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.  ಅಂಡಾಣುಗಳ ಉತ್ಪತ್ತಿಯನ್ನೇ ತಗ್ಗಿಸಿ ಅವುಗಳ ಜೀವಿತಾವಧಿಯನ್ನು ಮೊಟಕುಗೊಳಿಸಿ ಸಂತಾನ ಹೀನತೆಗೆ ಕಾರಣವಾಗುತ್ತದೆ. ಅನಿಯಮಿತ ಋತುಚಕ್ರಗಳು, ಅಂಡಾಣು  ಬಿಡುಗಡೆಯಲ್ಲಿ ವ್ಯತ್ಯಯ, PCOD, ಎಂಡೋಮೆಟ್ರಿಯಾಸಿಸ್ ಮುಂತಾದ ಸಮಸ್ಯೆಗಳನ್ನು ತಂದೊಡ್ಡಿ ಸಂತಾನೋತ್ಪತ್ತಿಯ ಹಾದಿಯಲ್ಲಿ ಕಂದಕಗಳನ್ನು ಸೃಷ್ಟಿಸಿದೆ.

ಗರ್ಭಿಣಿಯಾದ ಮೇಲೂ ರಕ್ಷಣಾ ಕವಚವಾದ ಮಾಸು ಚೀಲವನ್ನ ದಾಟಿ ಭ್ರೂಣವನ್ನು  ತಲುಪಬಲ್ಲ ಈ ಮೈಕ್ರೋ ಪ್ಲಾಸ್ಟಿಕ್ ಗರ್ಭಪಾತಕ್ಕೂ ಕಾರಣವಾಗಬಲ್ಲದು.


ಪ್ಲಾಸ್ಟಿಕ್ ನ ಹಾವಳಿಯಿಂದ ರಕ್ಷಣೆ ಹೇಗೆ?

1 ತ್ಯಾಲೆಟ್ ಇರುವ ಎಲ್ಲಾ ಸೌಂದರ್ಯವರ್ಧಕಗಳು ಹಾಗೂ ಕೂದಲಿಗಾಗಿ ಬಳಸುವ ಅಲಂಕಾರ ಸಾಮಗ್ರಿಗಳನ್ನು ತ್ಯಜಿಸಿರಿ 

2 ಪ್ಲಾಸ್ಟಿಕ್ ಬಾಟಲಿ ಬದಲಿಗೆ ಗಾಜಿನ ಅಥವಾ ಸ್ಟೀಲ್ ಬಾಟಲಿ ಬಳಸಿ 

3 ಪ್ಲಾಸ್ಟಿಕ್ ಚೀಲದ ಬದಲಿಗೆ ಮರುಬಳಕೆ ಮಾಡಬಹುದಾದ ಹತ್ತಿಯ/ ಬಟ್ಟೆಯ ಚೀಲಗಳನ್ನು ಉಪಯೋಗಿಸಿರಿ 

4 ನೈಲಾನ್ ಪ್ಲಾಸ್ಟಿಕ್ ಬಟ್ಟೆಗಳನ್ನು ಬಳಸದಿರಿ 

5 ಪ್ಲಾಸ್ಟಿಕ್ ಧೂಳಿನಿಂದ ರಕ್ಷಿಸಿಕೊಳ್ಳಲು ಮನೆಯನ್ನು ಅನುದಿನವೂ ಗುಡಿಸಿ ಸ್ವಚ್ಚವಾಗಿರಿಸಿ 

6 ಪ್ಲಾಸ್ಟಿಕ್ ನಲ್ಲಿ ಕೊಡಲ್ಪಡುವ/ ನೀಡಲಾಗುವ ಆಹಾರ ಪದಾರ್ಥಗಳನ್ನು ಸೇವಿಸದಿರಿ  ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಬಿಸಿ ಆಹಾರವನ್ನು ಇರಿಸಿದರೆ ಏರು ತಾಪಮಾನದಿಂದ ಪ್ಲಾಸ್ಟಿಕ್ ಕರಗಿ ಬಲು ಬೇಗನೆ ದೇಹವನ್ನು ಸೇರಿಕೊಳ್ಳುತ್ತದೆ 

7 ಮೈಕ್ರೋ ವೇವ್ ನಲ್ಲಿ ಬಳಸಲು ಸುರಕ್ಷಿತ ಎಂದೆನಿಸಿಕೊಳ್ಳುವ ಪ್ಲಾಸ್ಟಿಕ್ ಕೂಡ ಸ್ವಲ್ಪ ಪ್ರಮಾಣದ ಪ್ಲಾಸ್ಟಿಕನ್ನು ಆಹಾರದೊಂದಿಗೆ ಬೆರೆಸುತ್ತದೆ.  ಆದ್ದರಿಂದ ಮೈಕ್ರೋವೇವ್ ನಲ್ಲಿ ಆದಷ್ಟು ಮಟ್ಟಿಗೆ ಗಾಜಿನ ಪಾತ್ರಗಳನ್ನು ಬಳಸಿರಿ 

8 ತಿಂಗಳ ಮುಟ್ಟಿನ ನಿರ್ವಹಣೆಗಾಗಿ ಜೈವಿಕವಾಗಿ ವಿಘಟನೆಯಾಗುವ ಹತ್ತಿ, ಬಾಳೆ ನಾರು ಅಥವಾ ಬಿದಿರಿನ ನಾರಿನಿಂದ ಮಾಡಿದ ಸ್ಯಾನಿಟರಿ ಪ್ಯಾಡ್, ಮರುಬಳಕೆಯ ಬಟ್ಟೆಯ ಪ್ಯಾಡ್, ಮುಟ್ಟಿನ ಕಪ್ ಅಥವಾ ಮುಟ್ಟಿನ ಒಳಉಡುಪುಗಳನ್ನು ಉಪಯೋಗಿಸಿರಿ.

9 ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳು, ಬಲೂನ್, ಮಕ್ಕಳ ಆಟಿಕೆಗಳ ಬಳಕೆಯನ್ನು ತ್ಯಜಿಸಿ 



ಇತ್ತೀಚಿನ ಸಂಶೋಧನೆಗಳಿಂದ ಕಂಡುಬಂದಂತೆ ಪ್ಲಾಸ್ಟಿಕ್ ದೇಹದಲ್ಲಿನ ರಕ್ತನಾಳಗಳಲ್ಲಿ ರಕ್ತ ಪ್ರವಾಹಕ್ಕೆ ತಡೆಯುಂಟು ಮಾಡಿ ಹೃದಯಘಾತ ಮೆದುಳಿನ ಆಘಾತಕ್ಕೆ ಕಾರಣವಾಗಿ ಸಾವು ಸಂಭವಿಸಬಹುದು ಪ್ಲಾಸ್ಟಿಕ್ ಮಣ್ಣಲ್ಲಿ ಮಣ್ಣಾಗದೆ ಇರುವುದರಿಂದ 600 ರಿಂದ 800 ವರ್ಷಗಳ ಕಾಲ ಉಳಿಯಬಲ್ಲದು ಇದರಿಂದಾಗಿ ಮಣ್ಣು ನೀರು ಎರಡೂ ಮಲಿನಗೊಂಡು ಆ ಮಣ್ಣು ಹಾಗೂ ನೀರನ್ನು ಬಳಸಿ ಬೆಳೆದ ಆಹಾರವೂ ದೇಹಕ್ಕೆ ಹಾನಿ ಉಂಟು ಮಾಡಬಹುದು.  


ಪ್ಲಾಸ್ಟಿಕ್ ಮಾನವ ಶರೀರ ಹಾಗೂ ಪರಿಸರದ ಮೇಲೆ ಬೀರುವ ಗಂಭೀರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ಬಾರಿಯ ಪರಿಸರ ದಿನದ ಧ್ಯೇಯವು ಪ್ಲಾಸ್ಟಿಕ್ ಮಾಲಿನ್ಯವನ್ನು ನಿರ್ಮೂಲನೆ ಮಾಡುವ ಕುರಿತಾಗಿದೆ.  ಎಷ್ಟೇ ಸಣ್ಣ ಪ್ರಮಾಣದ ಪ್ಲಾಸ್ಟಿಕ್ ದೇಹವನ್ನು ಸೇರಿದರೂ ಮುಂದೊಂದು ದಿನ ಆರೋಗ್ಯ ಹದಗೆಡಲು ಕಾರಣವಾದೀತು. ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಕೈಜೋಡಿಸೋಣ.


ಪ್ಲಾಸ್ಟಿಕ್ ಬೇಡವೇ ಬೇಡ* 

ಎಂದಿಗೂ ಬೇಡ 

ಪ್ಲಾಸ್ಟಿಕ್ ಮುಕ್ತ ಜಗತ್ತು ಸರ್ವರ  ಗುರಿಯಾಗಲಿ 


#Say no to plastic

~ಡಾ ರಾಜಲಕ್ಷ್ಮಿ, ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರು 

ಸದಸ್ಯರು, ಸಾಮಾಜಿಕ ಆರೋಗ್ಯ ಉಪಸಮಿತಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ, ಕಾರ್ಯದರ್ಶಿ, ಸಾಮಾಜಿಕ ಆರೋಗ್ಯ ಅರಿವು ಸಮಿತಿ, ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರ ಸಂಘ ಕರ್ನಾಟಕ ರಾಜ್ಯ ಶಾಖೆ. 





Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!