ಕೊಡವೂರಿನ 58 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕಿ, ಚಿತ್ರಕಲಾ ಸಾಧಕಿ ಯಶೋದ ಬಿ ಸನಿಲ್, ಸಮಾಜ ಸೇವಕಿ ಆಶಾ ಚಂದ್ರಶೇಖರ್, ಇಸ್ಕಾನ್ ವ್ಯಾಲ್ಯೂ ಎಜುಕೇಶನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಗ್ಯಾನ್ ಜಿ ಪಾಲನ್ ಅವರನ್ನು ಸಮ್ಮಾನಿಸಲಾಯಿತು.
ಮುಖ್ಯ ಅತಿಥಿ ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ನಾರಾಯಣ ಬಲ್ಲಾಳ್ ಮಾತನಾಡಿ ಸಮಾಜದ ಎಲ್ಲರೂ ಒಗ್ಗೂಡಿ ಸಮಾನತೆಯ ಭಾವದಿಂದ, ಶೃದ್ಧಾ ಭಕ್ತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಆಚರಿಸುತ್ತಿರುವುದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.ಹಾಗೆಯೇ ಇಲ್ಲಿನ ಗಣೇಶೋತ್ಸವ ಸಮಿತಿಯವರು ನಿರಂತರ ಸಮಾಜಮುಖಿ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಮತ್ತು ಗ್ರಾಮೀಣ ಕ್ರೀಡೆ,ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು. ಎಸ್.ಎಸ್ ಎಲ್. ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತಲೂ ಅಧಿಕ ಅಂಕಗಳಿಸಿದ ಪ್ರತಿಭಾನ್ವಿತ 25 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಗಣೇಶೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಂದಾಳು ಡಾ. ವಿದ್ಯಾಧರ ಶೆಟ್ಟಿ, ಮಾಜಿ ನಗರಸಭಾ ಸದಸ್ಯ ವಿಜಯ ಕೊಡವೂರು, ಮಲ್ಪೆ ಎಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್, ಮಲ್ಪೆ ಜ್ಞಾನಜ್ಯೋತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸಾವಿತ್ರಿ ಸಾಲ್ಯಾನ್, ಉದ್ಯಮಿ ಕೆ. ಆರ್ ಕಿಶೋರ್ ಕುಮಾರ್ ಪಾಳೆಕಟ್ಟೆ, ಕೊಡವೂರು ಯುವಕ ಸಂಘದ ಅಧ್ಯಕ್ಷ ದೀಕ್ಷಿತ್. ವಿ. ದೇವಾಡಿಗ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಶೆಟ್ಟಿಗಾರ್ ಸ್ವಾಗತಿಸಿದರು. ಉಪಾಧ್ಯಕ್ಷ ಸತೀಶ್ ಕೊಡವೂರು ನಿರೂಪಿಸಿದರು. ಕೋಶಾಧಿಕಾರಿ ಸಂದೇಶ್ ಕೋಟ್ಯಾನ್ ವಂದಿಸಿದರು.
