ಉಡುಪಿ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟಗಳಂತಹ ದಟ್ಟ ಕಾಡುಗಳಲ್ಲಿ ಕಾಣ ಸಿಗುವ ಕಾಳಿಂಗ ಸರ್ಪಗಳು ಜಗತ್ತಿನ ಅತ್ಯಂತ ಉದ್ದವಾದ ವಿಷಕಾರಿ ಸರ್ಪ. ಈವರೆಗೆ ಜಗತ್ತಿನಲ್ಲಿ ಕಾಳಿಂಗ ಸರ್ಪ ಎಂಬುದು ಕೇವಲ ಒಂದೇ ಪ್ರಬೇಧಕ್ಕೆ ಸೇರಿದ ಹಾವು ಎಂಬುದು ಅಧಿಕೃತವಾಗಿತ್ತು. ಆದರೆ ಇತ್ತೀಚೆಗೆ ಕಾಳಿಂಗ ಸರ್ಪ ಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಡಾ.ಪಿ.ಗೌರಿಶಂಕರ್ ನಡೆಸಿದ ಸಂಶೋಧನೆ ಯಲ್ಲಿ ಜಗತ್ತಿನಲ್ಲಿ ಒಂದಲ್ಲ, ಎರಡಲ್ಲ ಒಟ್ಟು ನಾಲ್ಕು ಪ್ರಬೇಧದ ಕಾಳಿಂಗ ಸರ್ಪಗಳಿವೆ ಎಂಬುದಾಗಿ ಸಾಬೀತುಪಡಿಸಿದ್ದಾರೆ.
ಪೂರ್ವ, ಪಶ್ಚಿಮಘಟ್ಟಗಳ ಮಳೆಕಾಡುಗಳು ಮತ್ತು ಅಂಡಮಾನ್ ದ್ವೀಪ, ಉತ್ತರ ಭಾರತದ(ಉತ್ತರಾಖಂಡ) ಮತ್ತು ಹಿಮಾಲಯದ ತಪ್ಪಲಿನಲ್ಲಿ, ಪೂರ್ವ ಈಶಾನ್ಯ ಭಾರತದಿಂದ ದಕ್ಷಿಣ ಚೀನಾದವರೆಗೆ, ಆಗ್ನೇಯಕ್ಕೆ ಮ್ಯಾನ್ಮಾರ್, ಥೈಲ್ಯಾಂಡ್, ವಿಯೆಟ್ನಾಂ, ಪೆನಿನ್ಸುಲರ್ ಮಲೇಷ್ಯಾ, ಸುಮಾತ್ರಾ, ಬೊರ್ನಿಯೊ, ಜಾವಾ, ಬಾಲಿ, ಸುಲವೆಸಿ ಮತ್ತು ಪೂರ್ವದಲ್ಲಿ ಫಿಲಿಪೈನ್ಸ್‌ನ ಮಿಂಡಾನಾವೊವರೆಗೆ ಕಾಳಿಂಗ ಸರ್ಪಗಳನ್ನು ಕಾಣಬಹುದಾಗಿದೆ.
ದಕ್ಷಿಣ ಮತ್ತು ಅನ್ನೇಯ ಏಷ್ಯಾದ ದಟ್ಟ ಕಾಡುಗಳಲ್ಲಿ ವಾಸಿಸುವ ಈ ಕಾಳಿಂಗ ಸರ್ಪವನ್ನು 1836ರಲ್ಲಿ ಕ್ಯಾಂಟರ್ ಸಂಶೋಧನೆ ಮಾಡಿ, ಓಫಿಯೋಫೆಗಸ್ ಹ್ಯಾನಾ ಎಂಬುದಾಗಿ ನಾಮಕರಣ ಮಾಡಿದ್ದರು. ಕಾಳಿಂಗ ಸರ್ಪಗಳು ತಮ್ಮ ಏಕರೂಪತೆಯಿಂದ ಪ್ರಪಂಚದಾದ್ಯಂತ ಒಂದೇ ಪ್ರಭೇದ ಎಂಬುದಾಗಿ ಈವರೆಗೆಯೂ ಭಾವಿಸಲಾಗಿತ್ತು.
ಕಡಿತವೇ ಸಂಶೋಧನೆಗೆ ದಾರಿ:
ವನ್ಯಜೀವಿ ಶಾಸ್ತ್ರಜ್ಞ ಡಾ.ಪಿ.ಗೌರಿ ಶಂಕರ್ ಕಳೆದ 2 ದಶಕದ ನಿರಂತರ ಹಾವಿನ ಒಡನಾಟ ಮಾತ್ರವಲ್ಲದೆ, ಸುಮಾರು 500ಕ್ಕೂ ಹೆಚ್ಚಿನ ಕಾಳಿಂಗ ಸರ್ಪಗಳನ್ನು ಸೆರೆಯಲ್ಲಿ ಹಾಗೂ ಕಾಡಿನಲ್ಲಿ ಅಧ್ಯಾಯನ ಮಾಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಕಾಳಿಂಗ ಸರ್ಪಗಳ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. 50ಕ್ಕೂ ಅಧಿಕ ಕಾಳಿಂಗ ಸರ್ಪಗಳ ಗೂಡನ್ನು ಸಂರಕ್ಷಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಆಗುಂಬೆ ಅರಣ್ಯದಲ್ಲಿ ಕಾಳಿಂಗ ಸರ್ಪಗಳ ರಕ್ಷಣೆ ಮಾಡುವ ಸಂದರ್ಭ ಡಾ.ಗೌರಿ ಶಂಕರ್ ಕೈಗೆ ಹಾವು ಸಣ್ಣ ಪ್ರಮಾಣದಲ್ಲಿ ಕಚ್ಚಿತ್ತೆನ್ನಲಾಗಿದೆ. ಇವರು ಮುನ್ನೆಚ್ಚರಿಕೆಯಾಗಿ ತನ್ನ ಬಳಿ ಥ್ಲಾಯೆಂಡ್ ದೇಶದ ಕಾಳಿಂಗ ಸರ್ಪ ಕಚ್ಚಿದರೆ ಬಳಸುವ ಆ್ಯಂಟಿ ವೆನಮ್(ವಿಷ ನಿರೋಧಕ) ಔಷಧಿಯನ್ನು ಇಟ್ಟುಕೊಂಡಿದ್ದರು.
ಆದರೆ ತೀವ್ರವಾಗಿ ಅಸ್ವಸ್ಥಗೊಂಡ ಇವರಿಗೆ ಈ ಆ್ಯಂಟಿ ವೆನಮ್ ಪ್ರಯೋಗಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಆದರೂ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ಗೌರಿ ಶಂಕರ್ ಈ ಬಗ್ಗೆ ಚಿಂತನೆ ನಡೆಸಿದರು. ಈ ಔಷಧಿ ಯಾಕಾಗಿ ಪ್ರಯೋಜನ ಆಗಿಲ್ಲ ಎಂಬ ಇವರ ಪ್ರಶ್ನೆ ಈ ಸಂಶೋಧನೆಗೆ ನಾಂದಿಯಾಯಿತು. ಆಗ ಗೊತ್ತಾಯಿತು ಇಲ್ಲಿರುವ ಕಾಳಿಂಗ ಸರ್ಪ ಬೇರೆ ಪ್ರಬೇಧಕ್ಕೆ ಸೇರಿರುವುದು ಎಂಬುದು. ಆ ಜಾಡು ಹಿಡಿದುಕೊಂಡು ಅವರು ಸಂಶೋಧನೆಗೆ ಮುಂದಾದರು.
ಪಿಎಚ್‌ಡಿಗಾಗಿ ಅಧ್ಯಯನ:
ಡಾ.ಗೌರಿ ಶಂಕರ್ ಜಗತ್ತಿನಲ್ಲಿ ಹರಡಿರುವ ಈ ಪ್ರಭೇದವನ್ನು ಗಮನಿಸಿ ಕಾಳಿಂಗ ಸರ್ಪಗಳಲ್ಲಿ ಬೇರೆ ಬೇರೆ ಪ್ರಭೇದಗಳಿರಬಹುದೆಂದು ತಿಳಿದು ಕೊಂಡರು. ಈ ಬಗ್ಗೆ ಹಲವಾರು ವಿಜ್ಞಾನಿಗಳು ಮೊದಲೇ ಹೇಳಿದ್ದರೂ ಯಾರು ಕೂಡ ಅದನ್ನು ವೈಜ್ಞಾನಿಕವಾಗಿ ಸಾಬೀತು ಮಾಡಿರುವುದಿಲ್ಲ. ಹೀಗಾಗಿ ಗೌರಿ ಶಂಕರ್ ಅದರ ಜಾಡು ಹಿಡಿದು ಇಡೀ ಜಗತ್ತು ಸುತ್ತಿದರು.
ಇದನ್ನೇ ತಮ್ಮ ಪಿಎಚ್‌ಡಿ(ಸ್ವೀಡನ್ ವಿಶ್ವವಿದ್ಯಾಲಯ) ವಿಷಯವಾಗಿಸಿ ಕೊಂಡ ಅವರು, 2012ರಲ್ಲಿ ಅಧ್ಯಯನವನ್ನು ನಡೆಸಲು ಯೋಜಿಸಿ ಮತ್ತು ಅದನ್ನು ಕಾರ್ಯಗತಗೊಳಿಸಲು ವಿವಿಧ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲ ಯಗಳೊಂದಿಗೆ ಸಂಪರ್ಕ ಸಾಧಿಸಿದರು. ನಿರಂತರ 10ವರ್ಷಗಳ ಅಧ್ಯಯನ ದಿಂದ ಅವರು 185 ವರ್ಷಗಳ ನಂತರದ ಒಂದು ಐತಿಹಾಸಿಕ ದಾಖಲೆ ನಿರ್ಮಿಸಿದರು.
4 ಪ್ರಬೇಧಗಳಿಗೆ ನಾಮಕರಣ:
ಡಾ.ಗೌರಿ ಶಂಕರ್ ವಿಶ್ವದಾದ್ಯಂತ ಇರುವ ಕಾಳಿಂಗ ಸರ್ಪಗಳು ನಾಲ್ಕು ಬೇರೆ ಬೇರೆ ಪ್ರಭೇದಗಳೆಂಬುದನ್ನು ತಮ್ಮ ಸಂಶೋಧನೆ ಮೂಲಕ ಮಂಡಿಸಿದರು.
ಪೂರ್ವ ಪಾಕಿಸ್ತಾನ, ಉತ್ತರ ಮತ್ತು ಪೂರ್ವ ಭಾರತ, ಅಂಡಮಾನ್ ದ್ವೀಪಗಳು, ಇಂಡೋ-ಬರ್ಮಾ, ಇಂಡೋ-ಚೀನಾ ಮತ್ತು ಥೈಲ್ಯಾಂಡ್‌ಗೆ ಸೀಮಿತವಾದ ಉತ್ತರ ಕಾಳಿಂಗ ಸರ್ಪಕ್ಕೆ ‘ಓಫಿಯೋಫೆಗಸ್ ಹ್ಯಾನಾ’, ಮಲಯ ಪೆನಿನ್ಸುಲಾ, ಗ್ರೇಟರ್ ಸುಂದಾ ದ್ವೀಪಗಳು ಮತ್ತು ದಕ್ಷಿಣ ಫಿಲಿಪೈನ್ಸ್‌ನ ಭಾಗಗಳನ್ನು ಒಳಗೊಂಡಂತೆ ಸುಂದಾ ಶೆಲ್ಫ್ ಪ್ರದೇಶದಲ್ಲಿ ವಾಸಿಸುವ ಸುಂದ ಕಾಳಿಂಗ ಸರ್ಪಗಳಿಗೆ ಓಫಿಯೋಫೆಗಸ್ ಬಂಗರಸ್, ನೈಋತ್ಯ ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿ ಕಂಡು ಬರುವ ಪಶ್ಚಿಮ ಘಟ್ಟಗಳ ಕಾಳಿಂಗ ಸರ್ಪಗಳಿಗೆ ಓಫಿಯೋಫೆಗಸ್ ಕಾಳಿಂಗ ಹಾಗೂ ಉತ್ತರ ಫಿಲಿಫೈನ್ಸ್‌ನ ಲುಜಾನ್‌ನಲ್ಲಿ ವಾಸಿಸುವ ಲುಜಾನ್ ಕಾಳಿಂಗ ಸರ್ಪಗಳಿಗೆ ಓಫಿಯೋಫೆಗಸ್ ಸಾಲ್ವತಾನ ಎಂದು ಹೆಸರನ್ನು ಇಡಲಾಯಿತು.
ಪ್ರಬೇಧಗಳಲ್ಲಿನ ವ್ಯಾತ್ಯಾಸಗಳು:
ಈ ನಾಲ್ಕು ಪ್ರಬೇಧಗಳ ಬಣ್ಣದ ಮಾದರಿಗಳಲ್ಲಿ, ಪಟ್ಟೆಗಳಲ್ಲಿ, ಕೆಲವು ಮಾಪಕಗಳು ಮತ್ತು ದೇಹದ ಅನುಪಾತಗಳಲ್ಲಿ ವ್ಯತ್ಯಾಸಗಳನ್ನು ಗಮನಿಸ ಬಹುದಾಗಿದೆ. ಅನುವಂಶಿಕ(ಡಿಎನ್‌ಎ) ಮಟ್ಟದಲ್ಲಿ ಅವುಗಳ ನಡುವಿನ ವ್ಯತ್ಯಾಸಗಳು ಸುಮಾರು ಶೇ.1-4ರಷ್ಟಿದೆ.
ಕಾಳಿಂಗ ಪ್ರಬೇಧವು 40ಕ್ಕಿಂತ ಕಡಿಮೆ ಪಟ್ಟೆಗಳನ್ನು ಹೊಂದಿದ್ದರೆ, ಹ್ಯಾನಾ 50-70 ಪಟ್ಟಿಗಳನ್ನು ಹೊಂದಿದೆ. ಅದೇ ರೀತಿ ಬಂಗರಸ್ 70ಕ್ಕೂ ಹೆಚ್ಚು ಪಟ್ಟಿಗಳನ್ನು ಹೊಂದಿದೆ ಮತ್ತು ಸಾಲ್ವತಾನ ಪ್ರಭೇದಗಳು ಯಾವುದೇ ಪಟ್ಟಿಗಳನ್ನು ಹೊಂದಿಲ್ಲ ಎಂಬುದನ್ನು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.
ಅಪಾಯದ ಅಂಚಿನಲ್ಲಿರುವ ಪ್ರಬೇಧ!
ಪ್ರಸ್ತುತ ಕಾಳಿಂಗ ಸರ್ಪಗಳನ್ನು ಐಯುಸಿಎನ್(ಇಂಟರ್‌ನ್ಯಾಶನಲ್ ಯೂನಿಯನ್ ಫಾರ್ ಕನರ್ಸವೇಶನ್ ಆಫ್ ನೇಚರ್) ಅಪಾಯದ ಅಂಚಿನಲ್ಲಿರುವ ಪ್ರಬೇಧ ಎಂಬುದಾಗಿ ಕೆಂಪು ಪಟ್ಟಿಯಲ್ಲಿ ‘ದುರ್ಬಲ’ ಎಂಬುದಾಗಿ ವರ್ಗಿಕರಿಸಲಾಗಿದೆ.
ಆವಾಸ ಸ್ಥಾನ ನಾಶ, ಚರ್ಮದ ವ್ಯಾಪಾರ, ಆಹಾರ, ಔಷಧ ಮತ್ತು ಸಾಕುಪ್ರಾಣಿ ವ್ಯಾಪಾರವು ಕಾಳಿಂಗ ಸರ್ಪಗಳ ಸಂತತಿಗೆ ಕಂಟಕವಾಗಿದೆ. ಯಾವ ಪ್ರಭೇದದ ಕಾಳಿಂಗ ಸರ್ಪಗಳ ಬಗ್ಗೆ ತಕ್ಷಣದಲ್ಲಿ ಅಧ್ಯಯನ ನಡೆಸಬೇಕು ಎಂದು ನಿರ್ಣಯಿಸಿ, ಸಂರಕ್ಷಣಾ ಕ್ರಮಗಳನ್ನು ಅನುಷ್ಠಾನ ಮಾಡಬೇಕಾಗಿದೆ. ಕಾಳಿಂಗ ಸರ್ಪಗಳ ಸಂರಕ್ಷಣೆಗಾಗಿ ಸಂರಕ್ಷಣಾ ಸ್ಥಿತಿಯನ್ನು ಮರುಪರಿಶೀಲಿಸಿ ಮತ್ತು ನಿರ್ವಹಣಾ ಯೋಜನೆಗಳನ್ನು ಸಿದ್ಧಪಡಿಸಬೇಕಾಗಿದೆ ಎನ್ನುತ್ತಾರೆ ಡಾ.ಗೌರಿ ಶಂಕರ್.
‘ಕೆಂಪು ಪಟ್ಟಿಯಲ್ಲಿರುವುದರಿಂದ ಈ ಬಗ್ಗೆ ನಾವು ಸರಕಾರಕ್ಕೆ ಬರೆಯುತ್ತಿದ್ದೇವೆ. ಆಗುಂಬೆ ಮತ್ತು ಪಿಲಿಫೈನ್ಸ್ ಎರಡೂ ಪ್ರಬೇಧವೂ ಅಳಿವಿನ ಅಂಚಿನಲ್ಲಿದೆ. ಈ ಬಗ್ಗೆ ಇಡೀ ಜಗತ್ತು ಎಚ್ಚೆತ್ತುಕೊಳ್ಳಬೇಕು. ಹವಮಾನದಲ್ಲಿ ಸಣ್ಣ ಬದಲಾವಣೆ ಯಾದರೂ ಕಪ್ಪೆ ಬದುಕಲ್ಲ, ಕಪ್ಪೆ ಇಲ್ಲದಿದ್ದರೆ ಹಾವು ಬದುಕಲ್ಲ, ಹಾವು ಇಲ್ಲದಿದ್ದರೆ ಅದನ್ನು ತಿನ್ನುವ ಕಾಳಿಂಗ ಸರ್ಪಗಳು ಉಳಿಯಲ್ಲ ಎಂದು ಅವರು ತಿಳಿಸಿದರು.
ಪಶ್ಚಿಮಘಟ್ಟದ ಪ್ರಬೇಧಕ್ಕೆ ಕನ್ನಡ ಹೆಸರು ನಾಮಕರಣ:
ಕಳೆದ 185ವರ್ಷಗಳಿಂದ ಇಡೀ ಜಗತ್ತಿನ ಎಲ್ಲ ಕಾಳಿಂಗ ಸರ್ಪಗಳಿಗೆ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಹ್ಯಾನಾ’ ಎಂಬುದಿತ್ತು. ಇದೀಗ ಗೌರಿ ಶಂಕರ್ ಕಾಳಿಂಗ ಸರ್ಪಗಳಲ್ಲಿ ನಾಲ್ಕು ಪ್ರಬೇಧಗಳಿವೆ ಎಂಬುದನ್ನು ಸಾಬೀತು ಪಡಿಸಿರುವುದರಿಂದ ಇವುಗಳಲ್ಲಿ ಪಶ್ಚಿಮಘಟ್ಟದ ಒಂದು ಪ್ರಬೇಧಕ್ಕೆ ಅವರು ‘ಓಫಿಯೋಫೆಗಸ್ ಕಾಳಿಂಗ’ ಎಂಬುದಾಗಿ ನಾಮಕರಣ ಮಾಡಿದರು.
ಕಾಳಿಂಗ ಎಂಬ ಪದ ಕನ್ನಡ ಆಗಿದ್ದು, ಕರ್ನಾಟಕದಲ್ಲಿ ಮಾತ್ರ ಈ ಹೆಸರಿನಿಂದ ಕರೆಯಲಾಗುತ್ತಿತ್ತು. ಅದೇ ರೀತಿ ತಮಿಳುನಾಡಿನಲ್ಲಿ ರಾಜ ನಾಗಮ್, ಕೇರಳ ಮುರುಗನ್ ಹೀಗೆ ಬೇರೆ ಬೇರೆ ಕಡೆ ಸ್ಥಳೀಯವಾಗಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಇದೀಗ ಇಲ್ಲಿ ಎಲ್ಲ ಸಿಗುವ ಒಂದೇ ಪ್ರಬೇಧಕ್ಕೆ ಕಾಳಿಂಗ ಎಂಬುದಾಗಿ ನಾಮಕರಣ ಮಾಡಲಾಗಿದೆ. ಇನ್ನು ಮುಂದೆ ತಮಿಳುನಾಡು, ಕೇರಳ, ಗೋವಾ ಸೇರಿದಂತೆ ಎಲ್ಲರೂ ಕೂಡ ಪಶ್ಚಿಮಘಟ್ಟ ಗಳಲ್ಲಿ ಸಿಗುವ ಈ ಪ್ರಬೇಧವನ್ನು ವೈಜ್ಞಾನಿಕವಾಗಿ ಕಾಳಿಂಗ ಎಂಬುದಾಗಿಯೇ ಸಂಬೋಧಿಸಬೇಕು.
‘ಇದು ಕನ್ನಡಿಗರು ಹೆಮ್ಮೆ ಪಡುವ ವಿಚಾರ. ಕನ್ನಡಿಗನಾಗಿ ನಾನು ಸಂಶೋಧಿಸಿರುವ ಪ್ರಬೇಧಕ್ಕೆ ವಿದೇಶದ ಹೆಸರು ಯಾಕೆ ಇಡಬೇಕು. ನಮ್ಮದೆ ಭಾಷೆಯನ್ನು ಬಳಸಿ ವೈಜ್ಞಾನಿಕ ಹೆಸರು ಇಡಬಹುದು ಎಂದು ಯೋಚನೆ ಮಾಡಿದೆ. ನಮ್ಮ ಕರ್ನಾಟಕದ ಮಲೆನಾಡಿನಲ್ಲಿ ಹಾವಿನ ಬಗ್ಗೆ ಇರುವ ಭಕ್ತಿ ಪ್ರೀತಿ ಬೇರೆ ಎಲ್ಲೂ ಸಿಗಲು ಸಾಧ್ಯವಿಲ್ಲ. ಹಾಗಾಗಿ ನಾನು ಇದಕ್ಕೆ ಕಾಳಿಂಗ ಎಂಬುದಾಗಿ ನಾಮಕರಣ ಮಾಡಿದೆ’ ಎಂದು ಗೌರಿಶಂಕರ್ ತಿಳಿಸಿದರು.
ಫಿಲಿಫೈನ್ಸ್‌ಗೆ ಮಾದರಿಯಾದ ಕರ್ನಾಟಕ:
ಪಿಲಿಫೈನ್ಸ್‌ನಲ್ಲಿರುವ ಕಾಳಿಂಗ ಸರ್ಪಕ್ಕೂ ಯಾವುದೇ ಹೆಸರು ಇರಲಿಲ್ಲ. ಅಲ್ಲಿರುವುದು ಬೇರೆಯೇ ಪ್ರಬೇಧ ಎಂಬುದು ಸಾಬೀತಾಗಿರುವುದರಿಂದ ಅದಕ್ಕೆ ಡಾ.ಗೌರಿ ಶಂಕರ್ ಅಲ್ಲಿ ಸ್ಥಳೀಯವಾಗಿ ಕರೆಯುವ ಸಾಲ್ವತಾನ ಎಂದು ನಾಮಕರಣ ಮಾಡಿದ್ದಾರೆ.
ನಮ್ಮಲ್ಲಿ ಕಾಳಿಂಗ ಸರ್ಪವನ್ನು ಪೂಜಿಸಿದರೆ ಪಿಲಿಫೈನ್ಸ್‌ನವರು ಅದನ್ನು ಕೊಲ್ಲುತ್ತಾರೆ. ಇದರಿಂದ ಅಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೀಗ ಎಚ್ಚೆತ್ತುಕೊಂಡಿರುವ ಅಲ್ಲಿನ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಹಾವನ್ನು ಸಾಯಿಸದೇ ಪೂಜಿಸಿ ರಕ್ಷಣೆ ಮಾಡುವಂತೆ ನಾವು ಕೂಡ ರಕ್ಷಣೆ ಮಾಡಬೇಕು ಎಂದು ಹೇಳಿದೆ. ಈ ಮೂಲಕ ಅಲ್ಲಿನ ಸರಕಾರ ಕರ್ನಾಟಕವನ್ನು ಮಾದರಿಯಾಗಿ ತೆಗೆದುಕೊಂಡು ನನ್ನ ಸಲಹೆಗಳನ್ನು ಪಡೆದು ಕೊಳ್ಳುತ್ತಿದೆ ಎಂದು ಡಾ.ಗೌರಿ ಶಂಕರ್ ತಿಳಿಸಿದ್ದಾರೆ.
ಔಷಧಿ ಕಂಡುಹಿಡಿಯುವುದು ಅಗತ್ಯ:
ಕಾಳಿಂಗ ಸರ್ಪ ಕಚ್ಚುವುದು ತುಂಬಾ ಕಡಿಮೆ. ಅಕಸ್ಮಿಕವಾಗಿ ಕೆಲವೊಮ್ಮೆ ಕಚ್ಚಿದ ಉದಾಹರಣೆಗಳಿವೆ. ಹಾಗಾಗಿ ಅದಕ್ಕೆ ಔಷಧಿ ಕಂಡು ಹಿಡಿದಿರಲಿಲ್ಲ. ಕಾಳಿಂಗ ಸರ್ಪದ ವಿಷ ನಾಗರಹಾವಿಗಿಂತ ಎಂಟು ಪಟ್ಟು ಜಾಸ್ತಿ. ಆದುದರಿಂದ ಕಾಳಿಂಗ ಸರ್ಪ ಕಚ್ಚಿದರೂ ಪ್ರಾಣ ಉಳಿಸುವ ನಿಟ್ಟಿನಲ್ಲಿ ಆ್ಯಂಟಿ ವೆನಮ್ ಔಷಧಿ ಕಂಡು ಹುಡುಕುವುದು ಅತೀ ಅಗತ್ಯ.
ಈ ಕುರಿತು ಸರಕಾರ ಮನವಿ ಮಾಡಲಾಗುವುದು. ಸರಕಾರ ಪ್ರಾಯೋಜಕತ್ವ ದಲ್ಲಿ ಔಷಧಿ ತಯಾರಿಸಿ ಅಗತ್ಯ ಇರುವಲ್ಲಿ ಇಟ್ಟರೇ ತುರ್ತು ಸಂದರ್ಭದಲ್ಲಿ ಬಳಸಿ ಜನರ ಪ್ರಾಣ ಉಳಿಸಬಹುದಾಗಿದೆ ಎಂದು ಡಾ.ಗೌರಿ ಶಂಕರ್ ತಿಳಿಸಿದ್ದಾರೆ.
‘ಕಾಳಿಂಗ ಸರ್ಪಗಳ ಬಗ್ಗೆ ನಮ್ಮ ಆಗುಂಬೆಯಲ್ಲಿರುವ ಕಾಳಿಂಗ ಫೌಂಡೇಶನ್ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕೆಂಬ ಉದ್ದೇಶದಿಂದ ಮಣಿಪಾಲ ಮಾಹೆ ಜೊತೆ ನಮ್ಮ ಫೌಂಡೇಶನ್ ಒಪ್ಪಂದ ಮಾಡಿಕೊಂಡು ಪಿಎಚ್‌ಡಿ ಆರಂಭಿಸುವ ಚಿಂತನೆ ಇದೆ. ನಾನು ಸಂಶೋಧಿಸಿರುವ ನಾಲ್ಕು ಪ್ರಬೇಧಗಳ ಜೀವನ ಕ್ರಮ ಬೇರೆ ಬೇರೆ ಇದೆಯೇ ಎಂಬುದರ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಕರ್ನಾಟಕದಲ್ಲಿ ಸಂಶೋಧನೆ ಮಾಡಿದಂತೆ ಬೇರೆ ಕಡೆಗಳಲ್ಲಿ ಈ ಸರ್ಪಗಳ ಬಗ್ಗೆ ಆಳವಾದ ಅದ್ಯಯನ ಆಗಿಲ್ಲ ಎನ್ನುತ್ತಾರೆ ಡಾ.ಗೌರಿ ಶಂಕರ್.
-ನಝೀರ್ ಪೊಲ್ಯ

0 ಕಾಮೆಂಟ್‌ಗಳು